

ಪಾಟ್ನಾ: ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ದುರಂತ ಕಾಲ್ತುಳಿತಕ್ಕೆ ರೈಲ್ವೆ ಇಲಾಖೆಯನ್ನು ದೂಷಿಸುತ್ತಾ ಮಹಾಕುಂಭಮೇಳವನ್ನು ಅರ್ಥಹಿನಾ ಎಂದು ಹೇಳುವ ಮೂಲಕ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್(Lalu Prasad Yadav) ಭಾನುವಾರ(ಫೆಬ್ರವರಿ 16) ವಿವಾದವನ್ನು ಸೃಷ್ಟಿಸಿದ್ದಾರೆ.
ಕಾಲ್ತುಳಿತದ ಘಟನೆ ತುಂಬಾ ದುಃಖಕರವಾಗಿದೆ. ಇದು ಕೇಂದ್ರ ಸರ್ಕಾರವು ಮಾಡಿದ ಅಸಮರ್ಪಕ ವ್ಯವಸ್ಥೆಗಳನ್ನು ಬಹಿರಂಗಪಡಿಸಿದೆ. ಇದು ರೈಲ್ವೆಯ ಸಂಪೂರ್ಣ ವೈಫಲ್ಯ, ಈ ವೈಫಲ್ಯಕ್ಕೆ ರೈಲ್ವೆ ಸಚಿವರೇ ಹೊಣೆಗಾರರಾಗಬೇಕು. ಆದ್ದರಿಂದ ರೈಲ್ವೆ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಅದೇ ಸಮಯದಲ್ಲಿ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಜನಸಂದಣಿಯ ಬಗ್ಗೆ ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಅವರು, ಕುಂಭದ ಅರ್ಥವೇನೆಂದರೆ.. ಕುಂಭಕ್ಕೆ ಯಾವುದೇ ಅರ್ಥವಿಲ್ಲ ಅದು ಅರ್ಥಹೀನ ಎಂದು ಹೇಳಿದರು. ಈ ಹೇಳಿಕೆ ಬಂದ ಕೂಡಲೇ ರಾಜಕೀಯ ವಲಯದಲ್ಲಿ ಕೋಲಾಹಲ ಉಂಟಾಯಿತು. ಆರ್ಜೆಡಿ ಮುಖ್ಯಸ್ಥರ ಹೇಳಿಕೆಯ ಕುರಿತು ಜೆಡಿಯು ವಕ್ತಾರ ರಾಜೀವ್ ರಂಜನ್, ಲಾಲು ಯಾದವ್ ಅಪಘಾತದ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದರೆ, ಬಿಹಾರ ಬಿಜೆಪಿ ವಕ್ತಾರ ಮನೋಜ್ ಶರ್ಮಾ, ಹಿಂದೂ ಧರ್ಮದ ಬಗ್ಗೆ ಆರ್ಜೆಡಿಯ ಮನಸ್ಥಿತಿಯನ್ನು ಅವರು ಬಹಿರಂಗಪಡಿಸಿದ್ದಾರೆ ಎಂದು ಹೇಳಿದರು.
ಈ ವರ್ಷ ಮಹಾ ಕುಂಭಮೇಳದಲ್ಲಿ 144 ವರ್ಷಗಳ ನಂತರ ಅಪರೂಪದ ಕಾಕತಾಳೀಯ ಸಂಭವಿಸಿದೆ. ಇದರಿಂದಾಗಿ ದೇಶಾದ್ಯಂತದ ಭಕ್ತರು ಕುಂಭಮೇಳದಲ್ಲಿ ಸ್ನಾನ ಮಾಡಲು ಬರುತ್ತಿದ್ದಾರೆ. ಇದರಿಂದಾಗಿ ಆ ಪ್ರದೇಶ ಹಾಗೂ ರೈಲು ನಿಲ್ದಾಣಗಳಲ್ಲಿ ಭಾರೀ ಜನಸಂದಣಿ ಕಂಡುಬರುತ್ತಿದೆ. ಶನಿವಾರ ರಾತ್ರಿ ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇದಕ್ಕೂ ಮೊದಲು ಜನವರಿ 29ರಂದು ಪ್ರಯಾಗ್ರಾಜ್ನಲ್ಲಿ ನಡೆದ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ 30 ಜನರು ಪ್ರಾಣ ಕಳೆದುಕೊಂಡಿದ್ದರು.(ಏಜೆನ್ಸೀಸ್)