

ಬೆಂಗಳೂರು: ವಿವಿಧ ಕೋರ್ಸ್ ಹಾಗೂ ಶಿಕ್ಷಣ ಸಂಸ್ಥೆಗಳ ನಡುವೆ ಕ್ರೆಡಿಟ್ ಸ್ಕೋರ್ಗಳ ವರ್ಗಾವಣೆ, ಉನ್ನತ ಶಿಕ್ಷಣದಲ್ಲಿ ಪ್ರತಿ ಹಂತ ಪೂರೈಸಿದಾಗಲೂ ತಿಳಿದಿರಬೇಕಾದ ಕಲಿಕಾ ಅಂಶಗಳನ್ನು ವ್ಯಾಖ್ಯಾನಿಸುವ ನಿಯಮಾವಳಿ ರೂಪಿಸಲು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ತೀರ್ವನಿಸಿದೆ.
ನಿಯಮಗಳನ್ನು ತಿದ್ದು ಪಡಿ ಮಾಡಿ ಮುಂದಿನ ಜನವರಿಯಲ್ಲಿ ಸಾರ್ವತ್ರಿಕ ಗೊಳಿಸಲಾಗುವುದು. ಈ ಮೂಲಕ ತಾಂತ್ರಿಕ ಶಿಕ್ಷಣದಲ್ಲಿ ಕ್ಷೇತ್ರದ ಮಾರ್ಗದರ್ಶಿ ಸೂತ್ರಗಳೊಂದಿಗೆ ಸಮಾನತೆ ಸಾಧಿಸಲಾಗುವುದು ಎಂದು ಯುಜಿಸಿ ಅಧ್ಯಕ್ಷ ಡಾ.ಜಗದೀಶ್ಕುಮಾರ್ ಹೇಳಿದ್ದಾರೆ.
ಹೀಗಾಗಿ, ಸದ್ಯ ತಾಂತ್ರಿಕ ಕೋರ್ಸ್ಗಳಲ್ಲಿ ಅವಕಾಶವಿರುವ ಲ್ಯಾಟರಲ್ ಎಂಟ್ರಿ ಸೌಲಭ್ಯ ಕಲಾ ಹಾಗೂ ಇತರ ವಿಭಾಗದ ಕೋರ್ಸ್ಗಳಿಗೂ ಅನ್ವಯವಾಗುತ್ತಾ ಎಂಬ ನಿರೀಕ್ಷೆ ಗರಿಗೆದರಿದೆ. ಸರಳವಾಗಿ ವಿವರಿಸುವುದಾದಲ್ಲಿ ನ್ಯಾಷನಲ್ ಹೈಯರ್ ಎಜುಕೇಷನ್ ಕ್ವಾಲಿಫಿಕೇಷನ್ ಫ್ರೇಮ್ರ್ಕ್ (ಎನ್ಎಚ್ಇಕ್ಯುಎಫ್) ತಿದ್ದುಪಡಿ ಮಾಡಲಾಗುತ್ತಿದ್ದು, ಇದರಿಂದಾಗಿ ಪ್ರತಿ ಕೋರ್ಸ್ ಪೂರ್ಣಗೊಳಿಸಿದ ನಂತದ ಕಲಿಕಾರ್ಥಿಯು ತಿಳಿದಿರಬೇಕಾದ ಅಂಶಗಳೇನು ಎಂಬುದನ್ನು ಸ್ಪಷ್ಟಪಡಿಸಲಿದೆ. ಸರ್ಟಿಫಿಕೇಟ್ ಕೋರ್ಸ್ಗಳಿಂದ ಪಿಎಚ್ಡಿವರೆಗಿನ ಎಲ್ಲ ಹಂತಗಳಿಗೂ ಇದು ಅನ್ವಯವಾಗಲಿದೆ.
