ಬೆಂಗಳೂರು: (Lawyer files complaint) ಆರೋಗ್ಯ ಇಲಾಖೆಯ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದಲ್ಲಿ (ಕೆಎಸ್ಎಂಎಸ್ಸಿಎಲ್ ) ಟೆಂಡರ್ ಅಕ್ರಮ, ಕಮಿಷನ್ ದಂಧೆ, ಕಿಕ್ಬ್ಯಾಕ್ ಮತ್ತು ಅಧಿಕಾರಿಗಳ ಕರ್ತವ್ಯ ಲೋಪ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ವಕೀಲ ಎ.ಸಿ.ವಿಷ್ಣುಪ್ರಸಾದ್ ಎಂಬುವರು, ರಾಜ್ಯಪಾಲೆ ಡಾ.ಸುಧಾ ಯಾದವ್, ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ಗೆ ದೂರು ಕೊಟ್ಟಿದ್ದಾರೆ.
6 ಪುಟಗಳ ದೂರಿನಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿರುವುದು, ಕಂಪನಿಗಳಿಂದ ಕಮಿಷನ್ ವಸೂಲಿ, ಕಿಕ್ಬ್ಯಾಕ್, ಅಧಿಕಾರಿಗಳ ಕರ್ತವ್ಯ ಲೋಪ, ವಿವಿಧ ಕಂಪನಿಗಳೊಂದಿಗೆ ಪ್ರತ್ಯೇಕ ದರ ನಿಗದಿ, ಪಾಲುದಾರಿಕೆ ಹೆಸರಿನಲ್ಲಿ ಟೆಂಡರ್ಗಳಲ್ಲಿ ಭಾಗವಹಿಸುವಂತೆ ಮಾಡುವುದು, ಸಚಿವರ ಸಂಬಂಧಿಕರಿಂದ ಟೆಂಡರ್ ಮೇಲೆ ನಿಯಂತ್ರಣ, ಸಚಿವರ ಹೆಸರು ಬಳಸಿಕೊಂಡು ಹಣ ವಸೂಲಿ ಹಾಗೂ ಉಪಕರಣದ ಖರೀದಿಗೆ ಪ್ರತ್ಯೇಕ ಕಮಿಷನ್ ನಿಗದಿಪಡಿಸುವ ಕುರಿತು ತನಿಖೆ ನಡೆಸುವಂತೆ ದೂರುದಾರರು ಮನವಿ ಮಾಡಿದ್ದಾರೆ.
ನಿಗಮದ ಲೋಪದೋಷಗಳ ಬಗ್ಗೆ ಸ್ವತಃ ಆರೋಗ್ಯ ಸಚಿವ ಯು.ಟಿ ಖಾದರ್, ಆಯುಕ್ತರಿಗೆ ಬರೆದಿರುವ ಪತ್ರ ಪತ್ರದಲ್ಲಿ ನಿಗಮದ ಕಾರ್ಯಲೋಪಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಹಾಗಾಗಿ, ಟೆಂಡರ್ ಪಡೆದ ಕಂಪನಿಗಳ ತಾಂತ್ರಿಕ ಅರ್ಹತೆ, ಕಾರ್ಯಾದೇಶ, ಸರಬರಾಜು ದಾಖಲೆ, ಗುಣಮಟ್ಟ ಪರಿಶೀಲನೆ ಮತ್ತು ಬಿಲ್ಗಳ ಪಾವತಿ ಕುರಿತು ಸಮಗ್ರ ಲೆಕ್ಕಪರಿಶೋಧನೆ ಆಗಬೇಕು. ಹಲವು ವರ್ಷಗಳಿಂದ ವೈದ್ಯಕೀಯ ಉಪಕರಣಗಳ ಸರಬರಾಜು ಮಾಡುತ್ತಿರುವ ಖಾಸಗಿ ಮಧ್ಯವರ್ತಿಯೊಬ್ಬರು, ನಿಗಮದ ಟೆಂಡರ್ ಪ್ರಕ್ರಿಯೆಯಲ್ಲಿ ಅನಧಿಕೃತವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ನಿಗಮದ ಪ್ರಧಾನ ವ್ಯವಸ್ಥಾಪಕಿ (ಆಡಳಿತ ಮತ್ತು ಖರೀದಿ) ಡಾ. ಬಸಂತಿ, ವೈದ್ಯಕೀಯ ಉಪಕರಣ ವಿಭಾಗದ ವ್ಯವಸ್ಥಾಪಕ ಡಾ. ಪ್ರಶಾಂಶ್ ಭಟ್, ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕ ರಾಮು ಮೆಕಾ ಅವರ ಕಾರ್ಯವೈಖರಿ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಟೆಂಡರ್ಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಹೊರಗಿನ ವ್ಯಕ್ತಿಗಳಿಗೆ ಸೋರಿಕೆ ಮಾಡುವುದು, ಟೆಂಡರ್ ಕಡತಗಳ ವಿಲೇವಾರಿಯಲ್ಲಿ ಉದ್ದೇಶಪೂರ್ವಕ ವಿಳಂಬ, ಅರ್ಹ ಕಂಪನಿಗಳನ್ನು ಕಡೆಗಣಿಸಿ ನಿರ್ದಿಷ್ಟ ಕಂಪನಿಗಳಿಗೆ ಅನುಕೂಲ ಮಾಡಿಕೊಡುವುದು, ಸರಬರಾಜುದಾರರ ಬಿಲ್ಗಳ ಪಾವತಿಯಲ್ಲಿ ವಿಳಂಬವಾಗುತ್ತಿದೆ. ಇದರಿಂದಾಗಿ, ಸರ್ಕಾರಿ ಆಸ್ಪತ್ರೆಗಳಿಗೆ ಜೀವರಕ್ಷಕ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬಡ ರೋಗಿಗಳ ಆರೋಗ್ಯ ಸೇವೆಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ ಎಂದು ದೂರುದಾರರು ಆತಂಕ ವ್ಯಕ್ತಪಡಿಸಿದ್ದಾರೆ.