

ದಿನನಿತ್ಯ ಮಕ್ಕಳು ಮಾಡಬೇಕಾದ ಚಟುವಟಿಕೆಗಳನ್ನೇ ಮರೆತಿದ್ದಾರೆ. ಸಮಯಕ್ಕೆ ಸರಿಯಾಗಿ ಏಳುತ್ತಿಲ್ಲ. ಸ್ನಾನ ಮಾಡುವುದು, ಶುಭ್ರ ಬಟ್ಟೆ ಧರಿಸುವುದು ಮರೆತಿದ್ದಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಆನ್ಲೈನ್ ಕ್ಲಾಸ್ ನೆಪದಲ್ಲಿ ಮೊಬೈಲ್ನಲ್ಲೇ ಕಾಲ ಕಳೆಯುತ್ತಿದ್ದಾರೆ. ಮನೆಯಿಂದ ಹೊರಗೆ ಬರಲು ಭಯ ಬೀಳುತ್ತಿದ್ದಾರೆ. ಎಷ್ಟೋ ಮಕ್ಕಳು ಸಾಕಷ್ಟು ತಿಂಗಳಿನಿಂದ ಪಕ್ಕದ ಮನೆಯವರನ್ನು ಮಾತನಾಡದೆ, ಇರುವ ಸನ್ನಿವೇಶಗಳಿವೆ. ಮನೆಯಲ್ಲೇ ಇದ್ದು, ಮಕ್ಕಳು ಖಿನ್ನತೆಗೊಳಗಾಗುತ್ತಿದ್ದಾರೆ. ಇಂತಹ ಪರಿಸ್ಥಿತಿ ಬದಲು ಮಾಡಬೇಕಾದರೆ, ಎಲ್ಲ ವರ್ಗದ ಶಾಲೆಗಳನ್ನು ತೆರೆಯಬೇಕು. ಶಾಲೆ ಆರಂಭ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎಂದಾಕ್ಷಣ, ಎಲ್ಲರೂ ಕಡ್ಡಾಯವಾಗಿ ಪ್ರಾರಂಭಿಸಲೇ ಬೇಕು ಎಂದಿಲ್ಲ. ಆಯಾ ಸ್ಥಳದಲ್ಲಿರುವ ಸೋಂಕಿನ ಪ್ರಮಾಣ ನೋಡಿಕೊಂಡು ಶಾಲೆ ತೆರೆಯುವುದು ಉತ್ತಮ.
ಶಾಲೆಗಳ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿರುವುದನ್ನು ಶಿಕ್ಷಣ ತಜ್ಞರು ಮತ್ತು ವೈದ್ಯರು ಸ್ವಾಗತಿಸಿದ್ದಾರೆ. ಮಕ್ಕಳ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಶಾಲೆ ಆರಂಭಿಸಿರುವುದು ಉತ್ತಮ. ಕರೊನಾ ಮೂರನೇ ಅಲೆ ಬರುತ್ತದೆ ಎಂದು ಕಾಯುತ್ತಾ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ಸ್ವಲ್ಪ ಸಮಯದ ನಂತರ ಪೂರ್ವ ಪ್ರಾಥಮಿಕ ಶಾಲೆಗಳನ್ನೂ ಸಹ ಆರಂಭಿಸುವುದು ಉತ್ತಮ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಮೂರನೇ ಅಲೆಯ ಆಂತಕ ಇದೆ. ಇನ್ನೊಂದೆರಡು ತಿಂಗಳು ನೋಡಿ ಆನಂತರ ಶಾಲೆ ಆರಂಭಿಸಬೇಕೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಡಾ.ನಿಜಗುಣ, ಸದ್ಯ 2ನೇ ಅಲೆ ಅಂತ್ಯವಾಗಿದೆ ಎಂಬುದನ್ನು ನಾವು ಹೇಳುವುದಕ್ಕೆ ಕಷ್ಟ. ಅಲ್ಲದೆ, 3ನೇ ಅಲೆ ನಿಖರವಾಗಿ ಯಾವಾಗ ಬರಲಿದೆ ಎಂದು ಹೇಳುವುದೂ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದೇವೆ. ಸುಖಾ-ಸುಮ್ಮನೆ ಹೆದರಿ ಮನೆಯಲ್ಲೇ ಕುಳಿತುಕೊಳ್ಳುವ ಬದಲು ಶಾಲೆಗಳಿಗೆ ಬಂದು ಮನೋವಿಕಾಸ ವೃದ್ಧಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ವರ್ಚುವಲ್ ಅನ್ನೇ ಒಂದು ದೊಡ್ಡ ಪ್ರಪಂಚ ಎಂದು ಭಾವಿಸಿದ್ದಾರೆ. ಹೊರಗಿನ ಪ್ರಪಂಚ ನೋಡಬೇಕು. ಮೊದಲಿನಂತೆಯೇ ಕಲಿಕೆಯಲ್ಲಿ ತೊಡಬೇಕು ಎಂದರೆ, ಶಾಲೆ ಆರಂಭ ಅನಿವಾರ್ಯವಾಗಿದೆ. | ಪ್ರೊ.ಬಿ.ಆರ್.ಗೋಪಾಲ್ ಶಿಕ್ಷಣ ತಜ್ಞ ಎರಡನೇ ಅಲೆ ಅಂತ್ಯವಾಗಿಲ್ಲ. 3ನೇ ಅಲೆ ಬಂದಿಲ್ಲ. ಪರಿಸ್ಥಿತಿ ಈ ರೀತಿ ಇರುವಾಗ ಶಾಲೆ ಆರಂಭಿಸದೆ, 3ನೇ ಅಲೆಗಾಗಿ ಕಾಯುವುದು ವ್ಯರ್ಥ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆ ಆರಂಭಿಸಲು ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ. | ಡಾ.ನಿಜಗುಣ ಮಕ್ಕಳ ತಜ್ಞರು
ಮಕ್ಕಳ ಆರೋಗ್ಯ, ಕಲಿಕೆ ಹಿತದೃಷ್ಟಿಯಿಂದ ಶಾಲೆ ಆರಂಭಿಸುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಆದರೆ, ವಿದ್ಯಾರ್ಥಿಗಳಿಗೆ ನೀಡಲಾಗಿರುವ ಪಠ್ಯಕ್ರಮವನ್ನು ಪೂರ್ಣಗೊಳಿಸುವ, ಹೆಚ್ಚು ಹೋಮ್ ವರ್ಕ್ ನೀಡುವಂತಹ ಶಿಕ್ಷೆ ಬೇಡ. ಮಕ್ಕಳು ಮನೆಯಲ್ಲೇ ಕುಳಿತು ಆನ್ಲೈನ್ ಕ್ಲಾಸ್ ಪಾಠ ಕೇಳಿ. ಹೊರಗಿನ ಪ್ರಪಂಚವನ್ನೇ ಮರೆತುಬಿಟ್ಟಿದ್ದಾರೆ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳು ಎಂದಿನಂತೆ ತಮ್ಮ ದಿನ ನಿತ್ಯ ಚಟುವಟಿಕೆಯಲ್ಲಿ ತೊಡಬೇಕಾದಲ್ಲಿ ಶಾಲೆ ಆರಂಭಿಸುವುದು ಅನಿವಾರ್ಯವಾಗಿದೆ.
