

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವ, ಎನ್ಸಿಪಿ ನಾಯಕ ಬಾಬಾ ಸಿದ್ದಿಕಿರನ್ನು (Baba Siddique) ಹತ್ಯೆ ಮಾಡಿಸುವ ಮೂಲಕ ವಿಶ್ವದಾದ್ಯಮತ ವ್ಯಾಪಕ ಸದ್ದು ಮಾಡಿರುವ ಲಾರೆನ್ಸ್ ಬಿಷ್ಣೋಯ್ (Lawrence Bishnoi) ದಿನ ಕಳೆದಂತೆ ತನ್ನ ಪಾಪುಪ್ಯಾರಿಟಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಇದೀಗ ಈತನಿಗೆ ಮಹರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ (Maharashtra Assembly Election) ಸ್ಫರ್ಧಿಸುವಂತೆ ಆಫರ್ ನೀಡಲಾಗಿದೆ.
288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಗೆ (Maharashtra Assembly Election) ನವೆಂಬರ್ 20ರಂದು ಮತದಾನ ನಡೆಯಲಿದ್ದು, 23ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಿದ್ದು, ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ಇದೆಲ್ಲದರ ನಡುವೆ ಲಾರೆನ್ಸ್ ಬಿಷ್ಣೋಯ್ಗೆ (Lawrence Bishnoi) ಟಿಕೆಟ್ ಆಫರ್ ನೀಡಲಾಗಿದ್ದು, ಈ ವಿಚಾರ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಸದ್ಯ ಗುಜರಾತ್ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿರುವ (Sabarmati Central Jail) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಜೈಲಿನಲ್ಲಿದ್ದುಕೊಂಡೆ ಎಲ್ಲವನ್ನು ಆಪರೇಟ್ ಮಾಡುತ್ತಿದ್ದು, ಈತನಿಗೆ ಉತ್ತರ ಭಾರತೀಯ ವಿಕಾಸ ಸೇನಾ (UBVS) ಹೆಸರಿನ ರಾಜಕೀಯ ಪಕ್ಷವು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸ್ಫರ್ಧಿಸುವಂತೆ ಆಫರ್ ನೀಡಿದ್ದು, ಈ ಬಗ್ಗೆ ಲಾರೆನ್ಸ್ಗೆ ಪತ್ರದ ಮೂಲಕ ಮನವಿ ಮಾಡಿದೆ.
ಅಕ್ಟೋಬರ್ 18ರಂದು ಬರೆದಿರುವ ಪತ್ರದಲ್ಲಿ ಲಾರೆನ್ಸ್ ಬಿಷ್ಣೋಯ್ನನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ಗೆ (Bhagat Singh) ಹೋಲಿಕೆ ಮಾಡಲಾಗಿದ್ದು, ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ (Maharashtra Assembly Election) ಸ್ಫರ್ಧಿಸುವಂತೆ ಮನವಿ ಮಾಡಲಾಗಿದೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.
ಸಲ್ಮಾನ ಖಾನ್ (Salman Khan) ಹಾಗೂ ದಾವೂದ್ ಇಬ್ರಾಹಿಂ (Dawood Ibrahim) ಜೊತೆ ನಂಟು ಹೊಂದಿದ್ದಕ್ಕೆ ಎನ್ಸಿಪಿ ನಾಯಕ ಬಾಬಾ ಸಿದ್ದಿಕ್ಕಿರನ್ನು (Baba Siddique) ಅಕ್ಟೋಬರ್ 12ರಂದು ಅವರ ಮನೆಯ ಮುಂಭಾಗವೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಹತ್ಯೆಯ ಹೊಣೆಯನ್ನು ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಹೊತ್ತುಕೊಂಡಿದ್ದರು. ಇದಾದ ಬಳಿಕ ದೇಶದಲ್ಲಿ ಕಾನೂನು ಸುವ್ಯವಸ್ಥೆ ಕುರಿತಾಗಿ ಪ್ರಶ್ನೆಗಳು ಉದ್ಭವಿಸಿದ್ದವು.