

ಸಾಗರ: ರೋಗ ಬರುತ್ತದೆ ಎನ್ನುವ ಭ್ರಮೆ ಬೇಡ, ಸಮಸ್ಯೆ ಬರಲಿದೆ ಎನ್ನುವುದು ಕೂಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಖ್ಯಾತ ವೈದ್ಯ ಡಾ. ಆಂಜನಪ್ಪ ಹೇಳಿದರು.
ನಗರದ ಅಜಿತ ಸಭಾಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆರೋಗ್ಯದಲ್ಲಿ ಆತಂಕವೇಕೆ ಕುರಿತು ಉಪನ್ಯಾಸ ನೀಡಿದ ಅವರು, ಎಲ್ಲರೂ ಧಾವಂತದ ಬದುಕಿನಲ್ಲಿ ಮುನ್ನಡೆಯುತ್ತಿದ್ದು, ಎಲ್ಲದಕ್ಕೂ ಸಮಯ ಕೊಡುವ ನಾವು ಆರೋಗ್ಯದ ವಿಷಯ ಬಂದಾಗ ನಿಷ್ಕಾಳಜಿ ವಹಿಸುತ್ತಿದ್ದೇವೆ ಎಂದರು.
ಮಾನಸಿಕ, ದೈಹಿಕ, ಸಾಮಾಜಿಕ ಆರೋಗ್ಯ ಹೆಚ್ಚು ಅವಶ್ಯ. ದೈನಂದಿನ ಬದುಕಿನಲ್ಲಿ ಒಂದಷ್ಟು ಶಿಸ್ತುಪಾಲನೆ ಮಾಡಬೇಕು. ಜಂಕ್‌ಫುಡ್ ಸೇವನೆ ಹವ್ಯಾಸದಿಂದ ಮಕ್ಕಳನ್ನು ಹೊರತರಬೇಕು. ತರಕಾರಿ, ಹಣ್ಣು ಇತರ ಪೌಷ್ಟಿಕಾಂಶದ ಆಹಾರ ನೀಡುವ ಮೂಲಕ ದೈಹಿಕವಾಗಿ ಸದೃಢವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಾರತ ಮಧುಮೇಹ ಕಾಯಿಲೆಯ ಕೇಂದ್ರವಾಗುತ್ತಿದೆ. ಮಧುಮೇಹ ನಿಯಂತ್ರಿಸುವ ಶಕ್ತಿ ನಮ್ಮಲ್ಲಿ ಇರುತ್ತದೆ. ನಿಯಮಿತ ಆಹಾರ, ವ್ಯಾಯಾಮ, ವಾಕಿಂಗ್ ಸೇರಿ ಇತರ ಬದಲಾವಣೆ ಮೂಲಕ ಅನೇಕ ಕಾಯಿಲೆಗಳಿಂದ ದೂರವಿರಲು ಸಾಧ್ಯ. ಶಿಸ್ತುಬದ್ಧ ಜೀವನಶೈಲಿ ಅನೇಕ ಕಾಯಿಲೆಗಳು ಬಾರದಂತೆ ತಡೆಯುತ್ತದೆ ಎಂದರು.
ಮನಸ್ಸಿನ ನಿಯಂತ್ರಣ ಮುಖ್ಯ: ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವವರ ಬದುಕು ಸುಂದರವಾಗಿರುತ್ತದೆ ಎಂದು ಚಿಂತಕ ಡಾ. ಹುಲಿಕಲ್ ನಟರಾಜ್ ಹೇಳಿದರು. ಮನಸ್ಸೇ ಹೀಗೇಕೆ? ವಿಷಯ ಕುರಿತು ಮಾತನಾಡಿ, ಮನಸ್ಸು ಅಪ್‌ಡೇಟ್ ಆಗುತ್ತಿರಬೇಕೇ ವಿನಃ ಔಟ್‌ಡೇಟ್ ಆಗಬಾರದು. ಮನಸ್ಸಿನ ನಿಯಂತ್ರಣ ತಪ್ಪಿದವರು ಮೂಢನಂಬಿಕೆಯ ದಾಸರಾಗುತ್ತಾರೆ. ಗ್ರಹಚಾರ ಸರಿಯಿಲ್ಲ ಎನ್ನುವುದಕ್ಕಿಂತ ಮನಸ್ಸು ಹತೋಟಿಯಲ್ಲಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಮನಸ್ಸು ನಮ್ಮ ದೊಡ್ಡ ಶಕ್ತಿ. ನಮ್ಮನ್ನು ಪಾತಾಳಕ್ಕೆ ಬೀಳಿಸುವುದು, ಆಕಾಶದೆತ್ತರ ಏರಿಸುವ ಶಕ್ತಿ ಇರುವುದು ಮನಸ್ಸಿಗೆ. ಒತ್ತಡ ನಮ್ಮನ್ನು ನಗುವಿನಿಂದ ದೂರ ಕರೆದುಕೊಂಡು ಹೋಗುತ್ತದೆ. ಸ್ಪಷ್ಟವಾಗಿ ಮಾತು ಆಡುವುದರಿಂದ ಬಹುತೇಕ ಸಮಸ್ಯೆ ಬಗೆಹರಿಯುತ್ತದೆ. ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಾಗರ ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಕಸಾಪ ಕಾರ್ಯದರ್ಶಿ ಜಿ.ನಾಗೇಶ್, ಡಾ. ಪ್ರಸನ್ನ, ಲೋಕೇಶ್‌ಕುಮಾರ್, ನಾರಾಯಣಮೂರ್ತಿ ಇತರರಿದ್ದರು.