ಅತಿ ದೊಡ್ಡ ಸಹಕಾರ ಯೋಜನೆ ನೇತಾನ್ಯಹು ಶ್ಲಾಘನೆ

Netanyahu
Published on

ಜೆರುಸಲೇಂ: ಜಿ-20 ಶೃಂಗಸಭೆಯ ಮೊದಲ ದಿನವಾದ ಶನಿವಾರ ಘೊಷಿಸಲಾದ ಮಹತ್ವಾಕಾಂಕ್ಷೆಯ ಭಾರತ-ಮಧ್ಯ ಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ಯೋಜನೆಯು ಇತಿಹಾಸದಲ್ಲೇ ‘ಅತಿ ದೊಡ್ಡದಾದ ಸಹಕಾರ ಯೋಜನೆಯಾಗಿದೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಶ್ಲಾಘಿಸಿದ್ದಾರೆ. ಮಧ್ಯ ಪ್ರಾಚ್ಯದ ಮೂಲಕ ಯುರೋಪ್​ಗೆ ಭಾರತವನ್ನು ಸಂರ್ಪಸುವ ಈ ಯೋಜನೆಯಿಂದ ಮಧ್ಯ ಪ್ರಾಚ್ಯ ಮತ್ತು ಇಸ್ರೇಲ್​ನ ಚಿತ್ರಣವೇ ಬದಲಾಗಲಿದೆ. ಅಲ್ಲದೆ, ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ ಎಂದು ನೇತ್ಯಾನಹು ಹೇಳಿದ್ದಾರೆ. ಚೀನಾದ ಬೆಲ್ಟ್ ಮತ್ತು ರಸ್ತೆ ಉಪಕ್ರಮಕ್ಕೆ ಪರ್ಯಾಯವಾದ ಮಾರ್ಗ ಇದೆಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ನ್ಯಾಯಾಂಗದ ಅಧಿಕಾರವನ್ನು ಕುಗ್ಗಿಸುವ ಇಸ್ರೇಲ್ ಸರ್ಕಾರದ ಯೋಜನೆಯೊಂದನ್ನು ಪ್ರತಿಭಟಿಸಿ ನೂರಾರು ಇಸ್ರೇಲಿಗರು ಬೀದಿಗಿಳಿದಿದ್ದ ಸಂದರ್ಭದಲ್ಲಿ ಕಾರಿಡಾರ್ ಸ್ವಾಗತಿಸುವ ನೇತಾನ್ಯಹು ಅವರ ಸಂದೇಶವನ್ನು ಪ್ರಸಾರ ಮಾಡಲಾಯಿತು.

ಶೃಂಗಸಭೆಯನ್ನು ಹೊಗಳಿದ ರಷ್ಯಾ

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ-20 ಕೂಟದ ಶೃಂಗಸಭೆ ಅನೇಕ ರೀತಿಯಲ್ಲಿ ಮಹತ್ವದ್ದಾಗಿದೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗಿ ಲ್ಯಾವ್ರೋವ್ ಅಭಿಪ್ರಾಯಪಟ್ಟಿದ್ದಾರೆ. ಹಲವು ಸವಾಲುಗಳನ್ನು ಎದುರಿಸಿ ಮುನ್ನಡೆಯಲು ಇದು ದಾರಿ ತೋರಿಸಿದೆ ಹಾಗೂ

ದಕ್ಷಿಣಾರ್ಧ ಗೋಳದ ಶಕ್ತಿ ಮತ್ತು ಮಹತ್ವವನ್ನು ಪ್ರದರ್ಶಿಸಿದೆ ಎಂದು ಅವರು ಹೇಳಿದ್ದಾರೆ. ಉಕ್ರೇನ್ ಸಹಿತ ಹಲವು ವಿಷಯಗಳಲ್ಲಿ ತಮ್ಮ ಧೋರಣೆಯನ್ನು ಹೇರುವುದರಿಂದ ಪಾಶ್ಚಿಮಾತ್ಯ ದೇಶಗಳನ್ನು ತಡೆಯುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಎಂದು ಲ್ಯಾವ್ರೋವ್ ಹೇಳಿದರು. ಜಾಗತಿಕ ನ್ಯಾಯಪೂರ್ಣ ಆಡಳಿತ, ನ್ಯಾಯಸಮ್ಮತ ಆರ್ಥಿಕತೆಗೂ ದಿಕ್ಕು ತೋರಿಸಿದೆ ಎಂದರು.

ಬಿಆರ್​ಐನಿಂದ ಇಟಲಿ ನಿರ್ಗಮನ?

ಚೀನಾದ ಮಹತ್ವಾಕಾಂಕ್ಷೆಯ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ (ಬಿಆರ್​ಐ) ಹೂಡಿಕೆ ಒಪ್ಪಂದದಿಂದ ನಿರ್ಗಮಿಸಲು ಇಟಲಿ ಯೋಜಿಸುತ್ತಿದೆ ಎಂದು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಭಾನುವಾರ ಚೀನಾ ಪ್ರಧಾನಿ ಲಿ ಕಿಯಾಂಗ್ ಅವರಿಗೆ ತಿಳಿಸಿದ್ದಾರೆ ಎಂದು ವರದಿ ಆಗಿದೆ.

