

ಬೆಂಗಳೂರು: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಧಿಕಾರಿಗಳು ಹೈಕೋರ್ಟ್‌ಗೆ ೨,೩೦೦ ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ.
ವಕೀಲೆ ಜೀವಾ ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ನಲ್ಲಿ ಡಿವೈಎಸ್ಪಿ ಕನಕಲಕ್ಷ್ಮೀ ವಿರುದ್ಧ ಉಲ್ಲೇಖಿಸಿದ್ದ ಶೇ.೯೦ರಷ್ಟು ಅಂಶಗಳು ಸತ್ಯ ಎಂದು ಚಾರ್ಜ್‌ಶೀಟ್‌ನಲ್ಲಿ ಎಸ್‌ಐಟಿ ಉಲ್ಲೇಖಿಸಿದೆ.
ಸಿಬಿಐ ಎಸ್ಪಿ ವಿನಾಯಕ್ ವರ್ಮಾ, ಸಿಸಿಬಿ ಡಿಸಿಪಿ ಅಕ್ಷಯ್ ಮಚೀಂದ್ರ, ನಿಶಾ ಜೇಮ್ಸ್ ನೇತೃತ್ವದಲ್ಲಿ ಹೈಕೋರ್ಟ್ ರಚಿಸಿದ್ದ ಎಸ್‌ಐಟಿ ಆರೋಪಪಟ್ಟಿಯನ್ನು ಇತ್ತೀಚೆಗೆ ಕೋರ್ಟ್‌ಗೆ ಸಲ್ಲಿಸಿದೆ.
ವಕೀಲೆ ಜೀವಾಗೆ ಡಿವೈಎಸ್ಪಿ ಕನಕಲಕ್ಷ್ಮೀ ವಿಚಾರಣೆ ನೆಪದಲ್ಲಿ ಕಿರುಕುಳ ಹಾಗೂ ಚಿತ್ರಹಿಂಸೆ ನೀಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ಸಹೋದರಿ, ಕನಕಲಕ್ಷ್ಮೀ ತಂಡದಲ್ಲಿದ್ದ ಕೆಲ ಅಧಿಕಾರಿ-ಸಿಬ್ಬಂದಿ ಸೇರಿ ಸುಮಾರು ೮೦ ಕ್ಕೂ ಹೆಚ್ಚು ಸಾಕ್ಷಿದಾರರು, ಜೀವಾ ಬರೆದಿಟ್ಟ ಡೆತ್‌ನೋಟ್ ಪುಟಗಳು, ಹಲ್ಲೆ ಹಾಗೂ ಚಿತ್ರಹಿಂಸೆ ನೀಡಿದ ವಿಡಿಯೋ ಸಾಕ್ಷ್ಯಗಳು, ನಕಲಿ ದಾಖಲೆ ಸೃಷ್ಟಿ, ಮಾನಸಿಕ ಹಿಂಸೆ ನೀಡುವುದರ ಜತೆಗೆ ತನಿಖಾಧಿಕಾರಿ, ಈ ಪ್ರಕರಣದ ತನಿಖೆಯನ್ನು ವೈಯಕ್ತಿಕವಾಗಿ ಪರಿಗಣಿಸಿದ್ದರು. ೨೫ ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿರುವುದು ಸಾಬೀತಾಗಿದೆ ಎಂಬ ಅಂಶಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಡಿಯೊ ಡಿಲಿಟ್ ಮಾಡಲಾಗಿತ್ತು:
ಪ್ರಕರಣ ದಾಖಲಾದ ಮೇಲೆ ಜೀವಾ ಅವರ ವಿಚಾರಣೆ ವೇಳೆ ಚಿತ್ರೀಕರಿಸಲಾಗಿದ್ದ ವಿಡಿಯೋದ ಕೆಲವೊಂದು ತುಣುಕುಗಳನ್ನು ಡಿಲಿಟ್ ಮಾಡಲಾಗಿತ್ತು. ಜೀವಾ ಅವರನ್ನು ವಿವಸಗೊಳಿಸಿರುವುದು ಹಾಗೂ ಇತರೆ ಕೆಲವೊಂದು ತುಣುಕುಗಳು ಇರಲಿಲ್ಲ. ಎ್ಎಸ್‌ಎಲ್ ತಜ್ಞರ ಮೂಲಕ ಮರು ಸಂಗ್ರಹಿಸಿದ ಬಳಿಕ ಆ ವಿಡಿಯೊಗಳು ಪತ್ತೆಯಾಗಿವೆ. ಈ ವಿಡಿಯೋಗಳನ್ನು ತೋರಿಸಿ ಡಿವೈಎಸ್ಪಿ ವಿಚಾರಣೆ ನಡೆಸಿದಾಗ, ಜೀವಾ ಅವರ ದೇಹ ಪರಿಶೀಲಿಸಿದ್ದು ಮತ್ತು ಹಲ್ಲೆ ನಡೆಸಿರುವುದು ನಿಜ ಎಂಬುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಎಲ್ಲ ಅಂಶಗಳನ್ನೂ ಉಲ್ಲೇಖಿಸಿ ವರದಿ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.