

ಬೆಂಗಳೂರು: ರಾಜ್ಯದ ವಿವಿಧ ಕಾನೂನು ಕಾಲೇಜುಗಳಲ್ಲಿ ನಡೆದ ಕಾನೂನು ಪದವಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಸೈಬರ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯ ಕಾನೂನು ವಿಶ್ವವಿದ್ಯಾಲಯ ನೇಮಕ ಮಾಡಿದ್ದ ಜಾಗೃತ ದಳ-2ರ ಚೇರ್ಮನ್ ಡಾ. ಕೆ.ಎನ್. ವಿಶ್ವನಾಥ್, ಈ ಕುರಿತು ನಗರ ಸೈಬರ್ ಕ್ರೖೆಂ ಠಾಣೆಗೆ ದೂರು ಸಲ್ಲಿಸಿದ್ದಾರೆ. ಜನವರಿಯಲ್ಲಿ ರಾಜ್ಯದ ಎಲ್ಲೆಡೆ ಕಾನೂನು ಪದವಿಗೆ ಪರೀಕ್ಷೆ ಆಯೋಜನೆ ಮಾಡಲಾಗಿತ್ತು. ಜ.23ರಂದು ಕಾಂಟ್ರಾಕ್ಟ್-1 ಪರೀಕ್ಷೆ ನಡೆಯಿತು. ಈ ವೇಳೆ ಸಹಾಯಕ ಪರೀಕ್ಷಕರು, ವಾಟ್ಸ್ ಆಪ್ನಲ್ಲಿ ಪ್ರಶ್ನೆಪತ್ರಿಕೆ ಕಳುಹಿಸಿ ಪರಿಶೀಲನೆ ಮಾಡುವಂತೆ ಮನವಿ ಮಾಡಿದರು.
ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ ವಾಟ್ಸ್ಆಪ್ನಲ್ಲಿ ಬಂದ ಪ್ರಶ್ನೆಪತ್ರಿಕೆ ಮತ್ತು ಪರೀಕ್ಷೆ ನಡೆಯುತ್ತಿದ್ದ ಪ್ರಶ್ನೆಪತ್ರಿಕೆಗೂ ಸಂಪೂರ್ಣ ಹೋಲಿಕೆಯಾಗುತ್ತಿತ್ತು. ಕಿಡಿಗೇಡಿಗಳು ಪರೀಕ್ಷೆ ನಡೆಯುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ವಿದ್ಯಾರ್ಥಿಗಳ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಿದ್ದಾರೆ. ಈ ಅಕ್ರಮದ ಹಿಂದೆ ಇರುವ ಆರೋಪಿಗಳನ್ನು ಪತ್ತೆ ಮಾಡಿ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಡಾ. ಕೆ.ಎನ್. ವಿಶ್ವನಾಥ್ ಮನವಿ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.