

ಕೌಟುಂಬಿಕ ಹಿಂಸೆಯನ್ನು, ಯಾವುದೇ ಸಂಬಂಧದಲ್ಲಿಯಾದರೂ ಆಪ್ತ ಪಾಲುದಾರರ ಮೇಲೆ ಅಧಿಕಾರ ಮತ್ತು ನಿಯಂತ್ರಣವನ್ನು ಹೊಂದಲು ಬಳಸುವ ವರ್ತನೆಯೆಂದು ಅರ್ಥೈಸಬಹುದಾಗಿದೆ. ಕುಟುಂಬಗಳ ಒಳಗಡೆ, ಒಬ್ಬ ಸದಸ್ಯ ಇನ್ನೊಬ್ಬರ ವಿರುದ್ಧ ಬಲಪ್ರಯೋಗ ಮಾಡಿದಾಗಲೂ ಕೌಟುಂಬಿಕ ದೌರ್ಜನ್ಯ ಸಂಭವಿಸಬಹುದು. ಕೌಟುಂಬಿಕ ದೌರ್ಜನ್ಯವು ಯಾವಾಗಲೂ ಪತಿಯಿಂದ ಅಥವಾ ಸಂಬಂಧಿಕರಿಂದ ಮಹಿಳೆಯರ, ಅದರಲ್ಲೂ ವಿಶೇಷವಾಗಿ ಪತ್ನಿಯರ ವಿರುದ್ಧ ನಿರ್ದೇಶಿತವಾಗಿರುತ್ತದೆ. ಆದಾಗ್ಯೂ ಪುರುಷರು ಮತ್ತು ತೃತೀಯಲಿಂಗಿಗಳು (ಟ್ರಾನ್ಸ್ಜೆಂಡರ್) ಕೂಡ ಬಲಿಪಶುವಾಗುವ ಸಾಧ್ಯತೆಯಿದೆ ಎನ್ನುವುದನ್ನು ಗಮನಿಸುವುದು ಮಹತ್ವದ್ದಾಗಿದೆ.
ಮಹಿಳೆಯರ ವಿರುದ್ಧದ ಹಿಂಸಾಚಾರ ನಿಮೂಲನೆ ಕುರಿತ ವಿಶ್ವಸಂಸ್ಥೆ ಘೋಷಣೆ (1993), ಮಹಿಳೆ ವಿರುದ್ಧದ ಹಿಂಸಾಚಾರವು ‘ಮಹಿಳೆಗೆ ದೈಹಿಕ, ಲೈಂಗಿಕ ಮತ್ತು ಮಾನಸಿಕವಾಗಿ ಹಾನಿ ಅಥವಾ ನೋವು ಅನುಭವಿಸುವಂತಾಗುವ ಲಿಂಗಾಧಾರಿತವಾದ ಯಾವುದೇ ಬಗೆಯ ಕೃತ್ಯ’ ಎಂದು ವ್ಯಾಖ್ಯಾನಿಸಿದೆ. ಬೆದರಿಕೆಗಳು, ಬಲವಂತಪಡಿಸುವಿಕೆ ಅಥವಾ ಸ್ವಾತಂತ್ರ್ಯವನ್ನು ಏಕಪಕ್ಷೀಯವಾಗಿ ವಂಚಿಸುವ, -ಅದು ಸಾರ್ವಜನಿಕವಾಗಿಯೂ ಇರಬಹುದು ಅಥವಾ ಖಾಸಗಿ ಜೀವನದಲ್ಲಿಯೂ ಆಗಿರಬಹುದು- ಕೃತ್ಯಗಳು ಅದರಲ್ಲಿ ಒಳಗೊಂಡಿರುತ್ತವೆ.
ಭಾರತದಲ್ಲಿ ಕ್ರಿಮಿನಲ್ ಅಪರಾಧ: ಭಾರತದಲ್ಲಿ 1983ರಿಂದಲೂ ಭಾರತೀಯ ದಂಡ ಸಂಹಿತೆಯ (ಐಪಿಸಿ) 498ಎ ಸೆಕ್ಷನ್ ಅನ್ವಯ ಕೌಟುಂಬಿಕ ದೌರ್ಜನ್ಯವನ್ನು ಒಂದು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗಿದೆ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾನೂನು-2005 ರೂಪಿಸುವುದರೊಂದಿಗೆ ದೈಹಿಕ, ಭಾವನಾತ್ಮಕ, ಮಾತಿನ, ಲೈಂಗಿಕ ಮತ್ತು ಆರ್ಥಿಕ ಹಿಂಸೆ ಸಹಿತ ಎಲ್ಲ ರೂಪದ ಕೌಟುಂಬಿಕ ಹಿಂಸೆಗಳನ್ನು ಸಮಗ್ರವಾಗಿ ವ್ಯಾಖ್ಯಾನಿಸಲಾಗಿದೆ.
