

ಶಿವಮೊಗ್ಗ: ಮಹಿಳೆಯರು, ಮಕ್ಕಳು ಮತ್ತು ಹಿಂದುಳಿದ ವರ್ಗಗಳಿಗೆ ಸರ್ಕಾರ ರೂಪಿಸಿರುವ ಕಾನೂನುಗಳ ಸದುಪಯೋಗ ಆಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ನಾಯಕ ಹೇಳಿದರು.
ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಮತ್ತಿತರ ಇಲಾಖೆಗಳ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಸಿಮ್ಸ್‌ನಲ್ಲಿ ಏರ್ಪಡಿಸಿದ್ದ ಭ್ರೂಣ ಲಿಂಗ ಪತ್ತೆ ಹಾಗೂ ಪೋಕ್ಸೋ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾನೂನು ಜಾರಿಗೊಳಿಸುವವರು ಕಾನೂನಿನ ಉದ್ದೇಶ ಅರಿತಾಗ ಮಾತ್ರ ಪರಿಣಾಮಕಾರಿಯಾಗಿ ಅದನ್ನು ಜಾರಿಗೊಳಿಸಲು ಸಾಧ್ಯ. ವೈದ್ಯರು ಸೇರಿದಂತೆ ಪಿಸಿಪಿಎನ್‌ಡಿಟಿ ಮತ್ತು ಪೋಕ್ಸೋ ಅನುಷ್ಠಾನಗೊಳಿಸುವ ಎಲ್ಲರೂ ಈ ಕಾಯ್ದೆಗಳನ್ನು ಸಮರ್ಪಕವಾಗಿ ತಿಳಿದುಕೊಳ್ಳಬೇಕು. ಮಕ್ಕಳ ಮೇಲಿನ ದೌರ್ಜನ್ಯ ಗಮನಕ್ಕೆ ಬಂದಾಗ ಸಂಬಂಧಿಸಿದ ಪೊಲೀಸರ ಗಮನಕ್ಕೆ ತರಬೇಕು. ದೌರ್ಜನ್ಯದ ಸಂಶಯ ಬಂದರೂ ವರದಿ ಮಾಡಬೇಕು ಎಂದು ಸೂಚಿಸಿದರು.
ಪೋಕ್ಸೋ ಸಂತ್ರಸ್ತೆ, ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು, ವಿಚಾರಣೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಸಂವೇದನಾಶೀಲತೆಯಿಂದ ಅಧಿಕಾರಿಗಳು, ಸಿಬ್ಬಂದಿ ನಡೆದುಕೊಳ್ಳಬೇಕು. ಇದೊಂದು ಭಿನ್ನ ಅಪರಾಧವಾದ ಕಾರಣ ಆರೋಗ್ಯ ಇಲಾಖೆಯ ಸುತ್ತೋಲೆಯಂತೆ ಅವರನ್ನು ಉಪಚರಿಸಬೇಕು ಎಂದರು.
ಹೆಣ್ಣು ಭ್ರೂಣ ಹತ್ಯೆ ಒಂದು ದುಷ್ಕೃತ್ಯವಾಗಿದ್ದು, ಪಿಸಿಎನ್‌ಡಿಟಿ ಕಾಯ್ದೆ ಜಾರಿಯಿಂದ ಸಾಕಷ್ಟು ಸುಧಾರಣೆಯಾಗಿದೆ. ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಸಾವಿರ ಪುರುಷರಿಗೆ 940 ಮಹಿಳೆ, ರಾಜ್ಯದಲ್ಲಿ ಸಾವಿರಕ್ಕೆ 973 ಮತ್ತು ಜಿಲ್ಲೆಯಲ್ಲಿ ಸಾವಿರ ಪುರುಷರಿಗೆ 991 ಲಿಂಗಾನುಪಾತವಿದೆ. ಇದನ್ನು ಸಮತೋಲನಗೊಳಿಸಲು ಈ ಕಾಯ್ದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಮಾತನಾಡಿ, ಒಂದು ಕೆಟ್ಟ ಆಚರಣೆ ಅಥವಾ ಪದ್ಧತಿಯನ್ನು ಅಳಿಸಿಹಾಕಲು ಕಾನೂನನ್ನು ಜಾರಿ ಮಾಡಲಾಗುತ್ತದೆ. ಹೆಣ್ಣು ಭ್ರೂಣ ಹತ್ಯೆ ತೊಡೆದುಹಾಕಲು ಪಿಸಿಪಿಎನ್‌ಡಿಟಿ-1994 ಕಾಯ್ದೆ ಜಾರಿಗೆ ಬಂದಿದೆ ಎಂದರು.
ಡಿಎಚ್‌ಒ ಡಾ. ನಟರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಡಿವೈಎಸ್ಪಿ ಬಾಬು ಅಂಜನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರೂಪಣಾಧಿಕಾರಿ ಸಂತೋಷ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಶಶಿರೇಖಾ ಮುಂತಾದವರಿದ್ದರು.