

ನವದೆಹಲಿ: ಅದಾನಿ ಸಮೂಹದ ಕಂಪನಿಗಳ ಆರ್ಥಿಕ ಸ್ಥಿತಿ, ಮಾರುಕಟ್ಟೆ ಮೌಲ್ಯ ದಿನವೂ ಕುಸಿಯುತ್ತಲೇ ಇದೆ. ಹಿಂಡನ್ರ್ಬಗ್ ವರದಿ ಬಳಿಕ ಈವರೆಗೆ 8.22 ಲಕ್ಷ ಕೋಟಿ ರೂ.ಗೂ ಅಧಿಕ ಸಂಪತ್ತು ನಷ್ಟವಾಗಿದೆ. ಇನ್ನೊಂದೆಡೆ, ಆರ್ಬಿಐ ಕೂಡ ಅದಾನಿ ಪ್ರಕರಣದ ಮೇಲೆ ನಿಗಾ ವಹಿಸಿದ್ದು, ಈ ಕಂಪನಿಗಳ ಜತೆಗಿನ ವಹಿವಾಟಿನ ವಿವರ ನೀಡುವಂತೆ ಬ್ಯಾಂಕ್ಗಳಿಗೆ ಸೂಚಿಸಿದೆ.
ಇದೀಗ ದೇಶದ ಅತಿದೊಡ್ಡ ಬ್ಯಾಂಕ್ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಅದಾನಿ ಗ್ರೂಪ್ ಅಡಿಯಲ್ಲಿ ಬರುವ ವಿವಿಧ ಕಂಪನಿಗಳಿಗೆ ಸುಮಾರು 21 ಸಾವಿರ ಕೋಟಿ. ರೂ. ಸಾಲ ನೀಡಿರುವುದಾಗಿ ವರದಿಯಾಗಿದೆ.
ಅದಾನಿ ಕಂಪನಿಗಳು ಹಾಗೂ ಎಸ್ಬಿಐ ನಡುವೆ ನಡೆದಿರುವ ಸಾಲ ವ್ಯವಹಾರದ ಮಾಹಿತಿ ಹೊರಬಿದ್ದಿದೆ. ಬರೋಬ್ಬರಿ 8 ಲಕ್ಷ ಕೋಟಿ ನಷ್ಟ ಆಗಿದ್ದರೂ ಅದಾನಿ ಗ್ರೂಪ್ಗೆ ನೀಡಿರುವ ಸಾಲದ ಹಣದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಎಸ್ಬಿಐ ಮುಖ್ಯಸ್ಥ ದಿನೇಶ್ ಕುಮಾರ್ ಖರ ಅವರು ಹೇಳುತ್ತಿದ್ದಾರೆ.
ರಾತ್ರೋರಾತ್ರಿ ಷೇರು ಮಾರಾಟ ಸ್ಥಗಿತ
ಅದಾನಿ ಸಮೂಹವು ಬಹುಕೋಟಿ ರೂಪಾಯಿ ಮೌಲ್ಯದ ಫಾಲೋ ಆನ್ ಸಾರ್ವಜನಿಕ ಷೇರು ಮಾರಾಟವನ್ನು (ಎಫ್ಪಿಒ) ರಾತ್ರೋರಾತ್ರಿ ಸ್ಥಗಿತಗೊಳಿಸಿದೆ. ಇದರಿಂದ ಷೇರುಪೇಟೆಯಲ್ಲಿ ಭಾರಿ ಮುಖಭಂಗಕ್ಕೆ ಗುರಿಯಾಗಿದೆ. ಜ.31ಕ್ಕೆ ಎ್ಪಿಒ ಬಿಡ್ ಅಂತ್ಯಗೊಂಡಿದ್ದು, 20 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಬಿಡ್ ಸಲ್ಲಿಕೆ ಆಗಿತ್ತು. ಅದಾನಿ ಎಂಟರ್ಪ್ರೈಸಸ್ ಮಂಡಳಿಯು (ಎಇಎಲ್) ಬುಧವಾರ ತಡರಾತ್ರಿ ಹೊರಡಿಸಿದ ಹೇಳಿಕೆಯಲ್ಲಿ ಷೇರು ಮಾರಾಟ ಪ್ರಕ್ರಿಯೆಯನ್ನು ಈ ಹೊತ್ತಿನಲ್ಲಿ ಮುಂದುವರಿಸುವುದು ನೈತಿಕವಾಗಿ ಸರಿ ಎನಿಸುತ್ತಿಲ್ಲ. ನಮಗೆ ಗ್ರಾಹಕರ ಹಿತರಕ್ಷಣೆಯೇ ಮುಖ್ಯ. ಷೇರು ಖರೀದಿಗೆ ಬಿಡ್ ಸಲ್ಲಿಸಿದವರ ಹಣ ಮರುಪಾವತಿ ಮಾಡಲಾಗುವುದು' ಎಂದು ತಿಳಿಸಿದೆ. ಗುರುವಾರ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಗೌತಮ್ ಅದಾನಿ, ಕಂಪನಿ ಸೈದ್ಧಾಂತಿಕವಾಗಿ ಬಲಿಷ್ಠವಾಗಿದೆ. ನಮ್ಮ ಹಣಕಾಸು ಸ್ಥಿತಿ ಆರೋಗ್ಯಪೂರ್ಣವಾಗಿದ್ದು, ಸ್ವತ್ತುಗಳ ಮೌಲ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ. ಸಾಲದ ಬಾಬ್ತನ್ನು ತಗ್ಗಿಸಲು ಅದಾನಿ ಎಂಟರ್ಪೆಸಸ್ನ ಷೇರು ಮಾರಾಟದ ಮೂಲಕ 20,500 ಕೋಟಿ ರೂ. ಸಂಗ್ರಹಿಸಲು ಉದ್ದೇಶಿಸಿತ್ತು. ಕಂಪನಿ ಪ್ರಸ್ತಾವಿಸಿದ್ದ ದರಕ್ಕಿಂತ ಷೇರು ಮೌಲ್ಯ ಇಳಿಕೆಯಾಗಿರುವ ಕಾರಣ ಸಣ್ಣ ಹೂಡಿಕೆದಾರರು ಷೇರು ಖರೀದಿಯಿಂದ ಹಿಂದೆ ಸರಿದಿದ್ದರು. ಆದರೆ, ಅಬುಧಾಬಿ ಮೂಲ ಇಂಟರ್ನ್ಯಾಷನಲ್ ಹೋಲ್ಡಿಂಗ್ ಕಂಪನಿ, ಸಜ್ಜನ್ ಜಿಂದಾಲ್ ಹಾಗೂ ಸುನಿಲ್ ಮಿತ್ತಲ್ ಷೇರು ಖರೀದಿಗೆ ಬಿಡ್ ಮಾಡಿದ್ದರು ಎಂದು ಬ್ಲೂಮ್ರ್ಬಗ್ ವರದಿ ಹೇಳಿದೆ. ಈ ಮಧ್ಯೆ, ಅದಾನಿ ಸಮೂಹದ ಮೇಲಿನ ಷೇರು ಅಕ್ರಮ ಮತ್ತು ಎಫ್ಪಿಒ ಹಿಂಪಡೆದ ಕುರಿತು ಭಾರತೀಯ ಷೇರು ನಿಯಂತ್ರಣ ಮಂಡಳಿ (ಸೆಬಿ) ಯಾವುದೇ ತನಿಖೆಗೆ ಆದೇಶಿಸಿಲ್ಲ.
