ಮನದ ಆಟಗಳನ್ನು ತಾನೇ ನೋಡುತ್ತ ನಗುವುದು ನಿಜಕ್ಕೂ ಸಾಧನೆ

mind
Published on

ತನ್ನ ಮನದಾಟಗಳ ತಾನೆ ನೋಡುತ ನಗುವ> ತನ್ನೊಳಗೆ ತಾನಿರ್ವರಾದವೊಲು ಬಾಳ್ವ|| ಚಿನ್ಮಾತ್ರವನು ಬೇರೆ ಬಗೆದು ಜಾನಿಪ ಚತುರ| ಧನ್ಯತೆಯ ಕಂಡವನು-ಮಂಕುತಿಮ್ಮ||739||

ತನ್ನ ಮನಸ್ಸಿನ ಆಟಗಳನ್ನು ತಾನೆ ನೋಡುತ್ತಾ ನಗುವ, ತನ್ನೊಳಗೆ ಇಬ್ಬರಾಗಿ ಇರುವಂತೆ ಬಾಳುವ, ಶರೀರ ಮತ್ತು ಆತ್ಮವನ್ನು ಬೇರೆ ಎಂದು ಬಗೆದಿರುವ ಚತುರನು ಧನ್ಯತೆಯನ್ನು ಕಂಡವನು ಎನ್ನುತ್ತದೆ ಈ

ಕಗ್ಗ. ಮನುಷ್ಯನ ಮನಸ್ಸಿನಲ್ಲಿ ಆಲೋಚನೆಗಳ ಪ್ರವಾಹವು ನಿರಂತರವಾಗಿ ಹರಿಯುತ್ತಿರುತ್ತದೆ. ಇದು ಅಸ್ವಸ್ಥ ಸ್ಥಿತಿ. ಎಚ್ಚರಿದ್ದಷ್ಟು ಹೊತ್ತು, ಬದುಕಿದ್ದಷ್ಟು ಕಾಲ ಯೋಚನೆಗಳಿಂದ ಮನುಜನಿಗೆ ಮುಕ್ತಿ ಇಲ್ಲ . ಹೀಗೆ ಚಿಂತೆಯ ಪ್ರವಾಹಕ್ಕೆ ಸಿಲುಕಿದ ವ್ಯಕ್ತಿಯು ಎತ್ತಲೋ ಕೊಚ್ಚಿಕೊಂಡು ಹೋಗುವುದೂ ಸುಳ್ಳಲ್ಲ. ಇದರಿಂದ ದಿನ ನಿತ್ಯದ ಸಾಮಾನ್ಯ ಕೆಲಸದಲ್ಲೂ ಏಕಾಗ್ರತೆಯನ್ನು ಸಾಧಿಸಲಾರದಷ್ಟು ಮನಸ್ಸು ದುರ್ಬಲವಾಗುತ್ತದೆ. ಹಾಗೆಂದು ತನ್ಮಯತೆಯು ಇಲ್ಲವೇ ಇಲ್ಲ ಎನ್ನುವುದಕ್ಕಿಲ್ಲ. ಕಣ್ಣು, ಕಿವಿ, ನಾಲಿಗೆ ಮುಂತಾದವುಗಳ ಮೂಲಕ ಮನಸ್ಸು ಪಡೆಯುವ ಸುಖಾನುಭವದಲ್ಲಿ ವ್ಯಕ್ತಿಯು ಕಳೆದುಹೋಗುತ್ತಾನೆ. ಸಮಯ ಕಳೆದುದೇ ತಿಳಿಯದಂತಾಗುವುದು ಇದೆ. ಆದರೆ ಅದು ಅರಿವಿನ ಸ್ಥಿತಿಯಲ್ಲ. ಮೈಮರೆತ ಸ್ಥಿತಿ. ಹೊರಪ್ರಪಂಚದ ಆಕರ್ಷಣೆಗಳು ಇಂದ್ರಿಯಗಳನ್ನು ಸೆಳೆಯುತ್ತವೆ, ಮನದಲ್ಲಿ ಪ್ರಲೋಭನೆ ಗಳನ್ನು ಮೂಡಿಸುತ್ತವೆ. ಭಾವನೆಗಳ ಮೇಲಾಟಕ್ಕೆ ಸಿಲುಕಿದ ಮನಸ್ಸು ಸ್ಥಿರವಾಗಿರುವುದಕ್ಕೆ ಸಾಧ್ಯವಿಲ್ಲ. ಯಾವಾಗ ವ್ಯಕ್ತಿಯು ತನ್ನ ಅಂತರಂಗದಲ್ಲಾಗುವ ಹೊಯ್ದಾಟಗಳನ್ನು ಗಮನಿಸಲು ತೊಡಗುತ್ತಾನೆಯೋ ಆಗ ಭಾವವಿಕಾರಗಳು, ಭ್ರಮೆಯ ತೀವ್ರತೆಗಳು ಅರ್ಥವಾಗುತ್ತವೆ.

