

ದೀಪಾವಳಿ ಬೆಳಕಿನ ಹಬ್ಬ ಮಾತ್ರವಲ್ಲ, ವಿಜಯದ ಸಂಕೇತವೂ ಆಗಿದೆ. ವಿಷ್ಣು ತನ್ನ ಪತ್ನಿ ಲಕ್ಷಿ್ಮೕಯನ್ನು ಅಸುರರಿಂದ ರಕ್ಷಿಸಿ ಕರೆತರುವ ದಿನವನ್ನು ದೀಪಾವಳಿ ಹಬ್ಬವಾಗಿ ಆಚರಿಸಲಾಗುತ್ತದೆ ಎಂಬುದು ಐತಿಹ್ಯ. ಸಮುದ್ರ ಮಂಥನ ಸಂದರ್ಭದಲ್ಲಿ ಲಕ್ಷ್ಮೀ ಉದ್ಭವಿಸುತ್ತಾಳೆ. ಆ ಲಕ್ಷ್ಮೀ ದೇವಿಯೇ ವಿಷ್ಣುವಿನ ದೈವಿಕ ಪತ್ನಿ, ಅವಳು ಪಾರ್ವತಿ ದೇವತೆ ಮತ್ತು ಸರಸ್ವತಿ ದೇವಿಯೊಂದಿಗೆ ತ್ರಿಮೂರ್ತಿ ದೇವತೆಗಳ ರೂಪವನ್ನು ನಿರೂಪಿಸುತ್ತಾಳೆ. ದೂರ್ವಾಸಮುನಿಗಳ ಶಾಪದಿಂದಾಗಿ ಸ್ವರ್ಗವನ್ನು ತೊರೆಯುವ ಲಕ್ಷ್ಮೀ, ವಿಷ್ಣುವಿನಿಂದ ದೂರವಾಗುತ್ತಾಳೆ. ನಂತರ ಸಮುದ್ರ ಮಂಥನದಲ್ಲಿ ಜನಿಸುತ್ತಾಳೆ. ಆದರೆ ಆ ಸಂದರ್ಭದಲ್ಲಿ ಲಕ್ಷ್ಮಿಯನ್ನು ಅಸುರರು ಹೊತ್ತೊಯ್ದು ಸೆರೆಯಲ್ಲಿಡುತ್ತಾರೆ. ಆಗ ಲಕ್ಷ್ಮಿಯ ಬಿಡುಗಡೆಗಾಗಿ ಜನಿಸಿರುವ ಷಣ್ಮುಖ ದೇವನು, ನರಕಾಸುರ, ತಾರಕಾಸುರರ ಸಂಹಾರ ಮಾಡಿ, ಅವರಿಂದ ಲಕ್ಷ್ಮಿಯನ್ನು ಬಿಡಿಸಿ ತರುವ ದಿನವೇ ಕಾರ್ತಿಕ ಅಮಾವಾಸ್ಯೆ. ಆಗ ಸಂಜೆಯ ಕತ್ತಲು ಆವರಿಸಿರುತ್ತದೆ. ಆ ಸಮಯದಲ್ಲಿ ಲಕ್ಷ್ಮಿಗೆ ದೀಪಗಳನ್ನು ಹಚ್ಚಿ ಬೆಳಕು ತೋರಿಸಲಾಗುತ್ತದೆ. ಹೀಗೆ ಕತ್ತಲೆಯಿಂದ ಬೆಳಕಿನೆಡೆಗೆ ಲಕ್ಷ್ಮಿಯನ್ನು ಕರೆತರುವ ಈ ದಿನವನ್ನು ದೀಪಾವಳಿ ಹಬ್ಬವಾಗಿ ಆಚರಿಸಲಾಗುತ್ತದೆ.
