ಒಳ ಉಡುಪು ಉದ್ಯಮಕ್ಕೆ ಜಮೀನು: ಸಚಿವ ಶಿವಾನಂದ ಪಾಟೀಲ | Boost to Industry

Textile minister
Published on

ಬೆಂಗಳೂರು: ರಾಜ್ಯದ ಯಾವುದೇ ಭಾಗದಲ್ಲಿ ಒಳ ಉಡುಪು ಉದ್ಯಮ ಸ್ಥಾಪನೆಗೆ ಅಗತ್ಯ ಸವಲತ್ತುಗಳೊಂದಿಗೆ 15ರಿಂದ 20 ಎಕರೆ ಭೂಮಿ ಒದಗಿಸಲಾಗುವುದು ಎಂದು ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.

ಅರಮನೆ ಮೈದಾನದಲ್ಲಿ ಕರ್ನಾಟಕ ಇನ್ನರ್‌ವೇರ್ ಅಸೋಸಿಯೇಷನ್ (ಕೆಇಎ) ಏರ್ಪಡಿಸಿರುವ ಮೂರು ದಿನಗಳ ಒಳ ಉಡುಪು ವ್ಯಾಪಾರ ಪ್ರದರ್ಶನದ ನಾಲ್ಕನೇ ಆವೃತ್ತಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಅಸೋಸಿಯೇಷನ್ ಬಯಸಿದ ಪ್ರದೇಶದಲ್ಲಿ ಭೂಮಿ ಮಂಜೂರು ಮಾಡಲಾಗುವುದು ಎಂದರು.

ಸಿದ್ಧ ಉಡುಪು ಉದ್ಯಮಕ್ಕೆ ರಾಜ್ಯ ಸರ್ಕಾರ 3500 ಕೋಟಿ ರೂ. ಸಬ್ಸಿಡಿ ನೀಡಿದೆ. ಸಿದ್ದ ಉಡುಪು ಕ್ಷೇತ್ರದಲ್ಲಿ ಕರ್ನಾಟಕ ಮಂಚೂಣಿಯಲ್ಲಿದ್ದು, ದೇಶದ ಒಟ್ಟು ಉತ್ಪಾದನೆಯಲ್ಲಿ ರಾಜ್ಯದ ಕೊಡುಗೆ ಪ್ರತಿಶತ 20ರಷ್ಟಿದೆ ಎಂದು ಶಿವಾನಂದ ಪಾಟೀಲ ಹೇಳಿದರು.

ಬಾಂಗ್ಲಾದ ಜವಳಿ ಉದ್ಯಮ ಸ್ಥಳಾಂತರ

ಬಾಂಗ್ಲಾದೇಶದ ಪ್ರತಿಕೂಲ ಪರಿಸ್ಥಿತಿ ಪರಿಣಾಮ ಅಲ್ಲಿನ ಜವಳಿ ಉದ್ಯಮ ಕರ್ನಾಟಕ, ಮಹಾರಾಷ್ಟ್ರ ಕಡೆ ಸ್ಥಳಾಂತರವಾಗುತ್ತಿವೆ. ಈ ಪರಿಸ್ಥಿತಿ ಬಳಸಿಕೊಂಡು ಜವಳಿ ಉದ್ಯಮಿಗಳಿಗೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದರು.

ಜವಳಿ ಕ್ಷೇತ್ರ, ನೇಕಾರಿಕೆ ಅಭಿವೃದ್ಧಿ, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಜನೆಗೆ ಉದ್ಯಮಸ್ನೇಹಿ ನೂತನ ಜವಳಿ ನೀತಿ 2025-30 ರೂಪಿಸುವ ಸಿದ್ದತೆ ನಡೆದಿದೆ. ಈ ಸಮಿತಿಯಲ್ಲಿ ಕರ್ನಾಟಕ ಇನ್ನರ್‌ವೇರ್ ಅಸೋಸಿಯೇಷನ್‌ನ ಪ್ರತಿನಿಧಿಯೊಬ್ಬರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ನೈಋತ್ಯ ರೈಲ್ವೆ ವಲಯದ ರೈಲ್ವೆ ಬಳಕೆದಾರರ ಸಮಿತಿ ಸದಸ್ಯ ಮಹೇಂದ್ರ ಸಿಂ್ವ ಮಾತನಾಡಿ ನಾಲ್ಕನೇ ಬಾರಿ ಇನ್ನರ್‌ವೇರ್ ಟ್ರೇಡ್ ಶೋ ನಡೆಯುತ್ತಿದೆ. ಇದೊಂದು ರೀತಿ ಬಂಡವಾಳ ಹೂಡಿಕೆದಾರರ ಸಮಾವೇಶವಾಗಿದೆ ಎಂದು ವಿಶ್ಲೇಷಿಸಿದರು.

ಇದೇ ಸಂದರ್ಭದಲ್ಲಿ ಸಚಿವರಿಗೆ ಅಸೋಸಿಯೇಷನ್ ಅಧ್ಯಕ್ಷ ದಿಲೀಪ್‌ಕುಮಾರ್ ಜೈನ್ ಮನವಿ ಸಲ್ಲಿಸಿ, ಸಂಘದ ಕಚೇರಿಗೆ ಬೆಂಗಳೂರಿನಲ್ಲಿ ಸ್ಥಳಾವಕಾಶ ಜವಳಿ ನೀತಿ ಕರಡು ರಚನಾ ಸಮಿತಿಗೆ ಸಂಘದ ಪ್ರತಿನಿಧಿ ಸೇರ್ಪಡೆಗೆ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net