ವಕೀಲರೊಬ್ಬರ ಮೃತದೇಹ ಅನುಮಾನಾಸ್ಪದವಾಗಿ ಪತ್ತೆ

Crime Logo
Published on

ಬೆಂಗಳೂರು: ನೈಸ್ ರಸ್ತೆಯಲ್ಲಿ ವಕೀಲರೊಬ್ಬರ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು, ಜಗದೀಶ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.

ಕೆಂಗೇರಿಯ ಎಸ್‌ಎಂವಿ ಲೇಔಟ್ ನಿವಾಸಿ ಜಗದೀಶ್ (೪೬) ಅವರ ಮೃತದೇಹ ಶುಕ್ರವಾರ ರಾತ್ರಿ ೭:೫೦ ರ ವೇಳೆ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಮೃತದೇಹದಿಂದ ಸ್ವಲ್ಪ ದೂರದಲ್ಲಿ ಅವರ ಕಿಯಾ ಸೆಲ್ಟೋಸ್ ಕಾರಿನ ಪಾರ್ಕಿಂಗ್ ಲೈಟ್ ಆನ್ ಆಗಿತ್ತು, ಬಾಗಿಲು ಲಾಕ್ ಆಗಿದ್ದವು. ಕಾರಿನ ಇಂಜಿನ್ ಕೂಡ ಆನ್ ಆಗಿದ್ದ ಸ್ಥಿತಿಯಲ್ಲಿ ನಿಲ್ಲಿಸಲಾಗಿತ್ತು. ಕಾರಿನ ಬಲ ಮತ್ತು ಎಡಭಾಗದಲ್ಲಿ ಜಖಂಗೊಂಡಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಗದೀಶ್ ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ಮೂಲದವರಾಗಿದ್ದು, ನಗರದಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಶಂಕಿಸಿ ಅವರ ಸೋದರ ಸಂಬಂಧಿ ಡಾ.ಪ್ರಭಂಜನ್ ಎಂಬುವರು ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಂಗೇರಿಯ ನೈಸ್ ರಸ್ತೆಯ ಸಿ.ವಿ.ರಾಮನ್ ಎಸ್ಟೇಟ್ ಜಂಕ್ಷನ್‌ನಲ್ಲಿ ಮೃತದೇಹ ಬಿದ್ದಿದೆ ಎಂದು ಸಾರ್ವಜನಿಕರು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿ ಬಂದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು.

ಕೊಲೆ ಮಾಡಿರುವ ಶಂಕೆ:

ಕಾರಿನಿಂದ ಸುಮಾರು ೧೫೦ ಮೀಟರ್ ದೂರದಲ್ಲಿ ಜಗದೀಶ್ ಅವರ ಮೃತದೇಹ ಪತ್ತೆಯಾಗಿದೆ. ಅವರ ಎಡಗಾಲು ಮತ್ತು ಹೊಟ್ಟೆಯಲ್ಲಿ ತರಚಿದ ಗಾಯಗಳಿದ್ದವು. ತಲೆಯ ಹಿಂಭಾಗ ಬಲವಾದ ಪೆಟ್ಟು ಬಿದ್ದು ಮೆದುಳು ಹೊರಗೆ ಬಂದಿದೆ. ದುಷ್ಕರ್ಮಿಗಳು ಅಪಘಾತ ಮಾಡಿದ ನಂತರ ವಾಹನದಿಂದ ಹೊರಗೆ ಬರುವಂತೆ ಒತ್ತಾಯಿಸಿ ನಂತರ ಅವರನ್ನು ಕೊಲೆ ಮಾಡಿದ್ದಾರೆ. ಜತೆಗೆ ಅವರ ಮೊಬೈಲ್ ಕೂಡ ನಾಪತ್ತೆಯಾಗಿದೆ. ಜಗದೀಶ್ ಅವರನ್ನು ಯಾರೋ ಅಪರಿಚಿತರು ಕೊಲೆ ಮಾಡುವ ಉದ್ದೇಶದಿಂದ ಅವರ ಕಾರಿಗೆ ಅಪಘಾತ ಮಾಡಿ, ಅವರು ಕೆಳಗೆ ಇಳಿಯುವಂತೆ ಮಾಡಿ ನಂತರ ಯಾವುದೋ ಆಯುಧದಿಂದ ಕೊಲೆ ಮಾಡಿದ್ದು, ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಡಾ.ಪ್ರಭಂಜನ್ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net