ವ್ಯಕ್ತಿಯೊಬ್ಬನ ಜೀವೋತ್ಕರ್ಷವು ಅವನ ಅಂತರಂಗ&ಬಹಿರಂಗ ಗಳನ್ನು ಅವಲಂಬಿಸಿದೆ. ಬಾಹ್ಯ ಪ್ರಪಂಚದಿಂದ ಪ್ರಚೋದಿತ ವಾಗಬೇಕಿದ್ದರೆ, ಅಂತರಂಗದಲ್ಲಿ ಅಂತಹ ಬಯಕೆಯು ಇರಬೇಕು ತಾನೆ? ಸ್ಪೋಟಕವು ಒಳಗಿದ್ದರೆ ಹೊರಗಿನ ಬೆಂಕಿಯು ಸೋಕಿದೊಡನೆ ಅದು ಸಿಡಿಯುತ್ತದೆ. ದ್ವೇಷವೋ, ಕೋಪವೋ ಅದರ ಬಗೆಗೆ ತೀವ್ರವಾಗಿ ಯೋಚಿಸತೊಡಗಿದರೆ ಮನಸ್ಸು ಅಶಾಂತವಾಗುವುದು ಸಹಜ. ಮನಸ್ಸಿನ ವಿರೇಚಕಗಳನ್ನು ಗಮನಿಸತೊಡಗಿದಾಗ ಅವೆಲ್ಲವೂ ಅಲ್ಪವೆಂದೆನ್ನಿಸುತ್ತದೆ, ರಾಗದ್ವೇಷಗಳು ಕುಂದುತ್ತವೆ, ವಿವೇಕವು ಜಾಗ್ರತವಾಗುತ್ತದೆ. ಇದರಿಂದಾಗಿ ಮನಸ್ಸು ಶಾಂತವಾಗುತ್ತದೆ. ಹೀಗೆ ತನ್ನ ಮನಸ್ಸಿನ ಆಟಗಳನ್ನು ತಾನೇ ನೋಡುತ್ತಾ ನಗುವುದು ನಿಜಕ್ಕೂ ಸಾಧನೆಯೇ ಸರಿ. ನಾನು ಎಂಬ ಅಹಂಕಾರಕ್ಕೆ ಒಳಗಾದವನು ಹೆಸರು, ಸ್ಥಾನ&ಮಾನ, ಅಧಿಕಾರ, ಮನ್ನಣೆಗಾಗಿ ಹಾತೊರೆಯುತ್ತಾನೆ. ತನ್ನನ್ನು ಸರ್ವಶ್ರೇಷ್ಠ ಎಂದು ಭಾವಿಸಿಕೊಂಡು ಬೀಗುತ್ತಾನೆ. ಇಂತಹ ಮನಸ್ಥಿತಿಯ ವ್ಯಕ್ತಿಯು ಎಂದಿಗೂ ತಾನು ಮಾಡುವ ಕೆಲಸ&ಕಾರ್ಯಗಳಲ್ಲಿ ಆನಂದವನ್ನು ಅನುಭವಿಸಲಾರ. ಅತಿಯಾದ ನಿರೀಕ್ಷೆ, ಕಾತರಗಳಿಂದ ಚಡಪಡಿಸುತ್ತಿರುತ್ತಾನೆ.

ಆದರೆ ಅಂತರ್​ಯಾನವನ್ನು ಮಾಡಬಲ್ಲ ನಿಜ ಸಾಧಕನು ತನ್ನೊಳಗೆ ಇಬ್ಬರಿರುವಂತೆ ಬಾಳಬಲ್ಲ. ಪ್ರಾಪಂಚಿಕ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿತ್ವವೊಂದಾದರೆ ಆಂತರಂಗಿಕವಾಗಿ ಅವ್ಯಾವು

