

ರಾಜ್ಯಸಭೆ ಚುನಾವಣೆಯಲ್ಲಿ ಮತ ವರ್ಗಾವಣೆ ಅಳುಕಿನಲ್ಲಿರುವ ಕಾಂಗ್ರೆಸ್ ಸೋಮವಾರ ಮಧ್ಯಾಹ್ನ ತನ್ನ ಶಾಸಕರನ್ನು ಹೋಟೆಲ್ಗೆ ಶಿಫ್ಟ್ ಮಾಡಲು ನಿರ್ಧರಿಸಿದೆ. ಬಿಜೆಪಿ, ಜೆಡಿಎಸ್ ಕೂಡ ಇಡೀ ಬೆಳವಣಿಗೆ ಮೇಲೆ ನಿಗಾ ಇಟ್ಟಿದ್ದು, ತಮ್ಮ ಮತಗಳನ್ನು ರಕ್ಷಿಸಿಕೊಂಡು ಎದುರಾಳಿಯ ಶಾಸಕರಿಗೆ ಖೆಡ್ಡಾ ತೋಡಿವೆ.
ಫೆ.27ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ನಿಂದ ಮೂವರು, ಜೆಡಿಎಸ್ನ ಒಬ್ಬರು ಹಾಗೂ ಬಿಜೆಪಿಯಿಂದ ಒಬ್ಬರು ಕಣದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ತನ್ನ ಶಾಸಕರಿಗೆ ಬಲೆ ಬೀಸುತ್ತಿರುವುದನ್ನು ಅರಿತ ಕಾಂಗ್ರೆಸ್, ಕೊನೆ ಹಂತದಲ್ಲಿ ಆಗಬಹುದಾದ ರಾಜಕೀಯ ಚಟುವಟಿಕೆಗೆ ಅವಕಾಶ ಕೊಡಬಾರದೆಂದು ಸೋಮವಾರ ಅಧಿವೇಶನ ಮುಗಿಯುತ್ತಿದ್ದಂತೆ ಶಾಸಕರನ್ನು ಒಟ್ಟಿಗೆ ಹೋಟೆಲ್ ಕರೆದೊಯ್ಯಲು ನಿರ್ಧರಿಸಿದೆ.
ಮಾನ್ಯತಾ ಟೆಕ್ ಪಾರ್ಕ್ ಆವರಣದಲ್ಲಿರುವ ಸಚಿವರೊಬ್ಬರಿಗೆ ಸೇರಿದ ಹೋಟೆಲ್ನಲ್ಲಿ 200 ಕೊಠಡಿ ಕಾಯ್ದಿರಿಸಿದ್ದು, ಅಂದು ಮಧ್ಯಾಹ್ನ 3 ಗಂಟೆಗೆ ಶಾಸಕಾಂಗ ಪಕ್ಷದ ಸಭೆಯನ್ನೂ ಕರೆಯಲಾಗಿದೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಚುನಾವಣೆ ಕುರಿತು ಶಾಸಕರಿಗೆ ಮಾರ್ಗದರ್ಶನ ಮಾಡಲಿದ್ದಾರೆ.
ಶಾಸಕರಿಗೆ ಸೂಚನೆ: ಶಾಸಕರು ಸೋಮವಾರ ಹೋಟೆಲ್ನಲ್ಲಿ ವಾಸ್ತವ್ಯ ಮಾಡಿ ಮಂಗಳವಾರ ನೇರವಾಗಿ ವಿಧಾನಸೌಧಕ್ಕೆ ಒಟ್ಟಿಗೆ ಬಸ್ನಲ್ಲಿ ತೆರಳಿ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದೆ ಆದ್ದರಿಂದ ಒಂದು ದಿನದ ವಾಸ್ತವ್ಯಕ್ಕೆ ಸಿದ್ಧತೆ ಮಾಡಿಕೊಂಡು ಬರುವಂತೆ ಡಿ.ಕೆ ಶಿವಕುಮಾರ್ ಶಾಸಕರಿಗೆ ಸೂಚನೆ ನೀಡಿದ್ದಾರೆ.
ಈ ವಿಚಾರದಲ್ಲಿ ಶಾಸಕರೊಂದಿಗೆ ಸಂವಹನ ನಡೆಸಲು ಸಚಿವ ಕೃಷ್ಣಬೈರೇಗೌಡ, ಬೈರತಿ ಸುರೇಶ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿ ಎಂಟು ಮಂದಿಗೆ ಜವಾಬ್ದಾರಿ ನೀಡಲಾಗಿದೆ.