ಈ ಕೆಳಗಿನವು ಪ್ರಮುಖ ಕೌಟುಂಬಿಕ ಹಿಂಸೆಯಾಗಿರಬಹುದಾಗಿದೆ:
ಎ) ದೈಹಿಕ ಹಿಂಸೆ: ಸಂಗಾತಿಗೆ ಗಾಯ ಅಥವಾ ಹಾನಿ ಮಾಡುವ ಉದ್ದೇಶದಿಂದ ದೈಹಿಕ ಬಲ ಪ್ರಯೋಗ ಮಾಡುವುದು. ಇದು ಕಪಾಳಮೋಕ್ಷ, ಗುದ್ದುವುದು ಅಥವಾ ಯಾವುದಾದರೂ ಅಸ್ತ್ರದಿಂದ ಹೊಡೆಯುವುದು ಮುಂತಾದ ಹಲ್ಲೆ ಅಥವಾ ಬಲವಂತದ ಕೃತ್ಯಗಳ ವಿಧಾನವಾಗಿದೆ.
ಬಿ) ಮಾನಸಿಕ ಕಿರುಕುಳ, ಬಲವಂತಪಡಿಸುವಿಕೆ, ಬೆದರಿಕೆ ಮತ್ತು ದೈಹಿಕ ಹಾನಿಯೊಂದಿಗೆ ಭಾವನಾತ್ಮಕ ಮತ್ತು ಮಾನಸಿಕ ಹಿಂಸೆ ನೀಡಿಕೆ.
ಸಿ) ಮೋಸ ಅಥವಾ ಬೆದರಿಕೆಯಿಂದ ಬಲವಂತವಾಗಿ ಲೈಂಗಿಕವಾಗಿ ಅನುಭವಿಸುವುದು, ದೌರ್ಜನ್ಯದ ಜತೆ ದೈಹಿಕವಾಗಿ ಬಲವಂತದ ಲೈಂಗಿಕ ಹಲ್ಲೆ ರೂಪದ ಲೈಂಗಿಕ ಹಿಂಸಾಚಾರ. ತನಗೆ ಇಷ್ಟವಿಲ್ಲದಿದ್ದರೂ ಬೇರೆಯವರ ಜತೆ ಆಪ್ತವಾಗಿ ಸಂಬಂಧ ಹೊಂದುವಂತೆ ಬಲವಂತಪಡಿಸುವಿಕೆ, ಮತ್ತು ಅದಕ್ಕೆ ಸಿದ್ಧವಿರದ ಒತ್ತಡದ ಪರಿಸ್ಥಿತಿಗಳು ಕೂಡ ಇದರಲ್ಲಿ ಒಳಗೊಂಡಿರುತ್ತವೆ.
ಡಿ) ಹಣಕಾಸು, ಆಹಾರ, ಬಟ್ಟೆಬರೆ ಮತ್ತಿತರ ಕುಟುಂಬದ ಎಲ್ಲ ಆರ್ಥಿಕ ಸಂಪನ್ಮೂಲಗಳನ್ನು ನಿಯಂತ್ರಿಸುವ ಮೂಲಕ ಆರ್ಥಿಕ ಹಿಂಸಾಚಾರ ಎಸಗುವುದು. ಆರ್ಥಿಕ ನಿರ್ಧಾರ ರೂಪಿಸುವುದರಿಂದ ಹೊರಗಿಡುವುದು ಕೂಡ ಕೌಟುಂಬಿಕ ಹಿಂಸಾಚಾರವೇ ಹೌದು.
