ವಿಶ್ರಾಂತ ನ್ಯಾಯಮೂರ್ತಿ ನೇತೃತ್ವ, ನೀರಾವರಿ ಹೋರಾಟದ ಬಲ ಮತ್ತಷ್ಟು ವೃದ್ಧಿ

IMG_20251003_224727.jpg
Published on

ಚಿಕ್ಕಬಳ್ಳಾಪುರ: ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೊಸ ಬಲ ವೃದ್ಧಿಯೊಂದಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಹೋರಾಟಕ್ಕಿಳಿದಿದ್ದು ಸರ್ಕಾರಗಳು ಬಗ್ಗಿತ್ತೇ? ಸ್ಥಳೀಯ ಜನಪ್ರತಿನಿಧಿಗಳು ಇನ್ನಾದರೂ ಸುಳ್ಳು ಮಾತುಗಳನ್ನು ಬಿಟ್ಟು ಪ್ರಾಮಾಣಿಕವಾಗಿ ಬೇಡಿಕೆ ಈಡೇರಿಕೆ ನಿಟ್ಟಿನಲ್ಲಿ ಮುಂದಾಗಲಿದ್ದಾರೆಯೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಬಿಡಿ ಬಿಡಿಯಾಗಿ ವಿವಿಧ ಸಂಘಟನೆಗಳು ಪ್ರತ್ಯೇಕವಾಗಿ ಹೋರಾಟ ನಡೆಸುವುದರ ಬದಲಿಗೆ ಒಂದೇ ವೇದಿಕೆಯಲ್ಲಿ ಸರ್ಕಾರಗಳಿಗೆ ಗಟ್ಟಿ ಧ್ವನಿ ತಲುಪಿಸುವ ನಿಟ್ಟಿನಲ್ಲಿ ಒಕ್ಕೂರಲ ನಿರ್ಧಾರ ಕೈಗೊಂಡಿದ್ದು ಜಲಾಗ್ರಹ ಜಂಟಿ ಕ್ರಿಯಾ ಸಮಿತಿಯು ಕಾರ್ಯ ರೂಪಕ್ಕೆ ಬಂದಿದೆ. ಅಧ್ಯಕ್ಷರಾಗಿ ಸವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಗೋಪಾಲ ಗೌಡ ಆಯ್ಕೆಯಾಗಿದ್ದಾರೆ. ಅಧಿಕಾರ ಸ್ವೀಕಾರದ ಮೊದಲ ದಿನವೇ ಶಾಸಕಾಂಗ, ಕಾರ್ಯಾಂಗದ ಜತೆಗೆ ನ್ಯಾಯಾಂಗದ ಕಾರ್ಯ ವೈಖರಿಯನ್ನು ಪ್ರಶ್ನಿಸಿದ್ದು ಇನ್ನು ಸುಮ್ಮನಿರುವುದಿಲ್ಲ. ಜನರು ಬೀದಿಗಿಳಿಯಲಿದ್ದಾರೆ. ಸಮಸ್ಯೆಯ ಶಾಶ್ವತ ಪರಿಹಾರದವರೆಗೂ ಹೋರಾಡಲಿದ್ದಾರೆ ಎಂಬುದಾಗಿ ಘೋಷಿಸಿದ್ದಾರೆ.

*ವಿಶ್ರಾಂತ ನ್ಯಾಯಮೂರ್ತಿಗಳ ಬಲ
೧೯೭೬ ರಿಂದಲೂ ಬಯಲು ಸೀಮೆಯ ಭಾಗಗಳಿಗೆ ಶಾಶ್ವತ ನೀರಾವರಿ ಸೌಲಭ್ಯವನ್ನು ಒದಗಿಸಬೇಕೆಂದು ಹೋರಾಟ ನಡೆಸಲಾಗುತ್ತಿದೆ. ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಬೆಂಗಳೂರಿಗೆ ಪಾದಯಾತ್ರೆ, ಶಾಶ್ವತ ನೀರಾವರಿ ಹೋರಾಟ ಸಮಿತಿಯು ಧರಣಿ, ಉಪವಾಸ ಸತ್ಯಾಗ್ರಹ, ಬೆಂಗಳೂರು ಚಲೋ, ಜಿಲ್ಲೆಗಳ ಬಂದ್‌, ಅನಿರ್ದಿಷ್ಟಾವಧಿ ಮುಷ್ಕರ, ಬೃಹತ್‌ ರ್ಯಾಲಿ, ಜಾಗೃತಿ ಆಂದೋಲನ ಸೇರಿದಂತೆ ಕಾನೂನು ಹೋರಾಟವನ್ನು ನಡೆಸಿದೆ. ಇದರ ನಡುವೆ ಸರ್ಕಾರವು ಎತ್ತಿನಹೊಳೆ ಯೋಜನೆ, ಎಚ್.ಎನ್.ವ್ಯಾಲಿ ಹಾಗೂ ಕೆ.ಸಿ.ವ್ಯಾಲಿ ಯೋಜನೆಯ ಜಾರಿಯ ಮೂಲಕ ತೃಪ್ತಿಪಡಿಸಲು ಯತ್ನಿಸಿದ್ದು ಇದೇ ವೇಳೆ ನಿಲುವನ್ನು ಒಂದು ಬಣವು ಸ್ವಾಗತಿಸಿ, ಮತ್ತೊಂದು ಬಣವು ವಿರೋಧಿಸಿ ಇಬ್ಭಾಗವಾಗಿದ್ದು ಅನೇಕರು ಹೋರಾಟಗಳಿಂದ ಹಂತ ಹಂತವಾಗಿ ವಿಮುಖರಾಗಿದ್ದರು. ಇದು ಕೆಲ ಸ್ಥಳೀಯ ಜನಪ್ರತಿನಿಧಿಗಳಿಗೆ ಖುಷಿಯಾಗಿದ್ದು ಒಡಕಿನ ಜನರ ಸಮಸ್ಯೆಯನ್ನು ಆಲಿಸುವ ವಿಚಾರದಲ್ಲಿ ಮಂದ ಕಿವಿಯಾಗಿದ್ದರು. ಇದರ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿರುವುದರ ನಡುವೆ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಯ ವ್ಯಾಪ್ತಿಯ ಹೋರಾಟ ಸಮಿತಿಗೆ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ ನಾಯಕತ್ವ ವಹಿಸಿದ್ದು ಪ್ರತ್ಯೇಕ ಹೋರಾಟಗಳಿಂದ ದೂರವಾಗಿದ್ದ ಅನೇಕ ಸಂಘಟನೆಗಳು ಒಗ್ಗೂಡಿವೆ. ಇದರೊಂದಿಗೆ ನೀರಾವರಿ ಧ್ವನಿಗೆ ಹೆಚ್ಚಿನ ಬಲ ಬಂದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net