ಸರ್ವರ ಸಹಬಾಳ್ವೆಗೆ ಸಾಕ್ಷಿಯಾದ ಲಕ್ಷ್ಮೀಪುರ

Lakshmipura2
Published on

*ನೀರಿನ ಬರ ನೀಗಿಸಿದ ಕಣ್ವನದಿ

* ಬೇಸಿಗೆಯಲ್ಲೂ ಲಿಂಗು ಸುತ್ತಲೂ ಜಲರಾಶಿ

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಸುತ್ತಲೂ ಬೆಟ್ಟ&ಗುಡ್ಡದ ಪ್ರಕೃತಿ, ಹಸಿರ ವನಸಿರಿ ಮಧ್ಯೆ ಮಾವು-ತೆಂಗು ಮರಗಳ ಸಾಲಿನಲ್ಲಿ ಕಣ್ವ ನದಿ ದಂಡೆಯಲ್ಲಿರುವ ಲಕ್ಷ್ಮೀಪುರ ಹಲವು ವೈಶಿಷ್ಟ್ಯಯಕ್ಕೆ ಸಾಕ್ಷಿಯಾಗಿದೆ.

ರಾಮನಗರ ತಾಲೂಕಿನ ಕೂಟಗಲ್​ ಹೋಬಳಿಯ ಲಕ್ಷ್ಮೀಪುರ ಗ್ರಾಮ ಕೃಷಿ ಪ್ರಧಾನವಾಗಿ ಹಾಗೂ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯಲ್ಲಿ ಗುರುತಿಸಿಕೊಂಡಿದೆ. ಗ್ರಾಮ ಸ್ವಾತಂತ್ರ್ಯ ಪೂರ್ವದಲ್ಲಿ ವಡವಟ್ಟ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿತ್ತು. ಸ್ವಾತಂತ್ರ್ಯ ನಂತರ ಲಕ್ಷ್ಮೀಪುರ ಹೆಸರಿನಿಂದ ಜನ ಮಾನಸದಲ್ಲಿ ಬೇರೂರಿದೆ. ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನದೆ ಆದ ಛಾಪು ಮೂಡಿಸಿ ಜಿಲ್ಲೆಯಲ್ಲಿ ಪ್ರಮುಖ ಗ್ರಾಮವಾಗಿ ಗುರುತಿಸಿಕೊಂಡು ಸರ್ವರ ಸಹಬಾಳ್ವೆಗೆ ಸಾಕ್ಷಿಯಾಗಿದೆ.

ಜಿಲ್ಲಾ ಕೇಂದ್ರ ರಾಮನಗರದಿಂದ 15 ಕಿಮೀ ಅಂತರದಲ್ಲಿದ್ದು, ತಾಲೂಕು ಕೇಂದ್ರ ಮಾಗಡಿ ರಸ್ತೆಯಲ್ಲಿನ ಪ್ರಮುಖ ಗ್ರಾಮ ಇದಾಗಿದೆ. ಸುಮಾರು 3 ಸಾವಿರ ಜನಸಂಖ್ಯೆ ಹೊಂದಿದೆ.

ಮಿನಿ ವಾಣಿಜ್ಯ ನಗರ

ಬಹುತೇಕ ಮಣ್ಣಿನ ಗೋಡೆ, ನಾಡಹೆಂಚು, ನಂತರ ದಿನಗಳಲ್ಲಿ ಮಂಗಳೂರು ಹೆಂಚು ಹೊಂದಿದ ಗ್ರಾಮ ಈಗ ವಾಣಿಜ್ಯ ಕೇಂದ್ರವಾಗಿದೆ. ಗ್ರಾಮದ ಮಧ್ಯೆ ರಾಮನಗರ - ಮಾಗಡಿ ರಸ್ತೆ ಹಾದು ಹೋಗಿರುವ ಕಾರಣ ಅಕ್ಕಪಕ್ಕದ ಹಳ್ಳಿಗಳಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ.

