ಭೂಕುಸಿತ ದುರಂತ: ಪ್ರಕೃತಿಯ ಎಚ್ಚರಿಕೆ ಪಾಠವೆಂದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ

BJP MLC C T Ravi
Published on

ಬೆಂಗಳೂರು: ಕೇರಳದ ವಯನಾಡಲ್ಲಿ ಸಂಭವಿಸಿದ ಭೂಕುಸಿತ ದುರಂತಕ್ಕೆ ಅಪಾರ ಸಾವು-ನೋವು ಸಂಭವಿಸಿರುವುದು ಹೃದಯ ಕಲ್ಲವಿಲ್ಲಗೊಳಿಸಿದೆ. ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಬಾಧಿತ ಕೇರಳದ ಜತೆಗೆ ಬಿಜೆಪಿಯೂ ಇರಲಿದೆ. ಈ ದುರಂತವು ಪ್ರಕೃತಿಯ ಎಚ್ಚರಿಕೆ ಪಾಠವೆಂದು ಪಕ್ಷದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ತೀವ್ರ ಭೂಕುಸಿತ ಬಾಧಿತ ಕೇರಳಕ್ಕೆ ಪ್ರಧಾನಿ ನರೇಂದ್ರ ಮೋದಿ ತಕ್ಷಣ ಸ್ಪಂದಿಸಿ, ಕೇರಳ ಸಿಎಂ ಜತೆಗೂ ಮಾತನಾಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ತ್ವರಿತವಾಗಿ ನೆರವಿಗೆ ಧಾವಿಸುತ್ತದೆ ಎಂಬ ವಿಶ್ವಾಸವಿದೆ ಎಂದರು.

ರಾಜ್ಯದ ಶಿರೂರು ಬಳಿ ಗುಡ್ಡ ಕುಸಿತ ಸಂಭವಿಸಿತ್ತು. ಇಂತಹ ದುರ್ಘಟನೆಗಳು ಆಗಾಗ್ಗೆ ನಡೆಯುತ್ತಿವೆ.ಅಭಿವೃದ್ಧಿ ಹೆಸರಲ್ಲಿ ಯಾವುದು ಮಾಡಬೇಕು, ಯಾವುದು ಮಾಡಬಾರದು ಎನ್ನುವ ಬಗ್ಗೆ ಎಚ್ಚರಿಕೆ ಪಾಠಗಳಿವು. ಇಷ್ಟಾದರೂ ನಾವು ಸಾಕಷ್ಟು ಎಚ್ಚರಿಕೆವಹಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ವರದಿಗೆ ಮುನ್ನವೇ ಕ್ಲೀನ್‌ಚಿಟ್ !

ರಾಜಸ್ಥಾನದಿಂದ ರೈಲಿನಲ್ಲಿ ಬಂದದ್ದು ಕುರಿ ಅಥವಾ ನಾಯಿ ಮಾಂಸವೆ ? ಎನ್ನುವ ಬಗ್ಗೆ ಎ್ಎಸ್‌ಎಲ್ ವರದಿಗೆ ಮುನ್ನ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮೇಕೆ ಮಾಂಸವೆಂದು ಕ್ಲೀನ್ ಚಿಟ್ ಕೊಟ್ಟುಬಿಟ್ಟಿದ್ದಾರೆ. ವೈಜ್ಞಾನಿಕ ವರದಿ ಬರುವ ತನಕವೂ ಕಾಯದಿರುವುದು ಅಚ್ಚರಿ ಮೂಡಿಸಿದೆ.

ಎಲ್ಲ ಪೆಟ್ಟಿಗೆಗಳ ಮಾಂಸವನ್ನೂ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸುವುದಿಲ್ಲ. ಮಾಹಿತಿ ಪ್ರಕಾರ ಯಾರು ಮಾಂಸ ತರಿಸಿದ್ದಾರೋ ಅವರಿಂದಲೇ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಈ ದಂಧೆ ಪೊಲೀಸ್ ಇಲಾಖೆ ಕುಮ್ಮಕ್ಕು ನೀಡಿದಂತಿದೆ. ಗೃಹ ಸಚಿವರ ಹೇಳಿಕೆ ಗಮನಿಸಿದರೆ ಸರ್ಕಾರವೇ ಶಾಮೀಲಾಗಿರುವ ಸಂದೇಹ ಉಂಟಾಗುತ್ತದೆ.

ರೈಲಿನಲ್ಲಿ ಪೆಟ್ಟಿಗೆಗಳಲ್ಲಿ ಬಂದ ಮಾಂಸದ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಮಾಂಸ ತರಿಸಿದ್ದು ನಾನೇ ಎಂದು ಒಪ್ಪಿಕೊಂಡ ಅಬ್ದುಲ್ ರಜಾಕ್ ವಿರುದ್ಧ ಕ್ರಮವಹಿಸಬೇಕಾಗಿತ್ತು. ಆದರೆ ಮಾಹಿತಿದಾರ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿರುವುದು ಸರಿಯಲ್ಲವೆಂದು ಆಕ್ಷೇಪಿಸಿದರು.

ಈ ಪ್ರಕರಣದಲ್ಲೂ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿರುವುದು ಸ್ಪಷ್ಟ. ಕೂಡಲೇ ಬಂಧಿತ ಪುನೀತ್ ಕೆರೆಹಳ್ಳಿಯವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಹೊರ ಗುತ್ತಿಗೆ ನೌಕರರ ಸೇವೆ ಕಾಯಂ ಮಾಡದಿದ್ದರೆ ಕಾಂಗ್ರೆಸ್ ಸರ್ಕಾರಕ್ಕೆ ಅಪವಾದ ಬರುತ್ತದೆ. ಚುನಾವಣೆಯಲ್ಲಿ ಕಾಯಂ ಮಾಡುತ್ತೇವೆ ಎಂದು ನೀಡಿದ ಭರವಸೆ ಈಡೇರಿಸುವುದು ಕಾಂಗ್ರೆಸ್‌ನ ಹೊಣೆಯಾಗಿದೆ ಎಂದು ಸಿ.ಟಿ.ರವಿ ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net