

ಶಿವಮೊಗ್ಗ: ಭಾಷೆ ಬಳಕೆಯಿಂದ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ. ಹೀಗಾಗಿ ಯುವ ಸಮೂಹ ಕನ್ನಡದ ಕಲಿಕೆಯತ್ತ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕಿದೆ ಎಂದು ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.
ಎಟಿಎನ್‌ಸಿ ಕಾಲೇಜಿನಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ-ಆಚಾರ್ಯ ಕನ್ನಡ ಉತ್ಸವ-2024 ಉದ್ಘಾಟಿಸಿ ಮಾತನಾಡಿದ ಅವರು, ಭಾಷೆ ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಸಾಧನ. ನಮ್ಮ ನೆಲದಲ್ಲಿ ಕನ್ನಡದ ಉಳಿವಿನ ಚರ್ಚೆ ನಡೆಯುತ್ತಿರುವುದು ಬೇಸರದ ಸಂಗತಿ ಎಂದರು.
ವಸಾಹತುಶಾಹಿ ಆಡಳಿತವಿದ್ದ ರಾಷ್ಟ್ರಗಳಲ್ಲಿ ಮಾತನಾಡುವ ಭಾಷೆ ಮತ್ತು ಕಲಿಯುವ ಭಾಷೆಯ ನಡುವೆ ಗೊಂದಲ ಉಂಟಾಗಿ ಯಾವ ಭಾಷೆಯನ್ನೂ ಪರಿಪೂರ್ಣವಾಗಿ ಕಲಿಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಎಲ್ಲ ವ್ಯವಹಾರಗಳು ಕನ್ನಡದಲ್ಲಿಯೇ ನಡೆದಾಗ ಮಾತ್ರ ಭಾಷೆ ಬಗೆಗಿನ ಆತಂಕ ದೂರವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕುವೆಂಪು ವಿವಿ ಕನ್ನಡ ಅಧ್ಯಾಪಕರ ವೇದಿಕೆ ಅಧ್ಯಕ್ಷೆ ಡಾ. ಸಬಿತಾ ಬನ್ನಾಡಿ ಮಾತನಾಡಿ, ಭಾಷೆಗೆ ಕನ್ನಡದಲ್ಲಿ ನುಡಿ ಎಂದು ಕರೆಯುತ್ತಾರೆ. ಈ ನುಡಿ ಇಲ್ಲದೇ ಹೋಗಿದ್ದರೆ ಪ್ರಾಣಿಗಳಿಗಿಂತ ಮನುಷ್ಯ ವಿಭಿನ್ನವಾಗಿ ಕಾಣಲು ಸಾಧ್ಯವಾಗುತ್ತಿರಲಿಲ್ಲ. ನುಡಿಯನ್ನು ಸುಳ್ಳಿಗಾಗಿ, ಮನುಷ್ಯತ್ವವನ್ನು ಒಡೆಯಲಿಕ್ಕಾಗಿ, ಅಪಮಾನಕ್ಕಾಗಿ ಬಳಸಿಕೊಳ್ಳುವಾಗ ಯಾಕೆ ಈ ನುಡಿ ಬೇಕಿತ್ತು ಎಂದೆನಿಸುತ್ತದೆ. ಅದೇ ನುಡಿಯನ್ನು ಸಮಾನತೆ, ನ್ಯಾಯ, ಸೃಜನಶೀಲ ಸಾಹಿತ್ಯಕ್ಕಾಗಿ ಬಳಸಿದಾಗ ಭಾಷೆ ಮನುಷ್ಯನಿಗೆ ಸಿಕ್ಕಿದ ಸಿರಿ ಎಂಬ ಧನ್ಯತೆ ಮೂಡುತ್ತದೆ ಎಂದರು.
ಸರ್ಕಾರ ಇಂಗ್ಲಿಷ್ ಮಾಧ್ಯಮವನ್ನು ಅನಿವಾರ್ಯಗೊಳಿಸುತ್ತಿದೆ. ಲಾಭಕ್ಕಾಗಿ ಭಾಷೆಯನ್ನು ಬಂಡವಾಳವಾಗಿ ಮಾಡಿಕೊಂಡವರು ಮಾತೃಭಾಷೆಯನ್ನು ಹಿಂದೆ ದೂಡುವಂತೆ ಮಾಡುತ್ತಿದ್ದಾರೆ. ಆಳುವ ಸರ್ಕಾರಗಳಿಗೆ ಹಿಂದಿ ಭಾಷೆ ಬಗ್ಗೆ ಮಮತೆಯಿದೆ, ಇಂಗ್ಲಿಷ್ ಬಗ್ಗೆ ವ್ಯಾಮೋಹವಿದೆ. ಅದರೇ ಕನ್ನಡಮ್ಮನ ಗುಡಿ ಕಟ್ಟಲು, ಧ್ವಜವನ್ನು ಎತ್ತಿ ಹಿಡಿಯಲು ಸರ್ಕಾರಗಳಿಗೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ, ಪ್ರಾಚಾರ್ಯೆ ಪ್ರೊ. ಪಿ.ಆರ್.ಮಮತಾ, ಉದ್ಯಮಿ ಡಿ.ಎಸ್.ಚಂದ್ರು, ಪ್ರಮುಖರಾದ ಪ್ರೊ. ಕೆ.ಎಂ.ನಾಗರಾಜು, ಮಂಜುನಾಥ. ಎನ್.ಶ್ರೀಲಲಿತಾ ಇತರರಿದ್ದರು.