

ಕೆಲವೊಮ್ಮೆ ರಸ್ತೆಗಳಲ್ಲಿ ಪ್ರಾಣಿಗಳು ಹಾದು ಹೋಗುತ್ತಿರುತ್ತವೆ. ಹೀಗೆ ವಾಹನಗಳು ಓಡಾಡುತ್ತಿರುವ ರಸ್ತೆಯಲ್ಲಿ ಕಾಡು ಪ್ರಾಣಿಗಳು ಅಡ್ಡಲಾಗಿ ಬಂದಾಗ ಅಪಘಾತ ಸಂಭವಿಸುತ್ತವೆ. ಅದೇ ರೀತಿಯ ಅಪಘಾತದಲ್ಲಿ ಕಾರೊಂದು ಚಿರತೆಗೆ ಗುದ್ದಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರಿಗೆ ಡಿಕ್ಕಿಯಾದ ಚಿರತೆಯೊಂದನ್ನು ವಿಡಿಯೋದಲ್ಲಿ ಕಾಣಬಹುದು. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗವೂ ಸಂಪೂರ್ಣ ಜಖಂಗೊಂಡಿದೆ. ಕಾರಿನ ಬಾನೆಟ್ ಬಂಪರ್ ಅಡಿಯಲ್ಲಿ ಚಿರತೆಯ ಅರ್ಧ ಭಾಗ ಸಿಕ್ಕಿಹಾಕಿಕೊಂಡಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ಇಷ್ಟಾದ ಮೇಲೆ ಚಿರತೆ ಬದುಕಿ ಉಳಿಯುವುದು ಕಷ್ಟ ಎಂದೇ ಅಲ್ಲಿದ್ದವರು ಭಾವಿಸಿದಂತಿದೆ. ಆ ಚಿರತೆ ಕಾರಿನಲ್ಲಿ ಸಿಲುಕಿ ಹಾಕಿಕೊಂಡಿರುವುದನ್ನು ನೋಡಿದರೆ ಎಂಥವರಿಗೂ ಕರುಳು ಚುರುಕೆನ್ನುತ್ತದೆ. ಈ ಸಂದರ್ಭದಲ್ಲಿ ಕಾರಿನ ಚಾಲಕ ಕಾರಿನ ರಿವರ್ಸ್ ಗೇರ್ ಹಾಕಿದ್ದಾನೆ. ಕೂಡಲೇ ಆಗ ಚಿರತೆ ಕಾರಿನಿಂದ ಚಂಗನೆ ಜಿಗಿದು ಕಾಡಿನತ್ತ ಓಡಿದೆ.
ಈ ವೈರಲ್ ವಿಡಿಯೋವನ್ನು ಬಾಲಿವುಡ್ ನಟಿ ರವೀನಾ ಟಂಡನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.