ಜಾಗತಿಕ ಸಮಸ್ಯೆ: ಮಹಿಳೆಯರ ವಿರುದ್ಧದ ಹಿಂಸಾಚಾರವು ಸಂಸ್ಕೃತಿ, ವರ್ಗ, ಶಿಕ್ಷಣ, ಆದಾಯ, ಜನಾಂಗೀಯತೆ, ವಯಸ್ಸು- ಇವೆಲ್ಲವುಗಳ ಎಲ್ಲೆಗಳನ್ನು ಮೀರಿದ ಜಾಗತಿಕ ಸಮಸ್ಯೆಯಾಗಿದೆ ಎನ್ನುತ್ತದೆ ಯುನಿಸೆಫ್. ಬಹುತೇಕ ಸಮಾಜಗಳು ಸ್ತ್ರೀ ವಿರುದ್ಧದ ಹಿಂಸೆಯನ್ನು ಪ್ರತಿಬಂಧಿಸಿವೆಯಾದರೂ ಸಾಂಸ್ಕೃತಿಕ ಪದ್ಧತಿಗಳು ಮತ್ತು ನಿಯಮಗಳ ಸೋಗಿನಲ್ಲಿ ಅಥವಾ ಧಾರ್ವಿುಕ ನೀತಿಗಳನ್ನು ತಪ್ಪಾಗಿ ಅರ್ಥೈಸುವ ಮೂಲಕ ಮಹಿಳಾ ಹಕ್ಕುಗಳನ್ನು ಸರ್ವೆಸಾಮಾನ್ಯವಾಗಿ ಉಲ್ಲಂಘಿಸಲಾಗುತ್ತಿರುವುದು ವಾಸ್ತವವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಮನೆಯೊಳಗೆ ಹಿಂಸೆ ಸಂಭವಿಸಿದಾಗ; ಸಾಮಾನ್ಯವಾಗಿ ಅದು ಆಗುವುದೇ ಹಾಗೆ ಎನ್ನಿ, ದೌರ್ಜನ್ಯವನ್ನು ಮೌನವಾಗಿ ಸಹಿಸಿ ಮತ್ತು ಕಾನೂನಿನ ಅನುಷ್ಠಾನವಿಲ್ಲದೆ ಸಲೀಸಾಗಿ ಕ್ಷಮಿಸಲಾಗುತ್ತದೆ.
ಪುರುಷಪ್ರಧಾನ ಮೌಲ್ಯದ ಅಹಂಕಾರ: ಮಹಿಳೆಯರು ಮತ್ತು ಹುಡುಗಿಯರ ಮೇಲೆ ಪುರುಷರಿಗೆ ಒಡೆಯನ ಹಕ್ಕಿದೆ ಎಂಬ ಮೌಲ್ಯಗಳಲ್ಲಿನ ನಂಬಿಕೆಯೇ ಕೌಟುಂಬಿಕ ದೌರ್ಜನ್ಯಕ್ಕೆ ಏಕೈಕ ಪ್ರಮುಖ ಕಾರಣವಾಗಿದೆ. ಬಲವಾದ ಧಾರ್ವಿುಕ ಮತ್ತು ಪಾರಂಪರಿಕ ಪ್ರಭಾವಗಳನ್ನು ಹೊಂದಿರುವ ಭಾರತೀಯ ಸಮಾಜವು ಸಾಮಾನ್ಯವಾಗಿ ಕುಟುಂಬವು ಪುರುಷರ ನಿಯಂತ್ರಣದಲ್ಲಿ ಇರಬೇಕೆಂಬ ಅಭಿಪ್ರಾಯವನ್ನು ಹೊಂದಿದೆ; ಪುರುಷರ ಅಂತರ್ಗತ ಶ್ರೇಷ್ಠತೆಯ ನಂಬಿಕೆಯನ್ನು ಅದು ಬಲಪಡಿಸುತ್ತದೆ. ತಮ್ಮ ಕುಟುಂಬಗಳು ಮತ್ತು ಸಮುದಾಯಗಳಲ್ಲಿ ಮಹಿಳೆಯರ ಈ ಪ್ರತ್ಯೇಕತೆಯು ಕೂಡ ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ ನಡೆಯುವಲ್ಲಿ ಕೊಡುಗೆ ನೀಡುತ್ತದೆ. ಇದಲ್ಲದೆ, ಮಹಿಳೆಯರು; ವಿಶೇಷವಾಗಿ ಬಡ ಮತ್ತು ಅನಕ್ಷರಸ್ಥ ಮಹಿಳೆಯರಲ್ಲಿ ಕಾನೂನಿನ ಹಕ್ಕುಗಳ ಅರಿವಿನ ಕೊರತೆಯಿರುವುದು ಕೂಡ ಸ್ತ್ರೀಯರು ಹಾಗೂ ಹುಡುಗಿಯರನ್ನು ಅಡಿಯಾಳಾಗಿ ಮಾಡಿಕೊಳ್ಳಲು ಪುರುಷ ಸದಸ್ಯರಿಗೆ ಲೈಸೆನ್ಸ್ ನೀಡುತ್ತದೆ.