ವಿವರ ಕೇಳಿದ ಆರ್ಬಿಐ
ಅದಾನಿ ಸಮೂಹದ ಕಂಪನಿಗಳು ಹೊಂದಿರುವ ಬ್ಯಾಂಕ್ ಖಾತೆ, ಪಡೆದಿರುವ ಸಾಲ, ವಿತರಿಸುವ ಸಾಲಪತ್ರ ಸೇರಿ ಈ ಸಮೂಹದ ಎಲ್ಲ ಬ್ಯಾಂಕಿಂಗ್ ವ್ಯವಹಾರದ ಮಾಹಿತಿ ನೀಡುವಂತೆ ಆರ್ಬಿಐ ಬ್ಯಾಂಕ್ಗಳಿಗೆ ಸೂಚಿಸಿದೆ. ಈ ಸಾಲಪತ್ರದ ಆಧಾರದ ಮೇಲೆ ಬ್ಯಾಂಕ್ಗಳು ಗ್ರಾಹಕರಿಗೆ ಸಣ್ಣ ಮೊತ್ತದ ಸಾಲ ಮಂಜೂರು ಮಾಡುತ್ತಿದ್ದವು. ಈ ಮಧ್ಯೆ, ಅದಾನಿ ಸಮೂಹದ ಕಂಪನಿಗಳು ವಿತರಿಸುವ ಸಾಲದ ಬಾಂಡ್ಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಸ್ವಿಸ್ ಬ್ಯಾಂಕ್, ಸಿಟಿ ಗ್ರೂಪ್ ಬ್ಯಾಂಕ್ಗಳು ಹೇಳಿದೆ. ಈ ರೀತಿ ಸಾಲದ ಬಾಂಡ್ಗಳನ್ನು ಆಧರಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ 7,000 ಕೋಟಿ ರೂ., ಬ್ಯಾಂಕ್ ಆ್ ಬರೋಡಾ 4,000 ಕೋಟಿ ರೂ. ವರೆಗೂ ಸಾಲ ವಿತರಣೆ ಮಾಡಿವೆ ಎನ್ನಲಾಗಿದೆ.
ಸದನದಲ್ಲೂ ಗದ್ದಲ
ಗೌತಮ್ ಅದಾನಿ ಒಡೆತನದ ಅದಾನಿ ಸಮೂಹದ ಷೇರುಪೇಟೆ ಅಕ್ರಮ ಮತ್ತು ತೆರಿಗೆ ವಂಚನೆ ಕುರಿತು ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್ರ್ಬಗ್ ವರದಿ ಸಂಸತ್ನಲ್ಲಿ ಗುರುವಾರ ಮಾರ್ದನಿಸಿತು. ಈ ಆರೋಪದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಥವಾ ಸುಪ್ರೀಂಕೋರ್ಟ್ ನಿಗಾದಲ್ಲಿ ತನಿಖೆ ನಡೆಸಬೇಕು ಎಂದು 11 ವಿರೋಧ ಪಕ್ಷಗಳು ಒತ್ತಾಯಿಸಿದವು. ಆದರೆ, ಲೋಕಸಭೆ ಮತ್ತು ರಾಜ್ಯಸಭೆಗಳ ಸಭಾಧ್ಯಕ್ಷರು ಇದನ್ನು ತಳ್ಳಿಹಾಕಿದ ಕಾರಣ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿ, ಮಧ್ಯಾಹ್ನ 2 ಗಂಟೆವರೆಗೆ ಕಲಾಪ ಮುಂದೂಡಿಕೆ ಆಗಿತ್ತು. ಅದಾನಿ ಸಮೂಹದ ವಂಚನೆ ಕುರಿತು ಕಲಾಪದಲ್ಲಿ ಕೈಗೊಳ್ಳ ಬೇಕಾದ ಕ್ರಮ ಯಾವುದು ಎಂಬ ಬಗ್ಗೆ ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಎಸ್ಪಿ, ಜೆಡಿಯು, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಸಿಪಿಐ(ಎಂ), ಸಿಪಿಐ, ಎನ್ಸಿಪಿ, ಐಯುಎಂಎಲ್, ಎಎಪಿ, ಎನ್ಸಿ ಪಕ್ಷಗಳು ಬೆಳಗ್ಗೆ ಸಭೆ ನಡೆಸಿದ್ದವು. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಅದಾನಿ ಸಮೂಹಕ್ಕೆ ಹೆಚ್ಚು ಅನುಕೂಲ ಮತ್ತು ಲಾಭ ಆಗಿದೆ. ಈ ಬಗ್ಗೆಯೂ ಚರ್ಚೆ ನಡೆಸುವಂತೆ ಒತ್ತಾಯಿಸಲಾಗಿದೆ. (ಏಜೆನ್ಸೀಸ್)