ಕಣ್ವನದಿ ವರದಾನ

ಕಣ್ವ ನದಿ ಗ್ರಾಮದ ಪಕ್ಕವೇ ಹಾದು ಹೋಗಿದ್ದು, ಗ್ರಾಮದ ಸಮೀಪ ಚೆಕ್​ ಡ್ಯಾಂ ನಿರ್ಮಾಣ ಮಾಡಿರುವ ಕಾರಣ ಬೇಸಿಗೆಯಲ್ಲೂ ನೀರಿಗೆ ಸಮಸ್ಯೆ ಇಲ್ಲ. ಬೇಸಿಗೆಯಲ್ಲೂ ರೈತರ ಬೋರ್​ವೆಲ್​ ಸಮರ್ಪಕವಾಗಿ ನೀರು ಪೂರೈಸುತ್ತಿದ್ದು, ಒಟ್ಟಾರೆ ಗ್ರಾಮದ ಕುಡಿಯುವ ನೀರಿಗೆ ಕಣ್ವನದಿ ಮತ್ತು ಗ್ರಾಮದ ಕರ್ಲಕಟ್ಟೆ, ಹೊಸಕೆರೆಗಳು ಪೂಕರವಾಗಿವೆ.

ಗ್ರಾಮದಲ್ಲಿರುವ ಸೌಲಭ್ಯಗಳು

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಅಂಗನವಾಡಿ, ಅಂಚೆ ಕಚೇರಿ, ಬ್ಯಾಂಕು, ಗ್ರಾಮ ಪಂಚಾಯಿತಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ರೇಷ್ಮೆ ವಿಸ್ತರಣಾಧಿಕಾರಿ ಕಚೇರಿ ಇದೆ. ಗ್ರಾಮದಲ್ಲಿ ಹಾಲಿನ ಡೇರಿ ಹಾಲು ಶೀತಲೀಕರಣ ಕೇಂದ್ರವಿದೆ.

ನೀರಿನ ಮಧ್ಯೆ ಸಿದ್ದಲಿಂಗೇಶ್ವರ

ಗ್ರಾಮದ ಸಮೀಪ ಸುಮಾರು 150 ಅಡಿ ಎತ್ತರದ ಕಲ್ಲು ಬೆಟ್ಟದಲ್ಲಿ ಸಿದ್ದಲಿಂಗೇಶ್ವರ ದೇವರು ಬೆಟ್ಟದ ಮಧ್ಯಭಾಗದ ಸೊಣೆಯ ಮಧ್ಯೆ ಲಿಂಗು ರೂಪದಲ್ಲಿದೆ. ಮೇಲ್ಭಾಗವೂ ಕಲ್ಲಿದೆ. ಬೇಸಿಗೆ ಕಾಲದಲ್ಲೂ ಲಿಂಗು ಸುತ್ತಲೂ ನೀರು ಇರುತ್ತದೆ. ಎಂತಹ ಬರಗಾಲದಲ್ಲೂ ಇಲ್ಲಿ ನೀರು ಇಂಗಿರುವುದನ್ನು ನಾವು ಕಂಡಿಲ್ಲ ಎನ್ನುತ್ತಾರೆ ಸ್ಥಳಿಯರು. ಗ್ರಾಮದಲ್ಲಿ ಹಬ್ಬ ಮಾಡಬೇಕಾದರೆ ಇಲ್ಲಿಂದಲೇ ಮೊದಲ ಆರತಿ ಪೂಜೆ ಮಾಡಿಕೊಂಡು ಬರುವುದು ಇಂದಿಗೂ ಮುಂದುವರಿದಿದೆ.

