

ಬೆಂಗಳೂರು: ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಈ ನಡುವೆ ಕಾಂಗ್ರೆಸ್ ಟಿಕೆಟ್ ಪಡೆದುಕೊಳ್ಳಲು ತುರುಸಿನ ಪೈಪೋಟಿ ನಡೆದಿದ್ದು, ಅನೇಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಹೈಕಮಾಂಡ್, ಅವರ ಕುಟುಂಬದ ಜತೆ ಸಂಬಂಧ ಇರುವ ಅನೇಕರು ತಮ್ಮ ಕಡೆಯವರಿಗೆ ಟಿಕೆಟ್ ತರಲು ಪ್ರಯತ್ನ ನಡೆಸಿದ್ದಾರೆ. ಮಾಜಿ ಸಚಿವ ರಮಾನಾಥ್ ರೈ, ಎಂ.ಬಿ.ಪಾಟೀಲ್, ಸಂತೋಷ್ ಲಾಡ್, ಜಮೀರ್ ಅಹಮ್ಮದ್ ಸೇರಿ ಹಲವರು ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದಾರೆಂದು ಗೊತ್ತಾಗಿದೆ.
ಮಂಗಳೂರಿನಿಂದ ಟಿಕೆಟ್ ಪಡೆಯಲು ರಮಾನಾಥ್ ರೈ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆಂಬ ಚರ್ಚೆ ಕೆಪಿಸಿಸಿ ಕಚೇರಿಯಲ್ಲಿದೆ. ವಿಜಯಪುರ ಕ್ಷೇತ್ರಕ್ಕೆ ಸಹೋದರ ಸುನೀಲ್ ಪಾಟೀಲ್ ಪರ ಎಂ.ಬಿ ಪಾಟೀಲ್ ಲಾಬಿ ನಡೆಸಿದ್ದಾರೆ. ಎಂಬಿಪಿಗೆ ಪೈಪೋಟಿ ನೀಡಿರುವ ಎಸ್.ಆರ್ ಪಾಟೀಲ್, ಪಕ್ಷಕ್ಕಾಗಿನ ಸೇವೆ ಮತ್ತು ಹಿರಿತನ ಪರಿಗಣಿಸಿ ತಮಗೆ ಇನ್ನೊಂದು ಬಾರಿ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ. ದ್ವಿಸದಸ್ಯತ್ವ ಇರುವ ಕಡೆ ಒಂದು ಟಿಕೆಟ್ಗೆ ಮಾತ್ರ ಪಕ್ಷದಿಂದ ಅವಕಾಶ ಕೇಳುತ್ತಿರುವ ಸುಳಿವನ್ನು ಎಂ.ಬಿ.ಪಾಟೀಲ್ ಬಿಟ್ಟುಕೊಟ್ಟಿದ್ದಾರೆ. ಮತ್ತೊಂದೆಡೆ ಧಾರವಾಡದಲ್ಲಿ ತಮ್ಮ ಸ್ನೇಹಿತರನ ಪರ ಸಂತೋಷ್ ಲಾಡ್ ಬ್ಯಾಟ್ ಬೀಸಿದ್ದು, ಇಸ್ಮಾಯಿಲ್ ತಮಟಗಾರ್ಗೆ ಟಿಕೆಟ್ ನೀಡಬೇಕೆಂದು ಒತ್ತಡ ಹಾಕುತ್ತಿದ್ದಾರೆಂದು ಗೊತ್ತಾಗಿದೆ. ದೆಹಲಿಯಲ್ಲೇ ವಾಸ್ತವ್ಯ ಹೂಡಿರುವ ಜಮೀರ್ ಅಹಮ್ಮದ್ ಇಸ್ಮಾಯಿಲ್ ಎಂಬುವರ ಪರ ಪ್ರಯತ್ನ ನಡೆಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಯಾವ ಕ್ಷೇತ್ರದ ಟಿಕೆಟ್ಗೆ ಅಪೇಕ್ಷೆಪಟ್ಟಿದ್ದಾರೋ ಅದೇ ಕ್ಷೇತ್ರಕ್ಕೆ ಇಸ್ಮಾಯಿಲ್ ಆಕಾಂಕ್ಷಿ ಎಂಬುದು ಕುತೂಹಲದ ವಿಚಾರ.
