ಭೂ ದಾಖಲೆಗಳ ಡಿಜಿಟಲೀಕರಣಕ್ಕೆ ಸಚಿವ ಶಿವಾನಂದ ಚಾಲನೆ

5-RNR-07
Published on

ಹಾವೇರಿ: ತಾಲೂಕು ಕಚೇರಿ ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲ ಭೂದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು.

ಭೂಸುರಕ್ಷಾ ಯೋಜನೆಯಡಿಯಲ್ಲಿ ಇಲಾಖೆಯ ಹಳೆಯ ಭೂದಾಖಲೆಗಳ ಗಣಕೀಕರಣದಿಂದ ದಾಖಲೆಗಳ ಸುರಕ್ಷತೆ ಮತ್ತು ಸುಲಭ ಲಭ್ಯತೆ ಆಗಲಿದೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಸಚಿವರಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಭೂದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು ಈಗಾಗಲೇ ಹಾನಗಲ್ಲ ತಾಲೂಕು ಪೈಲಟ್​ (ಪ್ರಾಯೋಗಿಕ) ತಾಲೂಕನ್ನಾಗಿ ತೆಗೆದುಕೊಂಡು ಈ ಕಾರ್ಯವನ್ನು ಯಶಸ್ವಿಯಾಗಿ ರ್ಪೂಣಗೊಳಿಸಲಾಗಿದೆ. ಈಗ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಇನ್ನೂಳಿದ ತಾಲೂಕುಗಳಲ್ಲಿ ಸೋಮವಾರದಿಂದ ಪ್ರಾರಂಭಿಸಲಾವುದು ಎಂದು ತಿಳಿಸಿದರು.

ಸಾರ್ವಜನಿಕರಿಗೆ ಈ ಕಾರ್ಯದಿಂದ ಆಗುವ ಪ್ರಯೋಜನೆಗಳ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು ಭೂದಾಖಲೆಗಳ ಡಿಜಿಟಲೀಕರಣ ತ್ವರಿತ ಸರಳ ಆಡಳಿತ, ಭೂದಾಖಲೆಗಳನ್ನು ತಿದ್ದಲು ಮತ್ತು ಕಳೆಯಲು ಅಸಾಧ್ಯ, ಸುಲಭವಾಗಿ ಕಡಿಮೆ ಸಮಯದಲ್ಲಿ ದಾಖಲೆಗಳ ಲಭ್ಯತೆ, ದಾಖಲೆಗಳು ಸುಭದ್ರ ಮತ್ತು ಶಾಶ್ವತವಾಗಿ ಸಂರಕ್ಷಣೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಭೂಸುರಕ್ಷಾ ಯೋಜನೆಯಡಿಯಲ್ಲಿ ಭೂದಾಖಲೆಗಳ ಡಿಜಿಟಲೀಕರಣ ಕಾರ್ಯಕ್ಕೆ ತಾಲೂಕಿನಲ್ಲಿ ಒಟ್ಟು ಆರು ಜನ ನುರಿತ ಕಂಪ್ಯೂಟರ್​ ಅಪರೇಟರಗಳನ್ನು ತರಬೇತಿ ನೀಡಿ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ. ತಾಲೂಕಿನ ಕಚೇರಿಯಲ್ಲಿ ಒಟ್ಟು 27ಸಾವಿರ ಕಡತಗಳು ಮತ್ತು ರಜಿಸ್ಟರ್​ಗಳು ಭೂಸುರಕ್ಷಾ ಯೋಜನೆಯಡಿಯಲ್ಲಿ ಡಿಜಿಟಲೀಕರಣಕ್ಕೆ ಒಳಪಡುತ್ತವೆ ಎಂಬ ಮಾಹಿತಿಯನ್ನು ಸಚಿವರಿಗೆ ತಿಳಿಸಿದರು.

ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್ಪಿ ಅಂಶುಕುಮಾರ, ಅಪರ ಜಿಲ್ಲಾಧಿಕಾರಿ ಡಾ. ಎಲ್​. ನಾಗರಾಜ, ಉಪ ವಿಭಾಗಾಧಿಕಾರಿ ಚನ್ನಪ್ಪ, ತಹಸೀಲ್ದಾರ್​ ಶರಣಮ್ಮ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net