

ಹೈದರಾಬಾದ್: ಕಲಾತಪಸ್ವಿ ಎಂದೇ ಖ್ಯಾತರಾಗಿದ್ದ ಟಾಲಿವುಡ್ ಸಿನಿಮಾ ರಂಗದ ದಿಗ್ಗಜ ನಿರ್ದೇಶಕ ಕೆ. ವಿಶ್ವನಾಥ್ (92) ಅವರು ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ವಿಧಿವಶರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವಿಶ್ವನಾಥ್ ಅವರು ಹೈದರಬಾದ್ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಚಿತ್ರರಂಗದ ಮೊತ್ತೊಂದು ಹಿರಿಯ ಕೊಂಡಿ ಕಳಚಿದ ಹಿನ್ನೆಲೆಯಲ್ಲಿ ನಟ ಕಮಲ್ ಹಾಸನ್, ಜೂ. ಎನ್ಟಿಆರ್ ಸೇರಿದಂತೆ ಕಾಲಿವುಟ್ ಹಾಗೂ ಟಾಲಿವುಡ್ ಅನೇಕ ನಟರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿ, ನಟನೆ ಹಾಗೂ ಚಿತ್ರಕಥೆಗಾರರಾಗಿಯು ಯಶಸ್ವಿಯಾಗಿದ್ದರು. ಅವರು ಕಲಾ ತಪಸ್ವಿ ಎಂದೇ ಖ್ಯಾತರಾಗಿದ್ದರು. ತಮಿಳಿನ ಯಾರಡಿ ನೀ ಮೋಹಿನಿ, ರಾಜಪಟ್ಟೈ, ಲಿಂಗ ಮತ್ತು ಉತ್ತಮ ವಿಲನ್ ಸಿನಿಮಾಗಳಲ್ಲಿ ತಮ್ಮ ಪಾತ್ರಗಳಿಂದಲೇ ವಿಶ್ವನಾತ್ ಅವರು ನಟನೆಯಲ್ಲಿ ಗಮನ ಸೆಳೆದಿದ್ದರು.
ಐದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ವಿಶ್ವನಾಥ್ ಪಡೆದಿದ್ದಾರೆ. ಚಿತ್ರರಂಗಕ್ಕೆ ನೀಡುವ ಭಾರತದ ಅತ್ಯುನ್ನತ ಗೌರವ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು 2016ರಲ್ಲಿ ಪಡೆದರು. ಅಲ್ಲದೆ, ಆಂಧ್ರ ಸರ್ಕಾರ ನೀಡುವ ನಂದಿ ಪ್ರಶಸ್ತಿ ಗೌರವಕ್ಕೆ 7 ಬಾರಿ ಭಾಜನರಾಗಿದ್ದಾರೆ.
ತೆಲುಗು ಸಿನಿಮಾ ಪಥಲಾ ಭೈರವಿ ಸಿನಿಮಾಗೆ ಸಹಾಯಕ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ 1951ರಲ್ಲಿ ಸಿನಿಮಾ ವೃತ್ತಿಯನ್ನು ವಿಶ್ವನಾಥ್ ಆರಂಭಿಸಿದರು. 1965ರಲ್ಲಿ "ಆತ್ಮ ಗೌರವಂ" ಸಿನಿಮಾ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಅಲ್ಲದೆ, ಮೊದಲ ಸಿನಿಮಾಗೆ ಅತ್ಯುತ್ತಮ ಚಲನಚಿತ್ರ ವಿಭಾಗದಡಿಯಲ್ಲಿ ನಂದಿ ಪ್ರಶಸ್ತಿ ಪಡೆದರು.
ಚಿತ್ರರಂಗದಲ್ಲಿ ಆಲ್‌ರೌಂಡರ್ ಆಗಿರುವ ಕಮಲ್ ಹಾಸನ್ ಅವರು ಕೆಲವೇ ಜನರನ್ನು ತಮ್ಮ ಮಾರ್ಗದರ್ಶಕರೆಂದು ಪರಿಗಣಿಸುತ್ತಾರೆ. ಅದರಲ್ಲಿ ಕೆ ವಿಶ್ವನಾಥ್ ಸಹ ಸೇರಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿರುವ ನಿವಾಸದಲ್ಲಿ ವಿಶ್ವನಾಥ್ ಅವರನ್ನು ಕಮಲ್ ಹಾಸನ್ ಭೇಟಿ ಮಾಡಿದ್ದರು. (ಏಜೆನ್ಸೀಸ್)