ಸದ್ಯದ ಪರಿಸ್ಥಿತಿಯಲ್ಲಿ ಒಂದು ಸುತ್ತಿನ ಪ್ರಮುಖರ ಸಭೆಗಳು ಮುಗಿದಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಬ್ಬರೂ ಪ್ರತ್ಯೇಕ ಸಭೆ ನಡೆಸಿ 25 ಕ್ಷೇತ್ರಗಳಿಗೆ ಸಂಭಾವ್ಯರ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಕೆಲವು ಕ್ಷೇತ್ರಗಳಿಗೆ ಒಂದೇ ಹೆಸರು ಅಂತಿಮವಾಗಿದೆ. ಕೆಲವೆಡೆ 2-3 ಹೆಸರನ್ನು ಅಂತಿಮಗೊಳಿಸಿ ದೆಹಲಿಗೆ ಕಳಿಸಲಿದ್ದಾರೆ. ದೆಹಲಿಯಿಂದ ಕರೆ ಬರುವ ನಿರೀಕ್ಷೆಯಲ್ಲೂ ಇದ್ದಾರೆ. ಇದೇ ವೇಳೆ ಬುಧವಾರ ವಿವಿಧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಿ ಫಾರಂ ಹೊರತುಪಡಿಸಿ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದಿಂದ ಬಿ ಫಾರಂ ಬಂದ ಬಳಿಕ ಅದನ್ನು ಚುನಾವಣಾಧಿಕಾರಿಗೆ ಸಲ್ಲಿಸಲು ಪಕ್ಷದ ರಾಜ್ಯ ಘಟಕದಿಂದ ಅವರಿಗೆ ಒಪ್ಪಿಗೆಯೂ ಸಿಕ್ಕಿದೆ.
ಏಳೆಂಟು ಸ್ಥಾನಗಳಿಗೆ ಮಾತ್ರ ಸ್ಪರ್ಧೆ: ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ದೊಡ್ಡ ಮಟ್ಟದಲ್ಲಿ ತಯಾರಿ ನಡೆಸುತ್ತಿರುವ ಜೆಡಿಎಸ್, ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಯ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದರೂ ಕೇವಲ 7-8 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದು ನಾನಾ ಚರ್ಚೆಯನ್ನು ಹುಟ್ಟು ಹಾಕಿದೆ. ಸಿಂದಗಿ-ಹಾನಗಲ್ ಉಪ ಚುನಾವಣೆ ಸೋಲಿನಿಂದ ಧೃತಿಗೆಟ್ಟಿರುವ ಜೆಡಿಎಸ್ ವರಿಷ್ಠರು ಪರಿಷತ್ ಚುನಾವಣೆಯಲ್ಲಿ ಸ್ವ ನಿರ್ಬಂಧ ಹಾಕಿಕೊಂಡು ಹಳೇ ಮೈಸೂರು ಭಾಗಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಮಾತು ಕೇಳಿಬರುತ್ತಿವೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೆಡಿಎಸ್ನಿಂದ ಯಾವುದೇ ಪ್ರಬಲ ಸ್ಪರ್ಧಿಗಳು ಇಲ್ಲದಿರುವುದರಿಂದ ಹಾಸನ, ತುಮಕೂರು, ಮೈಸೂರು, ಕೋಲಾರ ಮತ್ತು ಮಂಡ್ಯ ಸೇರಿ 7ರಿಂದ 8 ಸ್ಥಾನಗಳಿಗೆ ಮಾತ್ರ ಸ್ಪರ್ಧಿಸಲು ತೀರ್ವನಿಸಿದೆ. ಈ ನಡುವೆ, ಹಾಸನಕ್ಕೆ ಎಚ್.ಡಿ.ದೇವೇಗೌಡರ ಮೊಮ್ಮಗ ಡಾ.ಸೂರಜ್ ಹೆಸರು ಫೈನಲ್ ಆಗಿದೆ. ‘ಈ ಚುನಾವಣೆಯಲ್ಲಿ ಎಂಟು ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ’ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
