

ಬೆಂಗಳೂರು: ಹೊಸ ಖಾಸಗಿ ಶಾಲೆ, ಕಾಲೇಜು ಆರಂಭಿಸಲು ಮತ್ತು ಪರವಾನಗಿ ನವೀಕರಣಕ್ಕೆ ಭೂ ಪರಿವರ್ತನೆ ಸಮಸ್ಯೆ ಎದುರಾಗಿದೆ. ಸರ್ಕಾರಿ ಶಾಲೆಗೆ ಇಲ್ಲದ ಷರತ್ತುಗಳು ಖಾಸಗಿ ಶಾಲಾ, ಕಾಲೇಜಿಗೆ ಯಾಕೆಂಬ ಆಕ್ರೋಶ ವ್ಯಕ್ತವಾಗಿದೆ. ಇಲಾಖೆ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲೆಂದೇ ಹತ್ತಾರು ಷರತ್ತುಗಳನ್ನು ವಿಧಿಸುತ್ತಿರುವ ಆರೋಪ ಕೇಳಿಬಂದಿದೆ.
ಸರ್ವರಿಗೂ ಗುಣಮಟ್ಟ ಶಿಕ್ಷಣ ಸಿಗಬೇಕೆಂದು ಹೆಚ್ಚು ಹೆಚ್ಚು ಖಾಸಗಿ ಶಾಲಾ, ಕಾಲೇಜು ಸ್ಥಾಪನೆ ಆಗಬೇಕೆಂದು ಸರ್ಕಾರ ಹೇಳುತ್ತದೆ. ಆದರೆ, 28 ಷರತ್ತುಗಳನ್ನು ವಿಧಿಸಿ ಎಲ್ಲವನ್ನೂ ಪೂರ್ಣಗೊಳಿಸುವಂತೆ ಪಟ್ಟು ಹಿಡಿದಿರುವ ಪರಿಣಾಮ ಖಾಸಗಿ ಶಾಲೆಗಳಿಗೆ ಮಾನ್ಯತೆ ಸಿಗದೆ ಮಾಲೀಕರು ತೊಂದರೆಗೆ ಸಿಲುಕಿದ್ದಾರೆ. ಮಕ್ಕಳ ಶಿಕ್ಷಣಕ್ಕೂ ಸಮಸ್ಯೆಯಾಗಿದೆ.
ರಾಜ್ಯದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಶಾಲೆಗಳ ಮಾಹಿತಿ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್.ವಿಶಾಲ್ ಬುಧವಾರ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ನಾನಾ ಷರತ್ತುಗಳನ್ನು ವಿಧಿಸಿದ್ದಾರೆ. ಈಗಾಗಲೇ ಸಾಕಷ್ಟು ನಿಯಮಗಳನ್ನು ಪಾಲಿಸಿಯೇ ಶಾಲೆ ತೆರೆಯಲಾಗಿದೆ. ಇದೀಗ ನಗರ ಮತ್ತು ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ಶಾಲಾ ಕಟ್ಟಡ ಮತ್ತು ಜಮೀನು ಭೂ ಪರಿವರ್ತನೆ ಆಗುತ್ತಿಲ್ಲವೆಂದು ಅನುಮತಿ ನೀಡಲು ಮತ್ತು ನವೀಕರಣ ಮಾಡಲು ಶಿಕ್ಷಣ ಇಲಾಖೆ ಆಯುಕ್ತರು ನಿರಾಕರಿಸುತ್ತಿದ್ದಾರೆ.
ನಗರ ಪ್ರದೇಶ ಮತ್ತು ಗ್ರಾಮಠಾಣಾ ವ್ಯಾಪ್ತಿಯಲ್ಲಿರುವ ಶಾಲೆಗಳು ಆಯಾ ಸ್ಥಳೀಯ ಸಂಸ್ಥೆಗಳಲ್ಲಿ ಖಾತಾ ದಾಖಲಾಗಿರಬೇಕು. ಪ್ರಾಧಿಕಾರದಿಂದ ಶಾಲಾ/ಕಾಲೇಜು ಕಟ್ಟಡ ನಕ್ಷೆ ಮತ್ತು ಇತರ ಸಂಬಂಧಿಸಿದ ದಾಖಲೆಗಳು ಸಮರ್ಪಕವಿದ್ದಲ್ಲಿ ನಗರ ಸ್ಥಳೀಯ ಸಂಸ್ಥೆಯ ಮಾಸ್ಟರ್ ಪ್ಲಾನ್ ಅಂಶಗಳನ್ನು ಹೊಂದಿರಬೇಕು. ಅದರ ಆಧಾರದ ಮೇಲೆ ಶಾಲಾ/ಕಾಲೇಜು ಪ್ರಥಮ ಮಾನ್ಯತೆ, ನವೀಕರಣ ಮಾಡುವುದನ್ನು ಪರಿಗಣಿಸಲು ಕ್ರಮ ಕೈಗೊಳ್ಳಬೇಕೆಂದು ಸಚಿವ ಬಿ.ಸಿ. ನಾಗೇಶ್ ಸೂಚಿಸಿದ್ದಾರೆ. ಹೀಗಿದ್ದರೂ ನಗರ ಪ್ರದೇಶ ಮತ್ತು ಗ್ರಾಮಠಾಣಾ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಅನುಮತಿ ನೀಡುತ್ತಿಲ್ಲ ಎಂದು ದೂರಲಾಗಿದೆ.