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಚ್ಎಫ್ಎಸ್) ಪ್ರಕಾರ, ಒಂದೊಮ್ಮೆ ಮದುವೆಯಾಗಿದ್ದ 18-49 ಪ್ರಾಯದ ಶೇಕಡ 29.3ರಷ್ಟು ಮಹಿಳೆಯರು ದೈಹಿಕ, ಲೈಂಗಿಕ ಅಥವಾ ಸಂಗಾತಿಯಿಂದ ಭಾವನಾತ್ಮಕ ಹಿಂಸೆಯನ್ನು ಅನುಭವಿಸಿದ್ದಾರೆ. 2022ರಲ್ಲಿ ದಾಖಲಾದ 1,40,019 ಕೇಸ್ಗಳು, ತಮ್ಮ ಗಂಡಂದಿರು ಅಥವಾ ಸಂಬಂಧಿಕರಿಂದ ಕ್ರೌರ್ಯ ನಡೆದಿದೆಯೆಂದು ಮಹಿಳೆಯರು ದೂರಿರುವುದನ್ನು ಗೃಹ ವ್ಯವಹಾರಗಳ ಸಚಿವಾಲಯದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (ಎನ್ಸಿಆರ್ಬಿ) ಅಂಕಿಅಂಶಗಳು ತೋರಿಸುತ್ತದೆ.
13,479 ಕೇಸ್ಗಳು 1961ರ ವರದಕ್ಷಿಣೆ ನಿಷೇಧ ಕಾನೂನು ಮತ್ತು 2005ರ ಕೌಟುಂಬಿಕ ಹಿಂಸಾಚಾರ ಕಾನೂನು ಅಡಿಯಲ್ಲಿ 468 ಕೇಸ್ಗಳು ಅದೇ ವರ್ಷ ದಾಖಲಾಗಿವೆ. ಆದರೆ, 2022ರ ವರ್ಷದಲ್ಲಿ ವರದಕ್ಷಿಣೆ-ಸಂಬಂಧಿತ ಸಾವಿಗೆ ಸಂಬಂಧಿಸಿದ ಐಪಿಸಿಯ 304 (ಬಿ) ಸೆಕ್ಷನ್ ಅಡಿ 6,450 ಮೊಕದ್ದಮೆಗಳು ದಾಖಲಾಗಿವೆ ಎನ್ನುವುದು ನಿಜಕ್ಕೂ ಖೇದದ ಸಂಗತಿಯಾಗಿದೆ. ಭಾರತೀಯ ಸಮಾಜಗಳಲ್ಲಿನ ಪುರುಷಪ್ರಧಾನ ಮತ್ತು ಪುರುಷ ಅಹಮಿಕೆಯ ಕಾರಣದಿಂದಾಗಿ ಮಹಿಳೆಯರ ವಿರುದ್ಧದ ಬಹುತೇಕ ಕೌಟುಂಬಿಕ ದೌರ್ಜನ್ಯಗಳು ವರದಿಯಾಗದಿದ್ದರೂ ಈ ಮೇಲಿನ ಅಂಕಿಸಂಖ್ಯೆಗಳೇ ಪರಿಸ್ಥಿತಿಯ ಕಠೋರತೆಯನ್ನು ಸೂಚಿಸುತ್ತದೆ.
ಕೌಟುಂಬಿಕ ದೌರ್ಜನ್ಯಗಳಿಂದ ಮಹಿಳೆಯರನ್ನು ರಕ್ಷಿಸುವ 2006ರ ಕಾನೂನು, ಈ ಸಮಸ್ಯೆಯನ್ನು ಎದುರಿಸುವಲ್ಲಿ ಒಂದು ಮಹತ್ವದ ಕಾಯ್ದೆಯಾಗಿದೆ. ಕುಟುಂಬದ ವಾತಾವರಣದಲ್ಲಿ ಮಹಿಳೆಯರನ್ನು ರಕ್ಷಿಸುವಲ್ಲಿ ಈ ಕಾನೂನು ತಾತ್ವಿಕವಾಗಿ ಬಹಳ ಉಪಯುಕ್ತವಾಗಿದೆ. ಐಪಿಸಿಯ 498(ಎ) ಸೆಕ್ಷನ್ ನಿಭಾಯಿಸದ ಎಲ್ಲ ಬಗೆಯ ಕೌಟುಂಬಿಕ ಹಿಂಸೆಗಳನ್ನು ಈ ಕಾನೂನು ನಿರ್ವಹಿಸುತ್ತದೆ. ಉದಾಹರಣೆಗೆ; ಅದು ಭಾರತದಲ್ಲಿ ಇತರ ಯಾವುದೇ ಕಾನೂನುಗಳು ಗುರುತಿಸದ ಲೈಂಗಿಕ, ಹಿಂಸಾತ್ಮಕ ಬೈಗುಳವನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಳ್ಳುತ್ತದೆ.
