

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಜೀವನವನ್ನು ಬಚಾವ್ ಮಾಡಿದ್ದು ಕರ್ನಾಟಕದ ಜನತೆಯೇ ಹೊರತು ಕೆ.ಸಿ.ವೇಣುಗೋಪಾಲ್ ಅಲ್ಲ. ಈಗ ಮುಖ್ಯಮಂತ್ರಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ತಮ್ಮ ಕುರ್ಚಿ ಉಳಿಸಿಕೊಳ್ಳಲು ಕೆ.ಸಿ.ವೇಣುಗೋಪಾಲ್ ಮೂಲಕ ರಾಹುಲ್ ಗಾಂಧಿ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂದು ಸಂಸದ ಲೆಹರ್ ಸಿಂಗ್ ಸಿರೋಯಾ ವ್ಯಂಗ್ಯವಾಡಿದ್ದಾರೆ.
ಯಾವ ಕಡೆ ಬೆಣ್ಣೆ ಇದೆ ಎನ್ನುವುದು ಸಿದ್ದರಾಮಯ್ಯನವರಿಗೆ ಗೊತ್ತಿದೆ. ಬ್ರೆಡ್ಡಿಗೆ ಯಾವ ಕಡೆ ಬೆಣ್ಣೆ ಹಚ್ಚಲಾಗಿದೆ ಎಂಬುದು ಚೆನ್ನಾಗಿ ಗೊತ್ತಿದೆ. ತಮ್ಮ ರಾಜಕೀಯ ಬದುಕನ್ನು ಉಳಿಸಿದ್ದಕ್ಕಾಗಿ ಕೆ.ಸಿ.ವೇಣುಗೋಪಾಲ್ ಅವರಿಗೆ ಧನ್ಯವಾದ ಸಲ್ಲಿಸಿರುವುದು ವರದಿಯಾಗಿದೆ. ಈಗ ತಮ್ಮ ಕುರ್ಚಿ ಉಳಿಸಿಕೊಳ್ಳಲು ವೇಣುಗೋಪಾಲ್ ಮೂಲಕ ರಾಹುಲ್ ಗಾಂಧಿ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿರುವಂತೆ ಕಾಣುತ್ತಿದೆ ಎಂದಿದ್ದಾರೆ.
ಎಐಸಿಸಿಸ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗಿಂತ ವೇಣುಗೋಪಾಲ್ ರಾಹುಲ್ ಗಾಂಧಿ ಮೇಲೆ ಹೆಚ್ಚಿನ ಪ್ರಭಾವ ಹೊಂದಿದ್ದಾರೆ ಎಂದು ಸ್ವತಃ ಕಾಂಗ್ರೆಸ್ಸಿಗರೇ ಹೇಳುತ್ತಾರೆ. ತಮ್ಮ ರಾಜಕೀಯ ಬದುಕು ರೂಪಿಸಿದ ಎಚ್.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆಯಂಥವರಿಗೆ ಯಾವತ್ತೂ ಮನ್ನಣೆ ನೀಡದ ಮುಖ್ಯಮಂತ್ರಿಗಳು, ಇಂದು ವೇಣುಗೋಪಾಲ್‌ಗೆ ಧನ್ಯವಾದ ಹೇಳುತ್ತಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಅವಮಾನವಲ್ಲದೆ ಬೇರೇನೂ ಅಲ್ಲ ಎಂದು ಕುಟುಕಿದ್ದಾರೆ.
ಕನಿಷ್ಠ ಪಕ್ಷ 2018ರಲ್ಲಿ ಮೈಸೂರಿನ ಜನರಿಂದ ತಾವು ತಿರಸ್ಕೃತವಾಗಲಿರುವುದು ವೇಣುಗೋಪಾಲ್‌ಗೆ ಗೊತ್ತಿತ್ತು ಎನ್ನುವುದುನ್ನು ಸಿದ್ದರಾಮಯ್ಯನವರು ಒಪ್ಪಿಕೊಂಡಿದ್ದಾರೆ ಎಂದು ಲೇವಡಿ ಮಾಡಿರುವ ಅವರು ಈಗ ಮುಡಾ ಪ್ರಕರಣದಲ್ಲಿಯೂ ಕೂಡ ಮೈಸೂರಿನ ಜನತೆ ಸಿದ್ದರಾಮಯ್ಯನವರನ್ನು ಮತ್ತೊಮ್ಮೆ ತಿರಸ್ಕರಿಸಲಿದ್ದಾರೆ. ಅವರು ಎಷ್ಟು ಒತ್ತಡಕ್ಕೆ ಒಳಗಾಗಿದ್ದಾರೆನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈಗಲೂ ಕಾಲ ಮಿಂಚಿಲ್ಲ. ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಆಗ್ರಹಿಸಿದ್ದಾರೆ.
ಉಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಯಾರೇ ಓದಲಿ, ಅದು ಎಷ್ಟು ದೊಡ್ಡ ಹಗರಣ ಎನ್ನುವ ಕುರಿತು ಯಾವ ಸಂದೇಹವೂ ಉಳಿಯುವುದಿಲ್ಲ ಎಂದು ತಿಳಿಸಿದ್ದಾರೆ.