ಸರ್ಕಾರಿ ಶಾಲೆಗಳಿಗೆ ಇಲ್ಲದ ನಿಯಮ ನಮಗ್ಯಾಕೆ ಎಂಬುದು ಖಾಸಗಿ ಶಾಲೆಗಳ ಮಾಲೀಕರ ಪ್ರಶ್ನೆಯಾಗಿದೆ. ಖಾಸಗಿ ಶಾಲಾ ಕಟ್ಟಡದಲ್ಲಿ ಅಗ್ನಿಶಮನ ಉಪಕರಣ, ಕಟ್ಟಡ ಗುಣಮಟ್ಟ ಪರೀಕ್ಷೆಯನ್ನು ಪಿಡಬ್ಲ್ಯೂಡಿ ಅಧಿಕಾರಿಗಳು ಮಾಡುತ್ತಾರೆ. ಪ್ರಾಂಶುಪಾಲರು, ಶಿಕ್ಷಕರ ಪಟ್ಟಿ, ಮಕ್ಕಳ ಇಂತಿಷ್ಟೇ ದಾಖಲಾಗಬೇಕೆಂದು ನಿಯಮವಿದೆ. ನೌಕರರಿಗೆ ವೇತನ ಎಷ್ಟು, ಯಾವ ಬ್ಯಾಂಕಿಗೆ ಜಮೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆಯೂ ವರದಿ ನೀಡಬೇಕು.
ಇದರಲ್ಲಿ ಒಂದೂ ನಿಯಮ ಪಾಲನೆ ಮಾಡದೆ ಸರ್ಕಾರಿ ಶಾಲೆಗಳು ನಡೆಯುತ್ತಿಲ್ಲವೇ? ಮುಖ್ಯವಾಗಿ ಕಟ್ಟಡಗಳು ಶಿಥಿಲಗೊಂಡಿವೆ, ಯಾವುದೇ ಶಾಲೆಯಲ್ಲಿ ಅಗ್ನಿಶಮನ ಉಪಕರಣ ಇಲ್ಲ. ಅದರಲ್ಲೂ ನೂರಾರು ವರ್ಷಗಳಿಂದ ಸರ್ಕಾರಿ ಶಾಲೆಗಳು ದಾನ ನೀಡಿದ ಮತ್ತು ಖಾಸಗಿ ಜಾಗದಲ್ಲಿ ನಡೆಯುತ್ತಿವೆ. ಶಿಕ್ಷಣ ಇಲಾಖೆ ಯಾಕೆ ಇಷ್ಟು ವರ್ಷ ಆದರೂ ತನ್ನ ಹೆಸರಿಗೆ ಖಾತಾ, ಭೂ ಪರಿವರ್ತನೆ ಮಾಡಿಕೊಂಡಿಲ್ಲ? ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್. ವಿಶಾಲ್, ಖಾಸಗಿ ಶಾಲೆಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಖಾಸಗಿ ಶಾಲೆಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೂ ಪರಿವರ್ತನೆ ಯಾಕೆ ಬೇಕು?: ಬಿಬಿಎಂಪಿ, ನಗರ, ಪಟ್ಟಣ ಮತ್ತು ಗ್ರಾಮಠಾಣಾ ವ್ಯಾಪ್ತಿಯ ಶಾಲೆಗಳಿಗೆ ಭೂ ಪರಿವರ್ತನೆ ಯಾಕೆ ಬೇಕು? ಕಟ್ಟಡ ನಿರ್ಮಾಣ ವೇಳೆ ಸ್ಥಳೀಯ ಸಂಸ್ಥೆಗೆ ತೆರಿಗೆ ಪಾವತಿಸಿ ಭೂ ಪರಿವರ್ತನೆ ಪಡೆಯಲಾಗಿದೆ. ಸರ್ಕಾರ ಅಕ್ರಮ ಸಕ್ರಮ ಮಾಡದ ಪರಿಣಾಮ ಶಾಲೆಗಳಿಗೆ ತೊಂದರೆ ಎದುರಾಗಿದೆ. ವಾಣಿಜ್ಯ ಕಟ್ಟಡ ಎಂದು ತೆರಿಗೆ ಪಾವತಿಸಿದ ಮೇಲೆ ಶಾಲಾ ಉದ್ದೇಶಕ್ಕೆ ಎಂದು ಪರಿವರ್ತಿಸಿಕೊಳ್ಳಲು ಸಮಯ ನೀಡುವಂತೆ ಖಾಸಗಿ ಶಾಲಾ ಮಾಲೀಕರು ಮನವಿ ಮಾಡಿದ್ದಾರೆ.
380 ಶಾಲೆಗಳಿಗೆ ಸಂಕಷ್ಟ: ಬೆಂಗಳೂರು ನಗರದಲ್ಲಿ ಅಂದಾಜು 140 ಶಾಲೆಗಳು ಸೇರಿದಂತೆ ರಾಜ್ಯದಲ್ಲಿ 380 ಶಾಲೆಗಳಿಗೆ ಭೂ ಪರಿವರ್ತನೆ ಆಗಿಲ್ಲ ಎಂಬ ಕಾರಣಕ್ಕೆ ಅನುಮತಿ ನಿರಾಕರಿಸಲಾಗಿದೆ. 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅರ್ಧ ತಲುಪಿದ್ದೇವೆ. ಈಗ ಅನಧಿಕೃತ ಶಾಲೆಗಳನ್ನು ಪಟ್ಟಿ ಮಾಡಿ ಅನುಮತಿ ರದ್ದು ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಾಲೆ ಕಟ್ಟಡ ಅಥವಾ ಬಾಡಿಗೆ ಮೂಲಸೌಕರ್ಯಕ್ಕೆ ಬಂಡವಾಳ ಹೂಡಿದವರ ಪರಿಸ್ಥಿತಿ ಏನಾಗಬೇಕು ಎಂಬುದು ಶಾಲಾ, ಕಾಲೇಜು ಮಾಲೀಕರ ಪ್ರಶ್ನೆಯಾಗಿದೆ.