ಪಾಟ್ನಾದ ಪೊಲೀಸ್ ಠಾಣೆ ಬಳಿ ಹಾಡಹಗಲೇ ವಕೀಲನ ಗುಂಡಿಕ್ಕಿ ಹತ್ಯೆ| dead

Uncle slaps
Published on

ಪಾಟ್ನಾ; ಹಾಡಹಗಲೇ ವಕೀಲರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಇಂದು (13) ಪಾಟ್ನಾದ ಸುಲ್ತಾನಗಂಜ್ ಪೊಲೀಸ್ ಠಾಣೆಯಿಂದ ಕೇವಲ 300 ಮೀಟರ್ ದೂರದಲ್ಲಿ ನಡೆದಿದೆ. ಈ ಘಟನೆಯು ಸ್ಥಳೀಯರಲ್ಲಿ ಭಯ ಭೀತಿಯನ್ನು ಉಂಟುಮಾಡಿದ್ದು, ರಾಜ್ಯದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಘಟನೆಗಳ ಬಗ್ಗೆ ಅಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಮೃತ ವಕೀಲರನ್ನು ಜಿತೇಂದ್ರ ಕುಮಾರ್ ಎಂದು ಗುರುತಿಸಲಾಗಿದ್ದು, ಅವರು ಕಳೆದ ಎರಡು ವರ್ಷಗಳಿಂದ ಸಕ್ರಿಯವಾಗಿ ವಕೀಲರಾಗಿ ಸೇವೆ ಸಲ್ಲಿಸುತ್ತಿರಲಿಲ್ಲ ಎನ್ನಲಾಗಿದೆ. ಜಿತೇಂದ್ರ ಕುಮಾರ್ ಚಹಾ ಕುಡಿದು ಹಿಂತಿರುಗುತ್ತಿದ್ದಾಗ ಈ ದಾಳಿ ನಡೆದಿದೆ ಎನ್ನಲಾಗಿದೆ.

ಇನ್ನೂ ಘಟನೆ ಬಗ್ಗೆ ಪಾಟ್ನಾ ಪೂರ್ವ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪರಿಚಯ್ ಕುಮಾರ್ ಮಾತನಾಡಿದ್ದು, ಜಿತೇಂದ್ರ ಕುಮಾರ್ ಅವರು ಚಹಾ ಅಂಗಡಿಯ ಬಳಿ ಇದ್ದಾಗ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಪಿಎಂಸಿಎಚ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು ಎಂದು ಹೇಳಿದ್ದಾರೆ. ಘಟನಾ ಸ್ಥಳದಿಂದ ಮೂರು ಖಾಲಿ ಗುಂಡುಗಳ ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಾಳಿಯ ಬಳಿಕ ಅಪರಾಧಿಗಳು ಸ್ಥಳದಿಂದ ಪರಾರಿಯಾಗಿದ್ದು, ಗುಂಡಿನ ಸದ್ದು ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಲ್ತಾನಗಂಜ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

(ಏಜೆನ್ಸೀಸ್)

ಕಳೆದ 24 ಗಂಟೆಗಳಲ್ಲಿ ಪಾಟ್ನಾದಲ್ಲಿ ನಡೆದ ಮೂರನೇ ಮತ್ತು ಬಿಹಾರದಲ್ಲಿ ನಡೆದ ನಾಲ್ಕನೇ ಕೊಲೆ ಇದಾಗಿದೆ. ಶನಿವಾರ ಬಿಹಾರದ ಸೀತಾಮರ್ಹಿ ಜಿಲ್ಲೆಯ ಮೆಹ್ಸೌಲ್ ಚೌಕ್‌ನಲ್ಲಿ ಅಪರಿಚಿತ ದುಷ್ಕರ್ಮಿಗಳು ಉದ್ಯಮಿ ಪುಟು ಖಾನ್ ಅವರ ತಲೆಗೆ ಗುಂಡು ಹಾರಿಸಿದರು. ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಸಾವನ್ನಪ್ಪಿದರು. ಭಾನುವಾರ ಬಿಹಾರದ ಶೇಖ್‌ಪುರ ಜಿಲ್ಲೆಯಲ್ಲಿ ಮಾಜಿ ಬಿಜೆಪಿ ಕಿಸಾನ್ ಮೋರ್ಚಾ ನಾಯಕ ಸುರೇಂದ್ರ ಕೆವಾತ್ ಅವರನ್ನು ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದರು. ಪಾಟ್ನಾದ ರಾಮಕೃಷ್ಣ ನಗರ ಪ್ರದೇಶದಲ್ಲಿ ದಿನಸಿ ಅಂಗಡಿ ಮಾಲೀಕ ವಿಕ್ರಮ್ ಝಾ ಅವರನ್ನು ಅಪರಿಚಿತ ದುಷ್ಕರ್ಮಿಯೊಬ್ಬರು ಗುಂಡಿಕ್ಕಿ ಕೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net