

ಶಿವಮೊಗ್ಗ: ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಜನಸಾಮಾನ್ಯರಿಗೆ ಕಾನೂನು ಅರಿವು ಮೂಡಿಸಬೇಕು. ಈ ಮೂಲಕ ಬದುಕಿನಲ್ಲಿ ಸ್ವಾತಂತ್ರ್ಯ ಹಾಗೂ ಸಮಾನತೆ ಕಲ್ಪಿಸಿಕೊಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಹೇಳಿದರು.
ಬಾಪೂಜಿನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಿಂದ ಶುಕ್ರವಾರ ಗಾಜನೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿ, ಯುವಜನತೆಗೆ ಮತ್ತು ನಾಗರಿಕರಿಗೆ ಕಾನೂನಿನ ಅರಿವು ಅಗತ್ಯ ಎಂದರು.
ಆರೋಗ್ಯವಂತ ಸಮಾಜಕ್ಕೆ, ನೆಮ್ಮದಿಯ ನಾಳೆಗೆ ಕಾನೂನು ಜ್ಞಾನ ಅವಶ್ಯಕ. ಕಾನೂನಿನಲ್ಲಿ ನಿಯಮಗಳಿವೆ. ನ್ಯಾಯ ಅನ್ನೋದು ಒಂದು ಸಾಮಾನ್ಯ ಜ್ಞಾನ. ಅದನ್ನು ಪಾಲನೆ ಮಾಡಿದರೆ ನಮ್ಮ ಉಸಿರು, ನಂಬಿಕೊಂಡವರ ಬದುಕು ಉಳಿಯುತ್ತದೆ. ಅನುಪಾಲನೆ ಮಾಡಿದವರಿಗೆ ರಕ್ಷಣೆ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂವಿಧಾನದಲ್ಲಿ ಎಲ್ಲವೂ ಇದೆ. ಅದನ್ನು ಅರ್ಥಮಾಡಿಕೊಂಡು ಮತ್ತು ಅನುಸರಿಸಿ ನಡೆಯುವುದು ಅಗತ್ಯ. ಇಂದು ಕಾನೂನಿನಲ್ಲಿ ಕಠಿಣ ಕಾನೂನುಗಳಿವೆ. ಪೋಕ್ಸೋ ಪ್ರಕರಣದಲ್ಲಿ ಅಪರಾಧಿಗೆ 20 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು. ಡ್ರಗ್ಸ್, ವದುಪಾನ, ಧೂಮಪಾನ ಮತ್ತಿತರ ದುಶ್ಚಟಗಳಿಗೆ ಯುವಜನತೆ ಬಲಿಯಾಗುತ್ತಿರುವುದು ಬೇಸರದ ಸಂಗತಿ. ಪಾಲಕರು, ಗುರುಹಿರಿಯರಿಗೆ ಗೌರವ ಕೊಡಬೇಕು. ಅವರ ನಂಬಿಕೆ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಜಿ.ಆರ್.ರಾಘವೇಂದ್ರ ಮಾತನಾಡಿ, ವಾಹನ ಚಲಾಯಿಸುವಾಗ ಪರವಾನಗಿ ಇರಬೇಕು. ಸಮಾಜದಲ್ಲಿ ಅನಿಷ್ಟಗಳಿವೆ. ಸೌಲಭ್ಯಗಳ ಕೊರತೆ ಇದೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಕೌಶಲದಿಂದ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ಸೋಮಶೇಖರ, ಸುಧಾಕರ, ಜಾಹ್ನವಿ, ವಿಶ್ರಾಂತ ಪ್ರಾಧ್ಯಾಪಕರಾದ ಬಸವರಾಜಪ್ಪ, ಸಹ ಪ್ರಾಧ್ಯಾಪಕರಾದ ಡಾ. ಅಣ್ಣಪ್ಪ ಎನ್. ಮಳೀಮಠ್ ಇತರರಿದ್ದರು.