ವೀರ ಮಾಸ್ತಮ್ಮ

ಗ್ರಾಮದಲ್ಲಿ ಶಾಲೆಯ ಪಕ್ಕದಲ್ಲಿ ಮಹಾಸತಿ ವೀರ ಮಾಸ್ತಮ್ಮ ದೇವಾಲಯವಿದ್ದು, ಬಯಲೇ ದೇವಾಲಯ. ಗುಡಿ ಕಟ್ಟಿದರೂ ಉರುಳುತ್ತಿತ್ತು ಎನ್ನುತ್ತಾರೆ ಹಿರಿಯರು. ವೀರಮಾಸ್ತಮ್ಮ ಕೆಂಪೇಗೌಡರ ತಂಗಿ ಎಂದು ಜನರು ಹೇಳುತ್ತಾರೆ. ಕೆಂಪೇಗೌಡರನ್ನು ಸೆರೆ ಹಿಡಿದರು ಎಂಬ ವಿಷಯವನ್ನು ಜನರಿಂದ ತಿಳಿದ ವೀರಮಾಸ್ತಮ್ಮ "ನನ್ನ ಅಣ್ಣ ಸೆರೆ ಸಿಕ್ಕಿದ್ದರಿಂದ ಅವರಿಂದ ಕಿರುಕುಳ ಅನುಭವಿಸುತ್ತಾನೆ. ನಾನು ಬದುಕಿದ್ದು, ವ್ಯರ್ಥ ನನಗಿನ್ಯಾರು ದಿಕ್ಕು, ನಾನು ಇದೇ ಜಾಗದಲ್ಲಿ ಅಗ್ನಿಗಾಹುತಿಯಾಗುತ್ತೇನೆ. ಮುಂದೆ ಇಲ್ಲಿ ನಾನು ಊರು ಕಾಯುತ್ತೇನೆ, ನನಗೆ ಗುಡಿ ಗೋಪುರ ಬೇಡ ಬಿಸಿಲು ಮಳೆಯಲ್ಲಿ ನೆನೆಯುತ್ತೇನೆ' ಎಂದು ಅಗ್ನಿಗಾಹುತಿಯಾಗಿ ಮಹಾಸತಿಯಾದಳು ಎಂದು ಗ್ರಾಮದ ಜನರು ಹೇಳುವ ಮಾತು.

ಕುಲದೇವತೆ

ಮಾಗಡಿ ತಾಲೂಕಿನ ಹುಲಿಕಲ್​ ಗ್ರಾಮದ ಹಲವು ಕುಟುಂಬಗಳಿಗೆ ಮಹಾಸತಿ ವೀರಮಾಸ್ತಮ್ಮ ದೇವಿ ಮನೆ ದೇವರಾಗಿದ್ದು, ವರ್ಷಕ್ಕೊಮ್ಮೆ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುವ ವಾಡಿಕೆ ಇಂದಿಗೂ ಮುಂದುವರಿದಿದೆ.

ಗ್ರಾಮ ಇತಿಹಾಸ

ಲಕ್ಷ್ಮೀಪುರ ಗ್ರಾಮ ಈ ಮೊದಲು ವಡವಟ್ಟ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತಂತೆ. ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಕರಾಗಿ ಬಂದ ಚನ್ನಪಟ್ಟಣ ತಾಲೂಕಿನ ಹೊಂಗನೂರು ಮೂಲದ ಬ್ರಾಹ್ಮಣ ಶಿಕ್ಷಕರೊಬ್ಬರು ಗ್ರಾಮದಲ್ಲಿ ಅಚ್ಚುಮೆಚ್ಚಿನವರಾಗಿದ್ದರು. ಅವರಿಗೆ ಒಬ್ಬ ಮಗಳು ಜನಿಸಿ ಲಕ್ಷ್ಮೀ ಎಂದು ನಾಮಕರಣ ಮಾಡುತ್ತಾರೆ. ನಂತರ ಅವರು ಸೇವೆಯಿಂದ ನಿವೃತ್ತಿ ಹೊಂದಿದ ಸಮಯದಲ್ಲಿ ಗ್ರಾಮದಿಂದ ಹೊರಡುತ್ತಾರೆ. ಆಗ ಗ್ರಾಮದ ಜನರು ಹೆಚ್ಚಿನ ಪ್ರೀತಿ ತೋರಿದ ಕಾರಣ ಶಿಕ್ಷಕರು, ಇನ್ನು ಮುಂದೆ ಗ್ರಾಮವನ್ನು ಲಕ್ಷ್ಮೀಪುರ ಎಂದು ಕರೆಯಿರಿ ಎಂದು ಹೇಳಿ ಆ ಹೊರಡುತ್ತಾರೆ. ನಂತರ 1935 ರಿಂದ 1940ರಲ್ಲಿ ಸಂಪೂರ್ಣ ವಡವಟ್ಟ ಗ್ರಾಮ ಲಕ್ಷ್ಮೀಪುರ ಗ್ರಾಮವಾಯಿತು ಎನ್ನುತ್ತಾರೆ ಗ್ರಾಮದ ಹಿರಿಯರು.