| ಸತೀಶ್ ಜಾರಕಿಹೊಳಿಕೆಪಿಸಿಸಿ ಕಾರ್ಯಾಧ್ಯಕ್ಷಕೈ ನಾಯಕರು, ಎಮ್ಮೆನ್ನಾರ್ ಭೇಟಿ: ವಿಧಾನ ಪರಿಷತ್ ಚುನಾವಣೆಯಲ್ಲಿ ದ.ಕ. ದ್ವಿಸದಸ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿರುವ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಜತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಬುಧವಾರ ಬೆಂಗಳೂರಿನಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್ ಮುಖಂಡ ಕಣಚೂರು ಮೋನು ಮತ್ತಿತರರು ಮಾತುಕತೆ ವೇಳೆ ಉಪಸ್ಥಿತರಿದ್ದರು. ರಾಜೇಂದ್ರ ಕುಮಾರ್ ಕಾಂಗ್ರೆಸ್ನಲ್ಲೇ ಗುರುತಿಸಿಕೊಂಡ ನಾಯಕರಾಗಿದ್ದು, ಪಕ್ಷೇತರರಾಗಿ ಸ್ಪರ್ಧಿಸುವ ಬದಲು ಕಾಂಗ್ರೆಸ್ನಿಂದ ಸ್ಪರ್ಧಿಸುವಂತೆ ಹಿರಿಯ ನಾಯಕರು ಮನವೊಲಿಸಿದ್ದಾರೆ ಎನ್ನುವ ಮಾಹಿತಿ ಇದೆ. ದ.ಕ. ಜಿಲ್ಲೆಯ ಪಕ್ಷದ ಕೆಲ ನಾಯಕರು ಕೂಡ ರಾಜೇಂದ್ರಕುಮಾರ್ ಅವರನ್ನೇ ಅಭ್ಯರ್ಥಿಯಾಗಿಸುವಂತೆ ರಾಜ್ಯ ನಾಯಕರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ರಾಜೇಂದ್ರ ಕುಮಾರ್ ಪಕ್ಷೇತರರಾಗಿ ಸ್ಪರ್ಧಿಸಿದರೆ ಕಾಂಗ್ರೆಸ್ ಗೆಲುವಿಗೆ ತೊಡಕಾಗಬಹುದು ಎನ್ನುವ ಪಕ್ಷದ ಆಂತರಿಕ ವರದಿ ಮೇರೆಗೆ ಕೆಪಿಸಿಸಿ ಮುಖಂಡರು ಅವರನ್ನು ಬೆಂಗಳೂರಿಗೆ ಅಹ್ವಾನಿಸಿ ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿ ಇದೆ. ಜಿಲ್ಲೆಯ ಸಹಕಾರಿಗಳು ಹಾಗೂ ಹಿತೈಷಿಗಳ ಅಭಿಪ್ರಾಯ ಪಡೆದು ನಿರ್ಣಯ ಕೈಗೊಳ್ಳುವುದಾಗಿ ರಾಜೇಂದ್ರ ಕುಮಾರ್ ಕೆಪಿಸಿಸಿ ನಾಯಕರಿಗೆ ತಿಳಿಸಿದ್ದಾರೆ. ಒಂದೆರಡು ದಿನಗಳಲ್ಲಿ ನಿರ್ಣಯ ಪ್ರಕಟಿಸಲಿದ್ದಾರೆ ಎಂದು ಅವರ ಚುನಾವಣಾ ಉಸ್ತುವಾರಿ ವಹಿಸಿರುವ ಬೆಳಪು ದೇವಿಪ್ರಸಾದ್ ಶೆಟ್ಟಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಮಾಜಿ ಸಿಎಂರಿಂದ ಹೈಜಾಕ್: ಮುಂದಿನ ಚುನಾವಣೆಯೊಳಗೆ ಜೆಡಿಎಸ್ ಮುಗಿಸಲೇಬೇಕೆಂದು ದುಷ್ಪ್ರಯತ್ನ ನಡೆಸುತ್ತಿರುವ ಮಾಜಿ ಮುಖ್ಯಮಂತ್ರಿಯೊಬ್ಬರು ನಮ್ಮ ಪಕ್ಷದ ಮುಖಂಡರು, ಶಾಸಕರನ್ನು ಹೈಜಾಕ್ ಮಾಡಲು ಬ್ರೇನ್ವಾಷ್ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜೆಡಿಎಸ್ ದುರ್ಬಲಗೊಳಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಕ್ಷೇತ್ರಗಳಲ್ಲಿ ಕೊಂಚ ಬಲ ಇಟ್ಟುಕೊಂಡಿರುವ ಶಾಸಕರನ್ನು, ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತ ಅಭ್ಯರ್ಥಿಗಳನ್ನು ಅವರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಸಿಎಂ ಆಗಿದ್ದವರು, ಮತ್ತೆ ಸಿಎಂ ಆಗಲು ಕನಸು ಕಾಣುತ್ತಿರುವವರು ಈ ಕೆಲಸ ಮಾಡುತ್ತಿದ್ದಾರೆ. ಪದೇಪದೆ ಕರೆ ಮಾಡಿ ನಮ್ಮ ಮುಖಂಡರ ತಲೆ ಕೆಡಿಸಲು ಯತ್ನಿಸುತ್ತಿದ್ದಾರೆ. ಅಲ್ಲದೆ, ಒಬ್ಬರಿಗೆ ಹನ್ನೊಂದು ಸಲ ಕರೆ ಮಾಡಿ ಏನು ತೀರ್ಮಾನ ಮಾಡಿದ್ರಿ? ಅಂಡಲೂ ಕೇಳುತ್ತಿದ್ದಾರೆ. ಇದನ್ನು ನನ್ನ ಆತ್ಮೀಯ ಶಾಸಕರೊಬ್ಬರು ನನಗೆ ಆ ಮಾಜಿ ಸಿಎಂ ಮಾಡಿರುವ ದೂರವಾಣಿ ಕರೆಯ ಲಿಸ್ಟ್ ತೋರಿಸಿದ್ದಾರೆ ಎಂಬ ಸ್ಪೋಟಕ ಮಾಹಿತಿಯನ್ನು ಎಚ್ಡಿಕೆ ಬಹಿರಂಗಪಡಿಸಿದರು.