ರೋಗ ತಡೆಗೆ ಲಾರ್ವಾ ಸರ್ವೇ

ckm health dept
ಚಿಕ್ಕಮಗಳೂರು ಟಿಎಚ್‌ಒ ಡಾ. ಸೀಮಾ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಗರದಲ್ಲಿ ಲಾರ್ವಾ ಸಮೀಕ್ಷೆ ನಡೆಸಿದರು. ಜೆ.ಎನ್.ಬೇಬಿ, ಮಂಜುನಾಥ್, ಸಂತೋಷ್ ಇತರರಿದ್ದರು.
Published on

ಚಿಕ್ಕಮಗಳೂರು: ಮಳೆಗಾಲ ಆರಂಭವಾಗುತ್ತಿರುವ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಎಚ್ಚರಿಕೆ ಕ್ರಮವಾಗಿ ಲಾರ್ವಾ ಸರ್ವೇ ಮಾಡಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸೀಮಾ ತಿಳಿಸಿದರು.
ಶುಕ್ರವಾರ ಶಾಂತಿ ನಗರದಲ್ಲಿ ಲಾರ್ವಾ ಸರ್ವೇ ಮಾಡಿ ಮಾತನಾಡಿ, ಒಂದು ತಿಂಗಳಿನಿಂದ ಡೆಂಘೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ವಿಶೇಷವಾಗಿ ತಿಂಗಳ ಮೊದಲನೇ ಶುಕ್ರವಾರ ಮತ್ತು ಮೂರನೇ ಶುಕ್ರವಾರ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ನಗರದ ವಿವಿಧೆಡೆ ಲಾರ್ವಾ ಸರ್ವೇ ಮಾಡುತ್ತಿದ್ದಾರೆ ಎಂದರು.
ನಾಲ್ಕನೇ ಶುಕ್ರವಾರ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಲಾರ್ವಾ ಸರ್ವೇ ಮಾಡುತ್ತಿದ್ದು ನಗರ ಪ್ರದೇಶದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಆರೋಗ್ಯ ಇಲಾಖೆ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು. ನೀರು ಸಂಗ್ರಹಣಾಗಾರಗಳನ್ನು ಸರಿಯಾಗಿ ಮುಚ್ಚಳದಿಂದ ಮುಚ್ಚಬೇಕು. ಸೊಳ್ಳೆಗಳು ಮೊಟ್ಟೆ ಇಡಲು ಅವಕಾಶವಾಗದಂತೆ ಎಚ್ಚರ ವಹಿಸಲು ಮನವಿ ಮಾಡಿದರು.
ನಗರಸಭೆಯಿಂದ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಸ್ಪ್ರೇ, ಫಾಗಿಂಗ್, ಬ್ಲೀಚಿಂಗ್ ಪೌಡರ್ ಸಿಂಪಡಿಸುತ್ತಿದ್ದಾರೆ. ಚರಂಡಿ, ತೆಂಗಿನಚಿಪ್ಪು, ಟೈರ್‌ಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಡೆಂಘೆ ಹರಡುವ ಸೊಳ್ಳೆಗಳು ಬೆಳಗ್ಗೆ ಸಮಯದಲ್ಲಿ ಕಚ್ಚುವುದರಿಂದ ವಯಸ್ಸಾದವರು, ರೋಗಿಗಳು ಇದ್ದರೆ ಸೊಳ್ಳೆ ಪರದೆ, ಕಿಟಕಿಗಳಿಗೆ ಸೊಳ್ಳೆ ಮೆಶ್, ಸೊಳ್ಳೆ ಬತ್ತಿ ಮುಂತಾದವುಗಳನ್ನು ಬಳಸುವ ಮೂಲಕ ಆರೋಗ್ಯ ರಕ್ಷಣೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಎನ್.ಬೇಬಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಂತೋಷ್, ಆಶಾ ಕಾರ್ಯಕರ್ತೆಯರಾದ ಗಾಯತ್ರಿ, ಚಂದ್ರಮ್ಮ, ಮೇಘಾ, ಸವಿತಾ, ಸುಜಾತಾ, ಗೌರಿ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net