ಭಾಷೆ ಮೂಲಕ ಕಾನೂನು ಮಾತನಾಡುತ್ತದೆ : ಹೈಕೋರ್ಟ್ ಅಭಿಪ್ರಾಯ

highcourt
Published on

ಬೆಂಗಳೂರು : ಭಾಷಾ ದೋಷವು ಶಾಸನದ ಉದ್ದೇಶವನ್ನೇ ವಿಲಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಶಾಸನ ರಚನಾ ಪ್ರಕ್ರಿಯೆಯನ್ನು ಬಹಳ ಎಚ್ಚರ ವಹಿಸಿ ಸೂಕ್ಷ್ಮವಾಗಿ ಹಾಗೂ ಪರಿಣಿತಿಯೊಂದಿಗೆ ಕೈಗೊಳ್ಳಬೇಕು ಎಂದು ಹೇಳಿದೆ.

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ಕೆಲವೊಂದು ಭೂಮಿಯ ವರ್ಗಾವಣೆ ನಿಷೇಧ) ಕಾಯ್ದೆಯ 1978ಕ್ಕೆ 2023ರ ಜುಲೈನಲ್ಲಿ ಮಾಡಿರುವ ತಿದ್ದುಪಡಿ ಕುರಿತಂತೆ ಪರಿಶೀಲನೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಭೂಮಿ ಮರುಸ್ಥಾಪನೆಗೆ ನಿರಾಕರಿಸಿದ್ದ ಏಕಸದಸ್ಯಪೀಠದ ಆದೇಶವನ್ನು ಪ್ರಶ್ನಿಸಿ ದಾವಣಗೆರೆಯ ಗೌರಮ್ಮ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಾಲಯ, ಭಾಷೆಯ ಮೂಲಕ ಕಾನೂನು ಮಾತನಾಡುತ್ತದೆ, ಹಾಗಾಗಿ ಭಾಷೆಯನ್ನು ಸರಿಯಾಗಿ ಬಳಕೆ ಮಾಡಬೇಕಿರುವುದು ಮುಖ್ಯ. ಇಲ್ಲದಿದ್ದರೆ ಏನು ಮಾಡಬೇಕೋ ಅದನ್ನು ಬಿಟ್ಟು, ಯಾವುದನ್ನು ಮಾಡಬಾರದು ಆದು ಆಗುತ್ತದೆ. ಆ ರೀತಿ ಭಾಷಾ ದೋಷವಾದಾಗ ಶಾಸನದ ಉದ್ದೇಶಕ್ಕೆ ಸೋಲಾಗುತ್ತದೆ’ ಎಂದು ಹೇಳಿದೆ.

ಏಕಸದಸ್ಯಪೀಠದ ಆದೇಶವನ್ನು ಎತ್ತಿಹಿಡಿದಿರುವ ವಿಭಾಗೀಯ ಪೀಠ, 1978ರ ಕಾಯ್ದೆಯ ಪ್ರಕಾರ ಮಂಜೂರಾಗಿದ್ದ ಭೂಮಿಯನ್ನು ಪರಭಾರೆ ಮಾಡಿದ್ದರೂ ಸಮಯದ ಮಿತಿ ಇಲ್ಲದೆ, ಭೂಮಿ ಮರು ಸ್ಥಾಪನೆಗೆ ಅರ್ಜಿ ಸಲ್ಲಿಸಬಹುದು. ಆದರೆ, ತಿದ್ದುಪಡಿ ಕಾಯ್ದೆಯ ಪೂರ್ವಾನ್ವಯವಾಗುವಂತೆ ಮಾಡಲಾಗಿದೆ.

ಹಾಲಿ ಆ ಕಾನೂನು ಇದ್ದರೂ ಮತ್ತೆ ಇನ್ನೊಂದು ಅಂಶವಾಗಿ ಸೇರಿಸಿರುವುದು ಡೂಪ್ಲಿಕೇಷನ್ ಅಷ್ಟೇ ಎಂದು ತಿಳಿಸಿದೆ. ತಡವಾಗಿ ಭೂಮಿ ಮರುಸ್ಥಾಪನೆ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ಹೊರಬರಬೇಕು ಎನ್ನುವುದಾದರೆ ಶಾಸನದಲ್ಲಿ ಬೇರೆ ರೀತಿಯ ಪದಗಳನ್ನು ಬಳಕೆ ಮಾಡಬಹುದಿತ್ತು ಎಂದು ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net