ಪರಿವರ್ತನೆ ಅಗತ್ಯ: ಮಹಿಳೆಯರನ್ನು ಕುಟುಂಬ ದೌರ್ಜನ್ಯದಿಂದ ಕಾಪಾಡಲು ಕಾನೂನಿನ ಪರಿಹಾರಗಳಷ್ಟೇ ಸಾಕಾಗದು. ಸಾಮಾಜಿಕ ನಂಬಿಕೆ ಮತ್ತು ಪದ್ಧತಿಗಳನ್ನು ಪರಿವರ್ತಿಸಲು ಪ್ರಯತ್ನಗಳನ್ನು ನಡೆಸುವುದೂ ಅಗತ್ಯವಾಗಿದೆ. ಎಲ್ಲ ಬಗೆಯ ಕೌಟುಂಬಿಕ ದೌರ್ಜನ್ಯಗಳನ್ನು ತಡೆಯಲು ಅಥವಾ ತಗ್ಗಿಸಲು ಅಗತ್ಯವಾದ ಕೆಲವು ಕ್ರಮಗಳು ಈ ಕೆಳಗಿನಂತಿವೆ:
* ಐಪಿಸಿ ಮತ್ತು ಕೌಟುಂಬಿಕ ಹಿಂಸೆ ಕಾನೂನಿನ ಸಂಬಂಧಿತ ಸೆಕ್ಷನ್ಗಳನ್ನು ಕಟ್ಟುನಿಟ್ಟಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು.
* ಹಿಂಸಾಕೃತ್ಯಗಳ ಮೂಲ ಕಾರಣವಾದ ಪಿತೃಪ್ರಧಾನ ಸಾಮಾಜಿಕ ಸಂರಚನೆಯನ್ನು ಮುರಿದು ಹಾಕುವ ನಿಟ್ಟಿನಲ್ಲಿ, ಪುರುಷರು ಹಾಗೂ ಮಹಿಳೆಯರಲ್ಲಿ ಇರುವ ಧೋರಣೆಗಳಲ್ಲಿ ಬದಲಾವಣೆ ತರಬೇಕು.
* ಬಾಲಕಿಯರಿಗೆ ಶಿಕ್ಷಣ ನೀಡಿಕೆ ಮತ್ತು ಸಮಾಜದಲ್ಲಿ ಸಮಾನತೆ ಗಳಿಸುವಂತಾಗಲು ಸಬಲೀಕರಣಕ್ಕಾಗಿ ಮಹಿಳೆಯರಿಗೆ ನೆರವಾಗುವುದು. ಕುಟುಂಬ ವಾತಾವರಣದಲ್ಲಿ ಮಹಿಳೆಯರು ಶೋಷಣೆಗೆ ಒಳಗಾಗುವುದನ್ನು ತಗ್ಗಿಸುವುದು.
* ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದ ಸಂತ್ರಸ್ತರಿಗೆ, ಅದರಲ್ಲೂ ವಿಶೇಷವಾಗಿ ಅಶಿಕ್ಷಿತ, ಹಿಂದುಳಿದ ಮತ್ತು ಆರ್ಥಿಕವಾಗಿ ವಂಚಿತ ಮಹಿಳೆಯರಿಗೆ ತ್ವರಿತ ಕಾನೂನು ನೆರವು ಮತ್ತು ಸಲಹೆ ಒದಗಿಸುವುದು.