ಗ್ರಾಮದೇವತೆಗಳ ಹಬ್ಬ ವಿಜೃಂಭಣೆ

ಗ್ರಾಮದಲ್ಲಿ ಮಹದೇಶ್ವರ, ಮಾರಮ್ಮ, ಆಂಜನೇಯ, ವೀರಮಾಸ್ತಮ್ಮ, ಗಣೇಶ, ಬೆಟ್ಟದಲ್ಲಿ ಸಿದ್ದಲಿಂಗೇಶ್ವರ ದೇವಾಲಯಗಳಿದ್ದು, ಪ್ರತಿ ನಾಲ್ಕೈದು ವರ್ಷಗಳಿಗೊಮ್ಮೆ ಗ್ರಾಮದಲ್ಲಿ ಗ್ರಾಮ ದೇವತೆಗಳ ಹಬ್ಬ ವಿಜೃಂಭಣೆಯಿಂದ ಮಾಡಲಾಗುತ್ತದೆ. ಪ್ರತಿದಿನ ಹಬ್ಬ ಹರಿದಿನಗಳಲ್ಲಿ ಗ್ರಾಮ ದೇವತೆಗಳ ಪೂಜೆ ನಡೆಯುತ್ತಿವೆ.

ಗ್ರಾಮಕ್ಕೆ ನಮ್ಮ ಪೂರ್ವಿಕರ ಕಾಲದಿಂದಲೂ ಉತ್ತಮ ಹೆಸರಿದೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಗ್ರಾಮ ಬೆಳೆದು ಬಂದಿದೆ. ಸಿದ್ದಲಿಂಗೇಶ್ವರನ ಅಡಿಯಲ್ಲಿ ಗ್ರಾಮದ ಸರ್ವರೂ ದ್ವೇಷ ಅಸೂಹೆ ಇಲ್ಲದೆ ಜೀವನ ನಡೆಸುತ್ತಾ ಬಂದಿದ್ದೇವೆ. ಇಂತಹ ಗ್ರಾಮದಲ್ಲಿ ಜನಿಸಿರುವುದೇ ನಮ್ಮ ಸೌಭಾಗ್ಯ.> ಶಿವರಾಜು, ಲಕ್ಷ್ಮೀಪುರ .

==

ಪದವಿಪೂರ್ವ ಕಾಲೇಜು, ಬ್ಯಾಂಕು, ಅಂಚೆ ಕಚೇರಿ, ಗ್ರಾಪಂ ಮುಂತಾದ ಸೌಲಭ್ಯಗಳು ಗ್ರಾಮದಲ್ಲಿದ್ದು, ಗ್ರಾಮೀಣ ಸೊಗಡು ಬಿಟ್ಟುಕೊಟ್ಟಿಲ್ಲ. ಸರ್ವ ಜನಾಂಗವೂ ಪ್ರೀತಿ ವಿಶ್ವಾಸದಿಂದ ಗ್ರಾಮದಲ್ಲಿ ನೆಮ್ಮದಿಯಲ್ಲಿ ಜೀವನ ಕಟ್ಟಿಕೊಂಡಿದ್ದಾರೆ.> ದೊರೆಸ್ವಾಮಿ, ಲಕ್ಷ್ಮೀಪುರ ಗ್ರಾಮದ ಹಿರಿಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net