ಗಂಡ-ಹೆಂಡತಿ ಮಾತುಕತೆಯ ಎಲ್ಲವನ್ನೂ ಹೊರಗೆ ಹೇಳೋಕಾಗಲ್ಲ: ಡಿ.ಕೆ.ಶಿವಕುಮಾರ್ ಭೇಟಿ ಬಳಿಕ ಸವದಿ ಹೀಗಂದಿದ್ಯಾಕೆ?

Savadi DKS
Published on

ವಿಜಯಪುರ: ಬಿಜೆಪಿಯಿಂದ ಬಂದು ಕಾಂಗ್ರೆಸ್​ನಿಂದ ಶಾಸಕರಾಗಿ ಗೆದ್ದು ಬೀಗಿರುವ ಲಕ್ಷ್ಮಣ ಸವದಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಭೇಟಿಯಾಗಿದ್ದಾರೆ. ಕಾಂಗ್ರೆಸ್​ನಲ್ಲಿ ಸಚಿವ ಸ್ಥಾನವಂಚಿತರ ಒಂದಷ್ಟು ಅಸಮಾಧಾನ ಹೊಗೆಯಾಡುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದ್ದು, ಕುತೂಹಲವನ್ನು ಕೆರಳಿಸಿದೆ. ಈ ಮಧ್ಯೆ ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಣ ಸವದಿ ಒಗಟಾಗಿ ಮಾತನಾಡಿರುವುದು ಮತ್ತಷ್ಟು ಗಮನ ಸೆಳೆದಿದೆ.

ಡಿ.ಕೆ. ಶಿವಕುಮಾರ್ ಇಂದು ಲಕ್ಷ್ಮಣ ಸವದಿಯ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಈ ಕುರಿತು ವಿಜಯಪುರ ಜಿಲ್ಲೆಯ ಇಂಚಗೇರಿ ಮಠದಲ್ಲಿ ಲಕ್ಷ್ಮಣ ಸವದಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದು, ಇದೊಂದು ಸೌಜನ್ಯದ ಭೇಟಿ ಎಂದಿದ್ದಾರೆ. ಡಿ.ಕೆ. ಶಿವಕುಮಾರ್​ ಪಕ್ಷದ ರಾಜ್ಯಾಧ್ಯಕ್ಷರು, ಬಿಡುವಿಲ್ಲದ ಕಾರಣ ಈವರೆಗೆ ಭೇಟಿ ಆಗಲು ಆಗಿರಲಿಲ್ಲ. ಮುಂದಿನ ರಾಜಕೀಯ ಚಟುವಟಿಕೆಗಳ ಬಗ್ಗೆ ಮಾತನಾಡಿದ್ದಾರೆ ಎಂದೂ ಹೇಳಿದ್ದಾರೆ.

ಅಲ್ಲದೆ ಸಚಿವ ಸ್ಥಾನದ ಕುರಿತು ಪ್ರತಿಕ್ರಿಯೆ ನೀಡಿದ ಸವದಿ, ಮಂತ್ರಿಯಾಗುವ ಬಯಕೆ ಎಲ್ಲರಿಗೂ ಇರುತ್ತದೆ, ಆದರೆ ಅದು ಕಷ್ಟ ಸಾಧ್ಯ ಎಂದಿದ್ದಾರೆ. ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ ಗೆದ್ದಿದೆ. ಹಳಬರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಬಂದಿದ್ದಾರೆ‌. ಹಳಬರಿಗೆ ಪ್ರಾತಿನಿಧ್ಯ ಕೊಡಬೇಕಾದ್ದು ಅನಿವಾರ್ಯವಾಗಿರುತ್ತದೆ. ಎಲ್ಲರಿಗೂ ಮಂತ್ರಿಯಾಗಲು ಆಗುವುದಿಲ್ಲ. ಹಾಗಂತ ಬಯಕೆ, ಅಪೇಕ್ಷೆ ಪಡುವುದು ತಪ್ಪಲ್ಲ ಎಂದಿದ್ದಾರೆ.

ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಮೊದಲು ಶಾಸಕ, ಬಳಿಕ ಸಚಿವ, ಬಳಿಕ‌ ಡಿಸಿಎಂ-ಸಿಎಂ ಆಗಬೇಕು ಎನ್ನುತ್ತೇವೆ. ಮನುಷ್ಯನ ಕನಸುಗಳಿಗೆ ಮಿತಿ ಇಲ್ಲ. ಎಲ್ಲರಿಗೂ ಸಚಿವ ಸ್ಥಾನ ಕೊಡಲು ಸಾಧ್ಯವಿಲ್ಲ. ನಾವು ಇತ್ತೀಚಿಗೆ ಕಾಂಗ್ರೆಸ್‌ಗೆ ಬಂದಿದ್ದೇವೆ, ಅದಾಗ್ಯೂ ಪಕ್ಷ ಹೆಚ್ಚು ಸೀಟು ಗೆಲ್ಲಲು ನಮ್ಮದೇ ಆದ ಕಾರ್ಯ ಮಾಡಿದ್ದೇವೆ. ಎಲ್ಲವೂ ಪಕ್ಷದ ನಾಯಕರಿಗೆ ಗೊತ್ತಿದೆ ಎಂಬ ಮಾತನ್ನೂ ಸವದಿ ಹೇಳಿದ್ದಾರೆ.

ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಡಿ.ಕೆ.ಶಿವಕುಮಾರ್​ ಭೇಟಿ ವೇಳೆ ನಡೆದ ಕೆಲವು ವಿಚಾರ ಹೇಳಲು ಆಗುವುದಿಲ್ಲ. ಗಂಡ ಹೆಂಡತಿ ನಡುವೆ ನಡೆದ ಮಾತುಕತೆ ಎಲ್ಲವನ್ನೂ ಹೊರಗೆ ಹೇಳೋಕಾಗಲ್ಲ ಎನ್ನುವ ಮೂಲಕ ಇಬ್ಬರ ನಡುವಿನ ಮಾತುಕತೆ ಕುರಿತು ಸವದಿ ಜನರಲ್ಲಿ ಕೌತುಕ ಉಂಟಾಗುವಂತೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net