ಜನಾರ್ದನ ರೆಡ್ಡಿಗೆ ಗಾಳ: ಪಕ್ಷದ 135 ಶಾಸಕರು, ಮೂವರು ಪಕ್ಷೇತರರು ಸೇರಿ 138 ಶಾಸಕರ ಬಲ ಹೊಂದಿರುವ ಆಡಳಿತಾರೂಢ ಕಾಂಗ್ರೆಸ್, ತನ್ನ ಬಲವನ್ನು ಇನ್ನಷ್ಟು ವೃದ್ಧಿಸಿಕೊಂಡು ಜೆಡಿಎಸ್ಗೆ ಯಾವುದೇ ಹಂತದಲ್ಲೂ ಅವಕಾಶ ಕೊಡದಂತೆ ಪ್ರಯತ್ನ ನಡೆಸಿದೆ. ಶುಕ್ರವಾರ ಡಿಸಿಎಂ ಡಿ.ಕೆ ಶಿವಕುಮಾರ್ ವಿಧಾನಸಭೆ ಕಲಾಪ ನಡೆಯುವ ವೇಳೆಯೇ ಶಾಸಕ ಜನಾರ್ದನ ರೆಡ್ಡಿ, ದರ್ಶನ್ ಪುಟ್ಟಣ್ಣಯ್ಯ ಅವರೊಂದಿಗೆ ಚುನಾವಣೆ ಸಂಬಂಧ ಸಮಾಲೋಚನೆ ನಡೆಸಿದ್ದರು. ಗುರುವಾರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಾರ್ದನ ರೆಡ್ಡಿ ಜತೆ ಮಾತುಕತೆ ನಡೆಸಿದ್ದರು.
ಈ ವಿಷಯವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, 138 ಜನ ಶಾಸಕರು ನಮ್ಮ ಜತೆ ಇದ್ದಾರೆ. ಜನಾರ್ದನ ರೆಡ್ಡಿ ಅವರ ಬಳಿಯೂ ಮತ ಹಾಕುವಂತೆ ಮನವಿ ಮಾಡುತ್ತೇನೆ. ಅಧಿವೇಶನ ಮುಗಿದ ನಂತರ ಖಾಸಗಿ ಹೋಟೆಲ್ನಲ್ಲಿ ಶಾಸಕಾಂಗ ಪಕ್ಷದ ಸಭೆ ಇದೆ. ಅಲ್ಲಿ ಅಣಕು ಮತದಾನ ನಡೆಸುತ್ತೇವೆ. ನಮ್ಮ ಬಳಿ ಹೆಚ್ಚುವರಿ ಮತಗಳಿವೆ. ನಮ್ಮ ಮನೆಯನ್ನು ಎಷ್ಟು ಬಿಗಿ ಮಾಡಿಕೊಳ್ಳಬೇಕೊ ಅದನ್ನು ಮಾಡುತ್ತೇವೆ. ಇತರೆ ಪಕ್ಷದವರು ನಮ್ಮ ಜತೆ ಸಂಪರ್ಕದಲ್ಲಿ ಇದ್ದಾರೆ, ಅದನ್ನು ಬಹಿರಂಗಗೊಳಿಸುವುದಿಲ್ಲ. ಅವರ ಜೀವನ ಹಾಳು ಮಾಡಲು ನನಗೆ ಇಷ್ಟವಿಲ್ಲ ಎಂದು ತಿಳಿಸಿದರು.
ತಲೆ ಕೆಡಿಸಿಕೊಳ್ಳಲ್ಲ...
ರಾಜ್ಯಸಭೆ ಚುನಾವಣೆ ಸಂಬಂಧ ಕುಮಾರಸ್ವಾಮಿ ಮತ್ತು ಅಮಿತ್ ಷಾ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇಬ್ಬರೂ ಏನೇನು ಚರ್ಚೆ ಮಾಡಿದ್ದಾರೆ ಎನ್ನುವ ಅರಿವು ನಮಗಿದೆ. ಯಾವ, ಯಾವ ಶಾಸಕರಿಗೆ ದೂರವಾಣಿ ಕರೆ ಮಾಡಿ ಏನೇನು ಮಾತನಾಡಿದ್ದಾರೆ ಎನ್ನುವುದು ಗೊತ್ತಿದೆ. ಶಾಸಕರ ಸಂಬಂಧಿಕರು, ಸ್ನೇಹಿತರ ಮೂಲಕ ಏನೇನು ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ನಮಗೆ ತಿಳಿದಿದೆ. ನಮ್ಮ ಬತ್ತಳಿಕೆಯಲ್ಲಿ ಏನಿದೆ ಎನ್ನುವುದು ಅವರಿಗೆ ಗೊತ್ತಿದೆ. ಅವರ ಬತ್ತಳಿಕೆಯಲ್ಲಿ ಏನಿದೆ ಎನ್ನುವುದು ನಮಗೆ ಗೊತ್ತಿದೆ. ಈ ವಿಚಾರಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲರ ಮೇಲೆ ನಾವು ನಿಗಾ ಇಟ್ಟಿದ್ದೇವೆ ಎಂದರು.