ಭಕ್ತರನ್ನು ಧರ್ಮ ಮಾರ್ಗದಲ್ಲಿ ಮುನ್ನಡೆಸಿ

28bdvt2
ಭದ್ರಾವತಿಯ ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿದ್ದ ಅರ್ಚಕರ ತರಬೇತಿ ಶಿಬಿರದಲ್ಲಿ ಕೃಷ್ಣಮೂರ್ತಿ ಸೋಮಯಾಜಿ ಮಾತನಾಡಿದರು. ಎಸ್.ವಿ.ರಾಮಾನುಜ ಅಯ್ಯಂಗಾರ್, ಹಾ.ರಾಮಪ್ಪ, ಸತೀಶ್ ಭಟ್ ಇತರರಿದ್ದರು.
Published on

ಭದ್ರಾವತಿ: ಭಕ್ತರನ್ನು ಧರ್ಮಮಾರ್ಗದಲ್ಲಿ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಅರ್ಚಕರ ಮೇಲಿದ್ದು, ವೃತ್ತಿ ಪಾವಿತ್ರೃತೆ ಅರಿತು ಕೆಲಸ ಮಾಡಬೇಕು ಎಂದು ಶ್ರೀ ಧರ್ಮ ಜಾಗರಣಾ ಅರ್ಚಕರ ಮಹಾಸಭಾ ತಾಲೂಕು ಘಟಕದ ಗೌರವಾಧ್ಯಕ್ಷ ಕೃಷ್ಣಮೂರ್ತಿ ಸೋಮಯಾಜಿ ಹೇಳಿದರು.

ಜನ್ನಾಪುರದ ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಧರ್ಮ ಜಾಗರಣಾ ಅರ್ಚಕರ ಮಹಾಸಭಾದಿಂದ 4 ದಿನಗಳ ಕಾಲ ಆಯೋಜಿದ್ದ ಅರ್ಚಕರ ತರಬೇತಿ ಶಿಬಿರ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಅರ್ಚಕರ ವೃತ್ತಿ ಕಷ್ಟಕರ ಆಗಿದ್ದರೂ ಅದರ ಶ್ರೇಷ್ಠತೆ ಮಹತ್ವಪೂರ್ಣ. ಹಿಂದು ಧರ್ಮದಲ್ಲಿ ಹುಟ್ಟಿದ ನಾವೆಲ್ಲರೂ ಸನ್ಮಾರ್ಗದಲ್ಲಿ ನಡೆಯಬೇಕು. ಧರ್ಮ ಆಚರಣೆಗಳ ಬಗ್ಗೆ ತಿಳಿವಳಿಕೆ ಹೊಂದಿರಬೇಕು. ಪೂಜಾ ವಿಧಾನಗಳ ಬಗ್ಗೆ ಗುರುಗಳು ತಿಳಿಸಿಕೊಟ್ಟಿರುವಂತೆ ಅರ್ಚಕರು ಪಾಲಿಸಬೇಕು ಎಂದು ತಿಳಿಸಿದರು.

ಧರ್ಮ ಜಾಗರಣಾ ಅರ್ಚಕರ ಮಹಾಸಭಾವು 350 ಸದಸ್ಯರನ್ನು ಒಳಗೊಂಡಿದ್ದು, ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಕಷ್ಟದಲ್ಲಿರುವ ಸದಸ್ಯರಿಗೆ ಸ್ಪಂದಿಸುತ್ತಿದೆ. ಭವನ ಕಟ್ಟುವ ಪ್ರಯತ್ನ ನಡೆಯುತ್ತಿದ್ದು, ಪದಾಧಿಕಾರಿಗಳು ಹೆಚ್ಚು ಶ್ರಮ ವಹಿಸಬೇಕು ಎಂದರು.

ವಿಶ್ವ ಹಿಂದು ಪರಿಷತ್ ಪ್ರಾಂತ ಉಪಾಧ್ಯಕ್ಷ ಹಾ. ರಾಮಪ್ಪ ಮಾತನಾಡಿ, ಹಿಂದು ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಜನರು ತಮ್ಮ ಇಷ್ಟಾನುಸಾರ ಭಕ್ತಿಯಿಂದ ದೇವರನ್ನು ಸ್ಮರಿಸಬಹುದು. ಆ ಮೂಲಕ ಸನಾತನ ಧರ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ನಮ್ಮೆಲ್ಲರಿಂದ ಆಗಬೇಕು. ವಿಶ್ವ ಹಿಂದು ಪರಿಷತ್ ಅದೇ ಮಾರ್ಗದಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ದೇವಸ್ಥಾನಗಳು ನಿರ್ಮಾಣಗೊಂಡಿವೆ. ಅರ್ಚಕರು ದೇವಸ್ಥಾನಕ್ಕೆ ಬರುವ ಭಕ್ತರನ್ನು ಪ್ರೀತಿಯಿಂದ ಕಾಣಬೇಕು. ಧರ್ಮದ ಸಾರವನ್ನು ತಿಳಿಸಿ ಹೇಳಬೇಕು. ಇದರಿಂದ ಗ್ರಾಮ ಹಾಗೂ ದೇವಸ್ಥಾನದ ಅಭಿವೃದ್ದಿ ಸಾಧ್ಯ ಎಂದು ತಿಳಿಸಿದರು. ಮಹಾಸಭಾದ ಅಧ್ಯಕ್ಷ ಎಸ್.ವಿ.ರಾಮಾನುಜ ಅಯ್ಯಂಗಾರ್, ಸತೀಶ್ ಭಟ್, ಪ್ರಮುಖರಾದ ಓಂಕಾರಯ್ಯ, ರಂಗಪ್ಪ, ಪ್ರಧಾನ ಕಾರ್ಯದರ್ಶಿ ಜೆ.ಪಿ.ಗಣೇಶ್ ಪ್ರಸಾದ್, ನಾರಾಯಣಮೂರ್ತಿ, ಡಿ.ಸಂಜೀವ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net