

ಚಿಕ್ಕಮಗಳೂರು: ಮಹಿಳೆಯರು ಕೀಳರಿಮೆ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ತಿಳಿಸಿದರು.
ಯೂನಿಯನ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ , ಜಿಪಂನಿಂದ ನಗರದ ಯೂನಿಯನ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಸ್ವಚ್ಛ ವಾಹಿನಿ ವಾಹನ ಚಾಲನಾ ತರಬೇತಿ ಹಾಗೂ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯ ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಸಂಜೀವಿನಿ ಒಕ್ಕೂಟಗಳ ಮೂಲಕ ಸ್ವಸಹಾಯ ಸಂಘ ರಚಿಸಿಕೊಂಡು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡರೆ ತರಬೇತಿ ನೀಡಲಾಗುವುದು. ಜತೆಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯ 226 ಗ್ರಾಪಂಗಳಲ್ಲಿ ಒಕ್ಕೂಟ ರಚನೆಯಾಗಿದೆ. ಸ್ವಚ್ಛವಾಹಿನಿ ವಾಹನ ಚಾಲನೆಗಾಗಿ ಸಂಜೀವಿನಿ ಒಕ್ಕೂಟದ ಮಹಿಳೆಯರನ್ನು ಆಯ್ಕೆ ಮಾಡಿ ತರಬೇತಿ ನೀಡಿ ಎಲ್ಲ ಗ್ರಾಪಂಗಳಲ್ಲೂ ಮಹಿಳೆಯರೇ ವಾಹನ ಚಲಾಯಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಜಿಪಂ, ಆರ್‌ಸಿಪಿ ಹಾಗೂ ಲೀಡ್ ಬ್ಯಾಂಕ್ ಜತೆಯಿದ್ದು ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುರೇಶ್ ಮಾತನಾಡಿ, ಮಹಿಳೆಯರು ಸ್ವ ಉದ್ಯೋಗ ಕೈಗೊಳ್ಳಲು ಸಾಲದ ಅವಶ್ಯಕತೆ ಇದ್ದರೆ ಸಮೀಪದ ಬ್ಯಾಂಕ್‌ಗಳಲ್ಲಿ ಪಡೆದುಕೊಳ್ಳಬಹುದು. ಸರ್ಕಾರಿ ಯೋಜನೆಗಳಡಿ ಸಾಲ ನೀಡದ ಬ್ಯಾಂಕ್‌ಗಳ ವಿರುದ್ಧ ದೂರು ನೀಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಸಂಸ್ಥೆ ನಿರ್ದೇಶಕ ಜಿ.ರಮೇಶ್ ಮಾತನಾಡಿ, ನಿರುದ್ಯೋಗ ಸಮಸ್ಯೆ ನಿವಾರಿಸಲು ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಿಂದ ಕೇಂದ್ರ ಗ್ರಾಮೀಣ ಮಂತ್ರಾಲಯ, ಎಸ್‌ಆರ್‌ಎಂಎಂ, ಜಿಪಂ ಸಹಯೋಗದೊಂದಿಗೆ ಸರ್ಕಾರದ ಯೋಜನೆಗಳನ್ನು ಸಾಕಾರಗೊಳಿಸಲಾಗುತ್ತಿದೆ. ಕೌಶಲ ತರಬೇತಿ ಜತೆಗೆ ಅನೇಕ ಪ್ರೇರಣಾತ್ಮಕ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಒಕ್ಕೂಟದ ವಿಜಯಲಕ್ಷ್ಮೀ, ಶ್ವೇತಾ, ರಮ್ಯಾ, ಕುಮುದಾ ಇತರರಿದ್ದರು.