

ಮೈಸೂರು: ಎಜುಕೇಷನ್ ಎಕ್ಸ್‌ಪೋಗಳನ್ನು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲೂ ಆಯೋಜನೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಹೇಳಿದರು.
ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಎಜುಕೇಷನ್ ಎಕ್ಸ್‌ಪೋಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಕಾಲೇಜಿಗೆ ಹೋಗಿ ಕೋರ್ಸ್ ಹಾಗೂ ಕಾಲೇಜಿನ ಮಾಹಿತಿ ಪಡೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಈ ಎಜುಕೇಷನ್ ಎಕ್ಸ್‌ಪೋನಲ್ಲಿ ಒಂದೇ ಸೂರಿನಡಿ ವಿದ್ಯಾರ್ಥಿಗಳಿಗೆ ವಿವಿಧ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ಮಾಹಿತಿ ಕಲೆ ಹಾಕಲು ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ರಾಜ್ಯದ ಮೂಲೆ ಮೂಲೆಯಲ್ಲಿರುವ ವಿವಿಧ ಶಿಕ್ಷಣ ಸಂಸ್ಥೆಗಳು ಎಕ್ಸ್‌ಪೋನಲ್ಲಿ ಭಾಗಿಯಾಗಿದ್ದು, ಇಲ್ಲಿ ಉತ್ತಮ ಕಾಲೇಜು ಮತ್ತು ಕೋರ್ಸ್‌ಗಳ ಮಾಹಿತಿ ಸಿಗುತ್ತಿದೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಮುಗಿಸಿದ ಬಹುತೇಕ ವಿದ್ಯಾರ್ಥಿಗಳು ಮುಂದೆ ಯಾವ ಕೋರ್ಸ್ ಓದಬೇಕು? ಯಾವ ಕಾಲೇಜಿಗೆ ಸೇರಬೇಕು? ಏನು ಓದಿದರೆ ಬೇಗ ಕೆಲಸ ಸಿಗುತ್ತದೆ ಎನ್ನುವುದು ಗೊತ್ತಾಗದೆ ಕಷ್ಟಪಡುತ್ತಾರೆ. ಅಂತಹ ಮಕ್ಕಳಿಗೆ ಈ ಎಕ್ಸ್‌ಪೋ ತುಂಬಾ ಅನುಕೂಲ ಕಲ್ಪಿಸಿದೆ. ಇಂತಹ ಎಕ್ಸ್‌ಪೋಗಳನ್ನು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲೂ ಆಯೋಜನೆ ಮಾಡಬೇಕು ಎಂದು ಸಲಹೆ ನೀಡಿದರು.