

ನವದೆಹಲಿ: ಸಭಾಪತಿ ಜಗದೀಪ ಧನಕರ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಯತ್ನ, ಉದ್ಯಮಿ ಜಾರ್ಜ್ ಸೊರೊಸ್ ಜತೆಗೆ ಕಾಂಗ್ರೆಸ್ ನಾಯಕರು ನಂಟಿನ ವಿಚಾರ ಗುರುವಾರವೂ ಸಂಸತ್ನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ, ಪ್ರತಿಭಟನೆಗೆ ಕಾರಣವಾಯಿತು.
ಅಧಿವೇಶನದಲ್ಲಿ ಪಟ್ಟಿ ಮಾಡಲಾದ ವರದಿಗಳನ್ನು ಮಂಡಿಸಿದ ನಂತರ ದಿನದ ನಿಗದಿತ ವ್ಯವಹಾರವನ್ನು ಮುಂದೂಡಿ, ಪ್ರತಿಪಕ್ಷಗಳು ಪ್ರಸ್ತಾಪಿಸಿ ವಿಚಾರಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕರು ನೀಡಿದ್ದ ಆರು ನೋಟಿಸ್ಗಳನ್ನು ಸಭಾಪತಿ ತಿರಸ್ಕರಿಸಿದರು. ಈ ನಡುವೆ, ಸುದ್ದಿಗೋಷ್ಠಿ ನಡೆಸಿ ಸಭಾಪತಿ ಅವರನ್ನು ಟೀಕಿಸಿದ ಕಾರಣಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿ ನಾಯಕ ಜೆ.ಪಿ ನಡ್ಡಾ ತೀವ್ರವಾಗಿ ಖಂಡಿಸಿದರು. ಸಭಾಪತಿಯ ನಿರ್ಧಾರವನ್ನು ಪ್ರಶ್ನಿಸುವುದು, ಟೀಕಿಸುವುದು ಸದನಕ್ಕೆ ಅವಹೇಳನ ಮಾಡಿದಂತೆ ಎಂದು ತರಾಟೆಗೆ ತೆಗೆದುಕೊಂಡರು.
ದೇವೇಗೌಡ ಬೇಸರ ಪ್ರತಿಪಕ್ಷದ ಸಂಸದರ ಘೊಷಣೆಗಳು ಮೊಳಗುತ್ತಿದ್ದ ವೇಳೆಯೇ ಜೆಡಿಎಸ್ ಸಂಸದ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಮಾತನಾಡಲು ಸಭಾಪತಿ ಧನಕರ್ ಅವಕಾಶ ನೀಡಿದರು. ‘ಸದನದ ಕಲಾಪಕ್ಕೆ ಅವಕಾಶ ಮಾಡಿಕೊಡಿ ಎಂದು ಗಂಭೀರವಾಗಿ ವಿನಂತಿಸುತ್ತೇನೆ. ಎಷ್ಟು ಬಾರಿ ಮನವಿ ಮಾಡಿದರೂ ಪ್ರತಿಪಕ್ಷಗಳು ತಲೆ ಕೆಡಿಸಿಕೊಂಡಿಲ್ಲ. ಈ ರೀತಿಯ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಇವರು ತಂದಿದ್ದಾರೆ. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಸ್ಥಿರಗೊಳಿಸಲಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದಂತೆ ಎಂದು ಬೇಸರ ವ್ಯಕ್ತಪಡಿಸಿದರು.
₹44,143 ಕೋಟಿ ಹೆಚ್ಚುವರಿ ವೆಚ್ಚ: ಪ್ರಸಕ್ತ ಹಣಕಾಸು ವರ್ಷದಲ್ಲಿ 44,143 ಕೋಟಿ ರೂ.ಗಳ ಹೆಚ್ಚುವರಿ ನಿವ್ವಳ ನಗದು ವೆಚ್ಚಕ್ಕಾಗಿ ಸರ್ಕಾರ ಗುರುವಾರ ಸಂಸತ್ತಿನ ಅನುಮೋದನೆ ಕೋರಿದೆ. 2024-25ರ ಅನುದಾನಕ್ಕಾಗಿ ಪೂರಕ ಬೇಡಿಕೆಗಳನ್ನು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ಮಂಡಿಸಿದರು. ವಿವಿಧ ಸಚಿವಾಲಯಗಳು, ಇಲಾಖೆಗಳ ವೆಚ್ಚಗಳು, ರಸಗೊಬ್ಬರ ಸಬ್ಸಿಡಿ ಯೋಜನೆಗೆ 6,593.73 ಕೋಟಿ ರೂ.ಗಳನ್ನು ಇದು ಒಳಗೊಂಡಿದೆ.
ಆಡಳಿತಾತ್ಮಕ ಹುದ್ದೆಗಳು ಖಾಲಿ: ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್)ಯಲ್ಲಿ 1,316, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಯಲ್ಲಿ 586 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಒಟ್ಟು ಮಂಜೂರಾದ 6,858 ಐಎಎಸ್ ಹುದ್ದೆ ಇದ್ದು, ಪ್ರಸ್ತುತ 5,542 ಅಧಿಕಾರಿಗಳು ಕರ್ತವ್ಯದಲ್ಲಿದ್ದಾರೆ. 1,042 ಐಎಫ್ಎಸ್ ಹುದ್ದೆಗಳು ಖಾಲಿ ಇವೆ.