ಕಾಡಿನಲ್ಲಿದ್ದ ಚಿರತೆಯನ್ನು ಬಲೆ ಹಾಕಿ ಹಿಡಿದು ಕೊಂದು ತಿಂದ ಪಾಪಿಗಳು!

leopard
Published on

ತಿರುವನಂತಪುರಂ: ತಮಿಳುನಾಡಿನ ಊಟಿಯಲ್ಲಿ ದುಷ್ಕರ್ಮಿಗಳು ಆನೆಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆಯ ಬೆನ್ನಲ್ಲೇ ಮತ್ತೊಂದು ಮೂಕ ಪ್ರಾಣಿಯ ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ವರದಿಯಾಗಿದೆ. ಕಾಡಿನಲ್ಲಿ ಓಡಾಡಿಕೊಂಡಿದ್ದ ಚಿರತೆಯನ್ನು ಬಲೆ ಹಾಕಿ ಹಿಡಿದ ಪಾಪಿಗಳು ಅದರ ಮಾಂಸವನ್ನೂ ತಿಂದು ತೇಗಿದ್ದಾರೆ.

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಇಂತದ್ದೊಂದು ಕ್ರೂರ ಘಟನೆ ನಡೆದಿದೆ. ವಿನೋದ್​ ಹೆಸರಿನ ವ್ಯಕ್ತಿಯ ಹೊಲದಲ್ಲಿ ಬಲೆ ಹಾಕಿಡಲಾಗಿದೆ. ಆ ಬಲೆಗೆ ಚಿರತೆ ಸಿಕ್ಕುಬಿದ್ದಿದೆ. ಅದನ್ನು ಕಂಡ ವಿನೋದ್​, ತಕ್ಷಣ ತನ್ನ ಸ್ನೇಹಿತರಾದ ಕುರಿಕೋಸ್, ಬೀನು, ಕುಂಜಪ್ಪನ್​ನನ್ನು ಕರೆಸಿಕೊಂಡಿದ್ದಾನೆ. ಎಲ್ಲರು ಒಟ್ಟಾಗಿ ಸೇರಿ ಚಿರತೆಯನ್ನು ಕೊಂದಿದ್ದಾರೆ. ಸುಮಾರು 50 ಕೆಜಿ ತೂಕವಿದ್ದ ಚಿರತೆಯ ಮಾಂಸವನ್ನು ಅಡುಗೆ ಮಾಡಿಕೊಂಡು ತಿಂದಿದ್ದಾರೆ. ಅದರ ಚರ್ಮ, ಉಗುರು, ಹಲ್ಲನ್ನು ತೆಗೆದಿಟ್ಟುಕೊಂಡಿದ್ದಾರೆ. ಅದನ್ನೆಲ್ಲ ಮಾರಾಟ ಮಾಡಿ ಹಣ ಸಂಪಾದಿಸುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.

ಈ ವಿಚಾರ ಅರಣ್ಯಾಧಿಕಾರಿಗಳಿ ತಿಳಿದುಬಂದಿದ್ದು, ತಕ್ಷಣವೇ ಆರೋಪಿಗಳನ್ನು ಬಂಧಿಸಲಾಗಿದೆ. ಅವರ ಬಳಿ ಇದ್ದ 10 ಕೆಜಿ ಚಿರತೆ ಮಾಂಸ, ಅದರ ಹಲ್ಲು, ಉಗುರು ಮತ್ತು ಚರ್ಮವನ್ನು ವಶ ಪಡಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net