200 ಗಂಟೆ ಚರ್ಚೆ

ಒಮ್ಮತದ ಘೊಷಣೆ ರೂಪಿಸಲು ಭಾರತೀಯ ರಾಜತಾಂತ್ರಿಕರ ತಂಡ 200 ಗಂಟೆ ಅವಿರತ ಸಮಾಲೋಚನೆ ನಡೆಸಿತ್ತು ಎಂದು ಶೃಂಗ ಸಭೆಯ ಶೆರ್ಪಾ ಅಮಿತಾಭ್​ಕಾಂತ್ ಭಾನುವಾರ ತಿಳಿಸಿದ್ದಾರೆ. ತುಂಬಾ ಸಂಕೀರ್ಣವಾದ ಯೂಕ್ರೇನ್ ಸಂಘರ್ಷದ ವಿಚಾರವಾಗಿ ತಮ್ಮ ಸಹವರ್ತಿಗಳೊಂದಿಗೆ 15 ಕರಡುಗಳನ್ನು ವಿನಿಮಯ ಮಾಡಿದ್ದರು ಎಂದಿದ್ದಾರೆ.

ಹೇಳಿಕೆ ಸಹಮತಕ್ಕೆ ತರೂರ್ ಮೆಚ್ಚುಗೆ

ಜಿ-20 ಶೃಂಗಸಭೆಯ ಸರ್ವಸಮ್ಮತ ‘ದೆಹಲಿ ಘೊಷಣೆ’ ರೂಪುಗೊಳ್ಳುವುದರ ಪ್ರಧಾನ ಸೂತ್ರಧಾರಿಯಾದ ಜಿ-20 ಶೆರ್ಪಾ ಅಮಿತಾಬ್ ಕಾಂತ್ ಅವರನ್ನು ಭಾನುವಾರ ಮನದುಂಬಿ ಹೊಗಳಿದ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್, ‘ಇದು ಜಿ-20ರಲ್ಲಿ ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ’ ಎಂದು ವರ್ಣಿಸಿದ್ದಾರೆ. ಐಎಎಸ್ ಅಧಿಕಾರಿ ಅಮಿತಾಬ್ ಕಾಂತ್ ಜಿ-20 ಶೃಂಗಸಭೆ ನಡೆಸುವ ಹೊಣೆಗಾರಿಕೆ ಹೊತ್ತಿದ್ದಕ್ಕಾಗಿ ಅವರನ್ನು ಜಿ-20 ಶೆರ್ಪಾ ಎಂದು ಸಂಬೋಧಿಸಲಾಗುತ್ತಿತ್ತು. ಜಿ-20 ದೆಹಲಿ ಘೊಷಣೆಯಲ್ಲಿ ರಷ್ಯಾ-ಯೂಕ್ರೇನ್ ಕುರಿತ ವಾಕ್ಯವೃಂದದ ಬಗ್ಗೆ ಸಹಮತವನ್ನು ರೂಪಿಸುವ ಪ್ರಕ್ರಿಯೆಯನ್ನು ಸಂದರ್ಶನವೊಂದರಲ್ಲಿ ಕಾಂತ್ ವಿವರಿಸಿದ್ದನ್ನು ಟ್ಯಾಗ್ ಮಾಡಿ, ಇದೊಂದು ಮಹತ್​ಸಾಧನೆ ಎಂದು ತರೂರ್ ಹೇಳಿದ್ದಾರೆ. ‘ನೀವು ಐಎಎಸ್ ಅನ್ನು ಆಯ್ದುಕೊಂಡಾಗ ಐಎಫ್​ಎಸ್ ಒಬ್ಬ ಮುತ್ಸದ್ದಿ ರಾಜತಾಂತ್ರಿಕನನ್ನು ಕಳೆದುಕೊಂಡಂತೆ ಕಾಣುತ್ತದೆ’ ಎಂದು ಮಾಜಿ ಅಂಡರ್ ಸೆಕ್ರೆಟರಿ-ಜನರಲ್ ಆಗಿರುವ ತರೂರ್ ಶನಿವಾರ ತಡ ರಾತ್ರಿ ‘ಎಕ್ಸ್’ ಪೋಸ್ಟ್​ನಲ್ಲಿ ಹೇಳಿದ್ದಾರೆ. ರಷ್ಯಾ ಮತ್ತು ಚೀನಾದೊಂದಿಗೆ ಸಮಾಲೋಚನೆ ನಡೆಸಿ ಕಳೆದ ರಾತ್ರಿಯಷ್ಟೇ ಅಂತಿಮ ಕರಡನ್ನು ಸಿಸದ್ಧಪಡಿಸಲಾಯಿತು ಎಂದು ‘ದೆಹಲಿ ಘೊಷಣೆ’ ಬಗ್ಗೆ ಭಾರತದ ಜಿ-20 ಶೆರ್ಪಾ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net