ದನ್ನೂ ಹಚ್ಚಿಕೊಳ್ಳದ ಮುಕ್ತಭಾವವು ಇನ್ನೊಂದು ವ್ಯಕ್ತಿತ್ವವಾಗಿರುತ್ತದೆ. ಅಂದರೆ ಸ್ವಾರ್ಥಸಾಧನೆಗಾಗಿ ತೊಡುವ ಮುಖವಾಡಗಳಂತೆ ಅಲ್ಲ. ಆತನ ಬಾಹ್ಯ ನಡವಳಿಕೆಗಳು ಒಳಮನದ ಕಣ್ಗಾವಲಲ್ಲೆ ನಡೆಯುತ್ತದೆ. ಎಲ್ಲರೊಳಗೆ ಬೆರೆತು ಬಾಳುತ್ತಿದ್ದರೂ, ಕಷ್ಟ&ಸುಖಗಳಲ್ಲಿ ಸಹಭಾಗಿಯಾಗಿದ್ದರೂ, ತನ್ನದೇ ಬದುಕಿನ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದರೂ ಆತನು ಸ್ಥಿತಪ್ರನಾಗಿರುತ್ತಾನೆ. ತನ್ನದಾದ ಕರ್ತವ್ಯಗಳನ್ನು ನಿರ್ವಂಚನೆಯಿಂದ ನಿರ್ವಹಿಸುತ್ತಾನೆ. ಆದರೆ ಭಾವನಾತ್ಮಕವಾಗಿ ಅದಕ್ಕೆ ಬಂಧಿಸಲ್ಪಡುವುದಿಲ್ಲ. ಅಷ್ಟೇ ಅಲ್ಲ ತನ್ನ ಸುತ್ತಲೂ, ತನ್ನೊಳಗೂ ಆತ್ಮನನ್ನು ಕಾಣುತ್ತಾನೆ. ಶರೀರವೇ ತಾನು ಎಂದು ಬಗೆದು ಲೌಕಿಕ ಯಶಸ್ಸುಗಳನ್ನು ಪಡೆಯಲು ಉದ್ಯುಕ್ತನಾಗುವುದಿಲ್ಲ.

ದೇಹವನ್ನು ಧರಿಸಿರುವ ಆತ್ಮನಿಗೆ ಸಾವಿಲ್ಲ. ಕರ್ಮದುರಿತಗಳಿಂದ ಮುಕ್ತವಾಗಿ, ಋಣಶೇಷಗಳಿಂದ ಕಳಚಿಕೊಂಡು ಪರಮಾತ್ಮನನ್ನು ಸೇರುವ ಯಾತ್ರೆಯಲ್ಲಿ ಮನುಷ್ಯ ಜೀವಿತವು ಒಂದು ಪುಟ್ಟ ಅಧ್ಯಾಯ ಎನ್ನುವುದನ್ನು ಅರಿತಿರುತ್ತಾನೆ. ಹೀಗೆ ಆತ್ಮಾನವನ್ನು ಹೊಂದಿದವನು ಸಮಚಿತ್ತದಿಂದ ಇರುತ್ತಾನೆ. ಆತನನ್ನು ಸಾಂಸಾರಿಕ ಕ್ಲೇಶಗಳಾಗಲಿ, ಸಾವಿನ ಭಯವಾಗಲಿ ಕಾಡಲಾರದು. ತಾನೇ ದೇಹವೆಂದು ಭಾವಿಸಿದವರಿಗೆ ತಾನು ತೀರಿಹೋಗುತ್ತೇನೆ ಎಂಬ ಭಯವಿರುತ್ತದೆ, ಬದುಕಿರುವಷ್ಟು ಕಾಲ ಸುಖವನ್ನು ಬಾಚಿಕೊಳ್ಳಬೇಕೆನ್ನಿಸುತ್ತದೆ. ಆತ್ಮಾನಿಯಾದವನಿಗೆ ಈ ಮೌಢ್ಯವಿಲ್ಲ. ಆತನಿಗೆ ಧನ್ಯತೆಯ ಣಗಳನ್ನು ಅನುಭವಿಸುವುದೇ ಮುಖ್ಯವೆನ್ನಿಸುತ್ತದೆ. ಮನದ ಹುಚ್ಚು ಓಟವನ್ನು ತಡೆದು, ಅದನ್ನು ಸದ್ವಿಚಾರಗಳ ಕಡೆಗೆ ಹರಿಯಿಸುತ್ತಾನೆ. ಬುವಿಯ ಬದುಕನ್ನು ಬರಡೆನ್ನದೆ ಆತ್ಮೊನ್ನತಿಯನ್ನು ಪಡೆಯುವುದಕ್ಕೆ ವೇದಿಕೆಯೆಂದು ಭಾವಿಸಿ ಎಲ್ಲರೊಳಗಿದ್ದರೂ ನಿಸ್ಸಂಗಿಯಾಗಿ ಬಾಳುತ್ತಾನೆ. ಧನ್ಯ ಜೀವಿತವನ್ನು ಹೊಂದುತ್ತಾನೆ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

(ಪ್ರತಿಕ್ರಿಯಿಸಿ: vvsudina@gmail.com, kaviadoor@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net