ಭಾಷೆ ಸಂವಹನ, ಸಂಸ್ಕೃತಿಯ ಭಾಗ

sahyadri
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿನಲ್ಲಿ ಆಯೋಜಿಸಿದ್ದ ಇಂಗ್ಲಿಷ್ ಸಂವಹನ ಕಾರ್ಯಾಗಾರವನ್ನು ಕುವೆಂಪು ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಬಿ.ಬಿ.ರಾಮಪ್ರಸಾದ್ ಉದ್ಘಾಟಿಸಿದರು. ಡಾ. ಟಿ.ಅವಿನಾಶ್, ಡಾ. ಕೆ.ಎಸ್.ಸರಳಾ, ಡಾ. ಫ್ರಾನ್ಸಿಸ್ ಡಿಸೋಜ, ಡಾ. ಶಿವಮೂರ್ತಿ ಇತರರಿದ್ದರು.
Published on

ಶಿವಮೊಗ್ಗ: ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡಾಗ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಳ್ಳಬಹುದು. ಭಾಷೆ ಸಂವಹನ ಮಾಧ್ಯಮವಷ್ಟೇ ಆಗಿರುವುದಿಲ್ಲ, ಅದು ಸಂಸ್ಕೃತಿಯ ಭಾಗವೇ ಆಗಿರುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಬಿ.ಬಿ.ರಾಮಪ್ರಸಾದ್ ಅಭಿಪ್ರಾಯಪಟ್ಟರು.

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜಿನಲ್ಲಿ ಕಡೆಕೊಪ್ಪಲು ಪ್ರತಿಷ್ಠಾನ, ಕಾಲೇಜಿನ ಇಂಗ್ಲಿಷ್ ವಿಭಾಗ ಬುಧವಾರ ಏರ್ಪಡಿಸಿದ್ದ ಇಂಗ್ಲಿಷ್ ಸಂವಹನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಭಾಷೆ ಆಲೋಚನೆಗಳನ್ನು ದಾಟಿಸುವ ವಾಹಕ. ಇಂಗ್ಲಿಷ್ ಭಾಷೆ ಜಗತ್ತನ್ನು ಹತ್ತಿರದಿಂದ ನೋಡಲು ಸಹಾಯ ಮಾಡುತ್ತದೆ ಎಂದರು.
ಭಾಷೆ ಮನುಷ್ಯನಿಗೆ ದಕ್ಕಿರುವ ಒಂದು ವಿಶಿಷ್ಟ ಶಕ್ತಿ. ಭಾಷೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ಬಳಸಲಾಗುತ್ತಿದೆ. ಇದರಲ್ಲಿ ಮನುಷ್ಯನ ಬೇರೆ ಬೇರೆ ಅಭಿವ್ಯಕ್ತಿಗಳು ದಾಖಲಾಗುತ್ತವೆ. ಅಲ್ಲದೆ ಜಗತ್ತಿನ ವಿದ್ಯಮಾನಗಳನ್ನು ಪಡೆಯಬಹುದು. ಅರಿವು ವಿಸ್ತರಿಸಿಕೊಳ್ಳಬಹುದು ಎಂದು ಹೇಳಿದರು.
ಪ್ರಾಚಾರ್ಯ ಡಾ. ಟಿ.ಅವಿನಾಶ್ ಮಾತನಾಡಿ, ಭಾಷೆ ಮನುಷ್ಯನಿಗೆ ಸಿಕ್ಕಿರುವ ಅದ್ಭುತ ವರ. ಯಾವುದೇ ಮಗು ಆಯಾ ಸ್ಥಳಕ್ಕೆ ಸಂಬಂಧಿಸಿದ ಭಾಷೆಯನ್ನೇ ಕಲಿಯುತ್ತದೆ. ಇಂಗ್ಲಿಷ್ ಇಂದು ಅನಿವಾರ್ಯ ಮತ್ತು ಅಗತ್ಯ. ಸರ್ಕಾರಿ ಉದ್ಯೋಗಗಳು ಕ್ಷೀಣಿಸುತ್ತಿರುವ ಈ ಹೊತ್ತಿನಲ್ಲಿ ಖಾಸಗಿ ಉದ್ಯೋಗಗಳೇ ನಮ್ಮ ಆಯ್ಕೆಯಾಗಿರುತ್ತವೆ. ಖಾಸಗಿ ಉದ್ಯಮಗಳು ಕೌಶಲ ಬಯಸುತ್ತವೆ. ಇಂಗ್ಲಿಷ್ ಭಾಷೆ ಕೌಶಲದ ಒಂದು ಭಾಗವೇ ಆಗಿರುವುದರಿಂದ ಇಂಗ್ಲಿಷ್ ಜತೆಗೆ ಕೌಶಲ ಕಲಿತವರಿಗೆ ಉದ್ಯೋಗಾವಕಾಶಗಳು ಹೆಚ್ಚು ಎಂದು ತಿಳಿಸಿದರು.
ಇಂಗ್ಲಿಷ್ ಪಠ್ಯಕ್ರಮವು ಸಾಹಿತ್ಯಿಕ ಅಂಶಗಳು ಮತ್ತು ಸಂವಹನದ ಕೌಶಲಗಳನ್ನು ಒಳಗೊಂಡಿರಬೇಕು. ಭಾಷೆಗಿರುವ ಸಾಂಸ್ಕೃತಿಕ ಮತ್ತು ಸಾಮಾಜಿಕ ಆಯಾಮಗಳು ಮುಖ್ಯವಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಭಾಷೆ ಎಂಬುದು ಅನ್ನದ ಮೂಲವಾಗಿದೆ ಎಂದರು.
ಮಣಿಪಾಲ್ ವಿವಿ ಪ್ರಾಧ್ಯಾಪಕ ಪ್ರವೀಣ್ ಶೆಟ್ಟಿ, ಇಂಗ್ಲಿಷ್ ಪ್ರಾಧ್ಯಾಪಕ ಡಾ. ಫ್ರಾನ್ಸಿಸ್ ಡಿಸೋಜ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಡಾ. ಕೆ.ಎಸ್.ಸರಳಾ, ಡಾ. ಶಿವಮೂರ್ತಿ, ಎಂ.ಪರಶುರಾಮ್, ಕಡೆಕೊಪ್ಪಲು ಪ್ರತಿಷ್ಠಾನದ ಲಕ್ಷ್ಮೀನಾರಾಯಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net