ಲೇಸರ್ ಕ್ಷಿಪಣಿ ಯಶಸ್ವಿ ಪ್ರಯೋಗ

Laser
Published on

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಲೇಸರ್ ನಿರ್ದೇಶಿತ ಟ್ಯಾಂಕ್-ವಿರೋಧಿ ನಿರ್ದೇಶಿತ ಕ್ಷಿಪಣಿಯನ್ನು (ಎಟಿಜಿಎಂ) ಮಂಗಳವಾರ ಯಶಸ್ವಿಯಾಗಿ ಪ್ರಯೋಗಿ ಸಿದೆ. ಅಭ್ಯಾಸ್ ಎಂಬ ಹೈಸ್ಪೀಡ್ ಎಕ್ಸ್​ಪೆಂಡೇಬಲ್ ಏರಿಯಲ್ ಟಾರ್ಗೆಟ್​ನ (ಎಚ್​ಇಎಟಿ) ಪರೀಕ್ಷಾರ್ಥ ಪ್ರಯೋಗವನ್ನು ಕೂಡ ಮಂಗಳವಾರ ಯಶಸ್ವಿಯಾಗಿ ನಡೆಸಿದೆ. ಅಹಮದ್​ನಗರದಲ್ಲಿರುವ ಕೆ.ಕೆ. ರೇಂಜಸ್​ನಿಂದ ಎಂಬಿಟಿ ಅರ್ಜುನ್ ಟ್ಯಾಂಕ್ ಮೂಲಕ ಕ್ಷಿಪಣಿ ಉಡಾಯಿಸಲಾಯಿತು.

ಡಿಆರ್​ಡಿಒದ ಈ ಸಾಧನೆ ಭಾರತೀಯ ರಕ್ಷಣಾ ಪಡೆಗಳ ಶಕ್ತಿಗೆ ಇನ್ನಷ್ಟು ಬಲ ತುಂಬಲಿದೆ. ಪರೀಕ್ಷೆ ವೇಳೆ ಎಟಿಜಿಎಂ ಮೂರು ಕಿ.ಮೀ. ದೂರದ ಗುರಿಯನ್ನು ಯಶಸ್ವಿಯಾಗಿ ಭೇದಿಸಿತು ಎಂದು ಡಿಆರ್​ಡಿಒ ತಿಳಿಸಿದೆ. ‘ಸ್ಪೋಟಕ ಪ್ರತಿಕ್ರಿಯಾತ್ಮ ಶಸ್ತ್ರದಿಂದ (ಇಆರ್​ಎ) ರಕ್ಷಿತ ಸಶಸ್ತ್ರ ವಾಹನಗಳನ್ನು ಧ್ವಂಸ ಮಾಡಲು ಎಟಿಜಿಎಂ ಕ್ಷಿಪಣಿ ಎಚ್​ಇಎಟಿ ಸಿಡಿತಲೆ ಬಳಸಲಾಗುತ್ತದೆ. ವೈವಿಧ್ಯಮಯ ವೇದಿಕೆಗಳಿಂದ ಉಡಾಯಿಸುವ ರೀತಿಯಲ್ಲಿ ಅದನ್ನು ಅಭಿವೃದ್ಧಿ ಪಡಿಸಲಾಗಿದೆ. ಎಂಬಿಟಿ ಅರ್ಜುನ್​ನ ಒಂದು ಗನ್​ನಿಂದ ಉಡಾಯಿಸಿ ತಾಂತ್ರಿಕ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಸಂಸ್ಥೆ ವಿವರಿಸಿದೆ. ಅಭ್ಯಾಸ್ ಎಚ್​ಇಎಟಿಯನ್ನು ಒಡಿಶಾದ ಬಾಲಸೋರ್​ನ ಮಧ್ಯಂತರ ಪರೀಕ್ಷಾ ಕೇಂದ್ರದಿಂದ ಪ್ರಯೋಗಿಸಲಾಯಿತು.

ಸಿಂಗ್ ಮೆಚ್ಚುಗೆ

ಡಿಆರ್​ಡಿಒದ ಮಹತ್ವದ ಸಾಧನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಮೆಚ್ಚುಗೆ ವ್ಯಕ್ತಪಡಿಸಿ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ. ‘ಭವಿಷ್ಯದಲ್ಲಿ ಆಮದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ನಿರತವಾಗಿರುವ ಡಿಆರ್​ಡಿಒ ತಂಡದ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಅಭ್ಯಾಸ್ ವಿಶೇಷ

ಸಣ್ಣ ಇನ್​ಲೈನ್ ಅನಿಲ ಟರ್ಬೆನ್ ಇಂಜಿನ್ ಮೇಲೆ ಅಭ್ಯಾಸ್​ನ್ನು ಡಿಆರ್​ಡಿಒ ವಿನ್ಯಾಸಗೊಳಿಸಿದೆ. ಅದು ನ್ಯಾವಿಗೇಷನ್ ಮತ್ತು ನಿರ್ದೇಶನಕ್ಕಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಮೈಕ್ರೋ ಇಲೆಕ್ಟ್ರೊ ಮೆಕ್ಯಾನಿಕಲ್ ವ್ಯವಸ್ಥೆಯನ್ನು ಬಳಸುತ್ತದೆ. ಅಭ್ಯಾಸ್​ನ ಫ್ಯೂಸಲೇಜ್ ಅಭಿವೃಧಿಪಡಿಸಲು ಡಿಆರ್​ಡಿಒ ತನ್ನ ಲಕ್ಷ್ಯ ಕ್ಷಿಪಣಿಯ ಭಾಗವನ್ನು ಅಳವಡಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net