ಕೋರ್ಸ್ವೊಂದನ್ನು ಪೂರ್ಣಗೊಳಿಸಲು ಹಾಗೂ ಮುಂದಿನ ಹಂತಕ್ಕೆ ತೆರಳಲು ವಿದ್ಯಾರ್ಥಿಯೊಬ್ಬ ಗಳಿಸಬೇಕಾದ ಕನಿಷ್ಠ ಕ್ರೆಡಿಟ್ ಸ್ಕೋರ್ ನಿಗದಿಪಡಿಸಲಿದೆ. ಈ ಮೊದಲು ಎನ್ಎಚ್ಇಕ್ಯುಎಫ್ ನಿಯಮಗಳಲ್ಲಿ 5ರಿಂದ 10ರವರೆಗೆ ಸ್ಕೇಲ್ ನಿಗದಿ ಮಾಡಲಾಗಿತ್ತು. ಆದರೆ, ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಷನ್ ಫ್ರೇಮ್ರ್ಕ್ನಲ್ಲಿ (ಎನ್ಎಸ್ಕ್ಯುಎಫ್) ಈ ಪ್ರಮಾಣವನ್ನು 4.5ರಿಂದ 8ರವರೆಗೆ ನಿಗದಿ ಮಾಡಲಾಗಿದೆ. ಈ ಕಾರಣಕ್ಕಾಗಿ ಎರಡೂ ನಿಯಮಗಳಲ್ಲಿ ವ್ಯತ್ಯಾಸವಿದೆ. ಪ್ರತಿ ಶೈಕ್ಷಣಿಕ ಹಂತದ ಪ್ರವೇಶಕ್ಕೆ ನಿಗದಿತ ಅರ್ಹತೆ, ಲ್ಯಾಟರಲ್ ಎಂಟ್ರಿಗೆ ಪೂರ್ವ ನಿರ್ಧರಿತ ಅಂಶಗಳು ಹಾಗೂ ಹಿಂದಿನ ಕಲಿಕಾ ಫಲಗಳ ಸಾಧನೆಗೆ ದೃಢೀಕರಣ ಮೊದಲಾವುಗಳನ್ನು ಸೂಚಿಸುತ್ತದೆ. ಈ ಕಾರಣಕ್ಕಾಗಿ ಕಲಿಕೆಯ ಸಮತಲ ಹಾಗೂ ಉರ್ಧ್ವ ಚಲನೆಗೆ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎನ್ಎಚ್ಇಕ್ಯುಎಫ್ನಲ್ಲೂ 4.5-8ರವರೆಗಿನ ಪ್ರಮಾಣವನ್ನೇ ಅನುಸರಿಸಲಾಗುವುದು ಎಂದು ಜಗದೀಶ್ ಹೇಳಿದ್ದಾರೆ.
ಎನ್ಇಪಿ ಅನ್ವಯ ತಿದ್ದುಪಡಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನ್ವಯ 4 ವರ್ಷಗಳ ಪದವಿ ಶಿಕ್ಷಣ ಆರಂಭಿಸಲಾಗಿದೆ. ಇದರಲ್ಲಿ ಬಹುಹಂತದ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶವಿದೆ. ಮೊದಲ ವರ್ಷಕ್ಕೆ ಸರ್ಟಿಫಿಕೇಟ್ 2ನೇ ವರ್ಷಕ್ಕೆ ಡಿಪ್ಲೊಮಾ, 3ನೇ ವರ್ಷ ಪದವಿ, ಅಂತಿಮ ವರ್ಷ ಆನರ್ಸ್ ನೀಡಲಾಗುತ್ತದೆ. ಇದಕ್ಕೆ ಅನುಗುಣವಾಗಿ ಎನ್ಎಚ್ಇಕ್ಯುಎಫ್ ನಿಯಮಗಳಿಗೆ ತಿದ್ದುಪಡಿ ಮಾಡಲಾಗುವುದು ಎಂದಿದ್ದಾರೆ.
ನಾಳೆಯಿಂದ ಕುಲಪತಿಗಳ ಚರ್ಚೆ: ಎನ್ಎಚ್ಇಕ್ಯುಎಫ್ ತಿದ್ದುಪಡಿಗೆ ಸಂಬಂಧಿಸಿದಂತೆ ಜಗದೀಶಕುಮಾರ್ ಮೇ 25ರಿಂದ ದೇಶದ ವಿವಿಧ ವಿವಿಗಳ ಕುಲಪತಿಗಳು ಹಾಗೂ ವಿವಿಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಿದ್ದಾರೆ. ಪರಿಷ್ಕರಣೆ ಯೋಜನೆಯ ವಿವರಗಳನ್ನು ನೀಡಲಿದ್ದಾರೆ.