ಮದುವೆ, ಜಿಮ್ ಮಾಲ್ ಎಲ್ಲ ಕಡೆ ಮಕ್ಕಳು, ಜನರು ಭಾಗವಹಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಶಾಲೆ ಓಪನ್ ಆಗದೆ, ಇದ್ದದ್ದು ದುರಂತ. ಗೌರಿ-ಗಣೇಶ ಹಬ್ಬ ನಂತರ ಮಾಡಬಹುದಿತ್ತು ಎಂಬ ಪ್ರಶ್ನೆಗಳು ಸಹ ಇವೆ. ಬಹುಶಃ ಸರ್ಕಾರ ಮೊದಲ ಒಂದು ವಾರ ಪ್ರಾಯೋಗಿಕ ವಾರದ ರೀತಿ ಪರಿಗಣಿಸಲು ಹಬ್ಬಕ್ಕೆ ಒಂದು ವಾರ ಮೊದಲೇ ಶಾಲೆ ಆರಂಭಿಸಿದೆ. ಶಾಲೆಗಳಲ್ಲಿ ಸಮೂಹವಾಗಿ ಎಲ್ಲ ವಿದ್ಯಾರ್ಥಿಗಳನ್ನು ಸೇರಿಸಿ ಪ್ರಾರ್ಥನೆ ಮಾಡುವುದು. ಆಟದ ಮೈದಾನದಲ್ಲಿ ಹೆಚ್ಚಾಗಿ ಮಕ್ಕಳು ಸೇರುವುದಕ್ಕೆ ಅವಕಾಶ ನೀಡಬಾರದು. ಊಟ, ತಿಂಡಿ, ನೀರನ್ನು ಮನೆಯಿಂದಲೇ ತರಲು ಸೂಚಿಸಬೇಕು.
ಪಾಳಿ ವ್ಯವಸ್ಥೆ ಇರಲಿ: ಶಾಲೆಯಲ್ಲಿ ಪಾಳಿ ವ್ಯವಸ್ಥೆಯಲ್ಲಿ ಆರಂಭಿಸುವುದು ಉತ್ತಮ. ಒಂದೇ ಸಮಯಕ್ಕೆ ಎಲ್ಲರೂ ಆಗಮಿಸುವುದರಿಂದ ಗುಂಪುಗೂಡುವಿಕೆ ಹೆಚ್ಚಾಗಲಿದೆ. ಇದರ ಬದಲಾಗಿ ಪ್ರತಿ ತರಗತಿ ಆರಂಭದ ನಡುವೆ ಕೆಲವು ಗಂಟೆಗಳ ಕಾಲ ಅಂತರ ಕಾಯ್ದುಕೊಂಡು ವೇಳಾಪಟ್ಟಿ ರೂಪಿಸುವುದು ಉತ್ತಮ.
ಆನ್ಲೈನೂ ಇರಲಿ: ಆನ್ಲೈನ್ ತರಗತಿಗಳನ್ನು ತಕ್ಷಣ ರದ್ದು ಮಾಡುವುದು ಬೇಡ. ಮಕ್ಕಳನ್ನು ಶಾಲೆಗೆ ಕಳುಹಿಸಲು ಇಷ್ಟ ಇಲ್ಲದ ಪಾಲಕರಿಗೆ ಅಥವಾ ಭಯ ಇರುವ ಪಾಲಕರು ಆನ್ಲೈನ್ ತರಗತಿ ಅವಕಾಶ ನೀಡಬೇಕು.
ಸ್ವಂತ ವಾಹನ ಬಳಸಿ: ಶಾಲೆಗಳಲ್ಲಿ ಸುರಕ್ಷತಾ ಕ್ರಮ ಅನುಸರಿಸುವ ಜತೆಗೆ ಪಾಲಕರು ತಮ್ಮ ಮಕ್ಕಳ ಡ್ರಾಪ್ ಮತ್ತು ಪಿಕ್ ಅಪ್ಗೆ ಸಮೂಹ ಸಾರಿಗೆ ವ್ಯವಸ್ಥೆ ಬಳಸುವ ಬದಲು ಸ್ವಂತ ವಾಹನ ಬಳಸಿ. ಇದರಿಂದ ಅನವಶ್ಯಕ ಗುಂಪುಗೂಡುವಿಕೆ ತಪ್ಪಿಸಬಹುದು. ಇಲ್ಲವೆ, ಶಾಲಾ ವಾಹನಗಳಲ್ಲೂ ಭೌತಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯ ಮಾಡಬೇಕಿದೆ.