* ಅಧಿಕಾರಿಗಳಿಗೆ ತರಬೇತಿ: ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಎಲ್ಲ ಅಧಿಕಾರಿಗಳಿಗೆ; ಅಂದರೆ ಕುಟುಂಬಗಳನ್ನು ರಕ್ಷಿಸುತ್ತೇವೆ ಎಂಬ ತಪು್ಪ ಗ್ರಹಿಕೆಯಿಂದ ಕೌಟುಂಬಿಕ ದೌರ್ಜನ್ಯ ಕೇಸ್ಗಳನ್ನು ಸೌಮ್ಯವಾಗಿ ನಿಭಾಯಿಸುವ ಪೊಲೀಸರು, ಪ್ರಾಸಿಕ್ಯೂಷನ್ ಮತ್ತು ನ್ಯಾಯಾಂಗದ ಅಧಿಕಾರಿಗಳಿಗೆ ಲಿಂಗತ್ವ ಪರಿಕಲ್ಪನೆಯ ತರಬೇತಿ ನೀಡಬೇಕು. ಇಂಥ ಪ್ರಕರಣಗಳನ್ನು ದೃಢವಾಗಿ ನಿರ್ವಹಿಸಲು ವೈದ್ಯಕೀಯ ಅಧಿಕಾರಿಗಳು ಮತ್ತು ಪುನರ್ವಸತಿ ಅಧಿಕಾರಿಗಳಿಗೆ ಕೂಡ ತರಬೇತಿ ನೀಡಿಕೆ ಅಗತ್ಯ.
* ಸರ್ಕಾರೇತರ ಸಂಸ್ಥೆಗಳು, ಸಮುದಾಯ ನಾಯಕರು, ಧಾರ್ವಿುಕ ಮುಖಂಡರು ಮತ್ತು ಎಲ್ಲ ಹಂತಗಳಲ್ಲಿ ಅಭಿಪ್ರಾಯ ರೂಪಿಸುವವರು ಮೊದಲಾದವರನ್ನು ಒಳಗೊಳಿಸಿ ಬೃಹತ್ ಜಾಗೃತಿ ಅಭಿಯಾನಗಳನ್ನು ನಡೆಸಬೇಕು. ಕೌಟುಂಬಿಕ ದೌರ್ಜನ್ಯ ಅಥವಾ ಒಟ್ಟಾರೆಯಾಗಿ ಮಹಿಳೆಯರ ವಿರುದ್ಧದ ದೌರ್ಜನ್ಯದ ವಿರುದ್ಧ ಒಂದು ಸಂಕಥನವನ್ನು ರೂಪಿಸಲು ಇದು ಅಗತ್ಯವಾಗುತ್ತದೆ.
ಕಲೆ ಮತ್ತು ಸಾಹಿತ್ಯದ ಮೂಲಕ ಮಹಿಳೆಯರನ್ನು ಒಳಗೊಳಿಸಿ ಎಲ್ಲ ಬಗೆಯ ಹಿಂಸಾಚಾರದ ವಿರುದ್ಧ ಪ್ರಬಲ ದನಿಯೆತ್ತುವಂತೆ ಸಾಮಾಜಿಕ ಕಾರ್ಯಕರ್ತರು ಮತ್ತು ವ್ಯಕ್ತಿಗಳಿಗೆ ಉತ್ತೇಜನ ಒದಗಿಸಬೇಕು. ಬೆಂಗಳೂರಿನ ಸುಗಮ ಸಂಗೀತ ಕಲಾವಿದೆ ಎಂ.ಡಿ. ಪಲ್ಲವಿ ಮತ್ತು ಸಂಗೀತಗಾರ ವಾಸು ದೀಕ್ಷಿತ್ ನೇತೃತ್ವದ ‘ಸಹಿಸಬೇಕಿಲ್ಲ ನೀವು’ ಎನ್ನುವ ಉಪಕ್ರಮವೊಂದು ಈ ನಿಟ್ಟಿನಲ್ಲಿ ಮಾದರಿಯಾಗಿದೆ ಎಂದು ನಾನು ಹೇಳಬಯಸುತ್ತೇನೆ. ಆ ಹಾಡು, ಎಲ್ಲ ಬಗೆಯ ಕೌಟುಂಬಿಕ ದಬ್ಬಾಳಿಕೆ ವಿರುದ್ಧದ ಧ್ಯೇಯಗೀತೆಯಂತಿದೆ.
(ಲೇಖಕರು ಸಿಐಡಿ, ಆರ್ಥಿಕ ಅಪರಾಧಗಳು ಮತ್ತು ವಿಶೇಷ ಘಟಕಗಳ ಡಿಐಜಿ)