ಸೆರೆಯಲ್ಲಿದ್ದ ಲಕ್ಷ್ಮಿದೇವಿಯ ಶಕ್ತಿ ಕುಗ್ಗಿರುತ್ತದೆ. ಕೈಲಾಸದಲ್ಲಿ ಪಾರ್ವತಿ ದೀಪಗಳನ್ನು ಬೆಳಗಿಸುವ ಮೂಲಕ ಲಕ್ಷ್ಮೀಗೆ ಶಕ್ತಿ ತುಂಬುತ್ತಾಳೆ. ಹಾಗಾಗಿ ಈ ದಿನ ದೀಪಗಳನ್ನು ಬೆಳಗಿಸಿ ಲಕ್ಷ್ಮಿಯನ್ನು ಪೂಜಿಸಿದರೆ ಆಕೆ ಪ್ರಸನ್ನಳಾಗಿ ಸಕಲ ಐಶ್ವರ್ಯವನ್ನು ಕರುಣಿಸುತ್ತಾಳೆ. ದೀಪಾವಳಿಯಲ್ಲಿ ದೇವರ ಕೋಣೆಯಲ್ಲಿ 2 ಕಂಬದ ದೀಪಗಳು, ಮನೆಯ ಹೊಸ್ತಿಲ ಮೇಲೆ 2 ಹಾಗೂ ತುಳಸಿ ಕಟ್ಟೆಯಲ್ಲಿ 1 ದೀಪ ಹಚ್ಚಬೇಕು. ಇವು ಕಂಚು ಅಥವಾ ಹಿತ್ತಾಳೆ ದೀಪಗಳಾಗಿದ್ದರೆ ಶ್ರೇಷ್ಠ.
ಐಶ್ವರ್ಯದ ಅಧಿದೇವ ಕಾಲಭೈರವೇಶ್ವರ: ಕಾಲಭೈರವನೇ ಲಕ್ಷ್ಮಿ ಮತ್ತು ಕುಬೇರರಿಗೆ ಸಂಪತ್ತು ನೀಡುವುದು. ಹಾಗಾಗಿ ಸಂಪತ್ತು ಪ್ರಾಪ್ತಿಗಾಗಿ ಕಾಲಭೈರವನನ್ನು ಪೂಜಿಸಿ. ಆದರೆ ಲಕ್ಷ್ಮಿ ದೇವಿ ಹಣ ನೀಡುವುದಿಲ್ಲ. ಬದಲಿಗೆ ಯಾರು ಆಕೆಯನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರಿಗೆ ಅಭಯ ನೀಡುತ್ತಾಳೆ. ಧೈರ್ಯು ಸಾಹಸೇ ಲಕ್ಷ್ಮೀ. ಯಾರು ಲಕ್ಷ್ಮಿಯನ್ನು ಪೂಜಿಸುತ್ತಾರೋ ಅವರು ಎಲ್ಲ ಕಾರ್ಯಗಳಲ್ಲೂ ಯಶಸ್ಸು ಗಳಿಸಿ ಸಂಪತ್ತು ಹೊಂದುತ್ತಾರೆ. ಹಾಗಾಗಿ ಕಾರ್ತಿಕ ಮಾಸದ ಅಮಾವಾಸ್ಯೆ ದಿನ ಲಕ್ಷ್ಮಿಯನ್ನು ಪೂಜಿಸುವುದು ವಾಡಿಕೆ.
ಪೂಜೆಯಲ್ಲಿ ವಿನಾಯಕನಿಗೆ ಯಾವ ಸ್ಥಾನ?: ಯಾವುದೇ ಪೂಜೆಯಲ್ಲಿ ವಿಘ್ನ ನಿವಾರಕ ವಿಘ್ನೇಶ್ವರನಿಗೆ ಮೊದಲ ಪೂಜೆ ಎಂದು ಹೇಳಲಾಗುತ್ತದೆ. ಆದರೆ ಎಲ್ಲದಕ್ಕೂ ಮುನ್ನ ಗಂಗೆ ಪೂಜೆ ಮಾಡಲಾಗುತ್ತದೆ. ಯಾವುದೇ ಪೂಜೆಯಲ್ಲಿ ಶುದ್ಧೋಧಕ ಸ್ನಾನ ಮುಖ್ಯ. ಅದಕ್ಕಾಗಿ ಗಂಗೆಯನ್ನು ಸ್ಮರಿಸಿ ಪ್ರತಿಯೊಂದು ವಸ್ತುವಿನ ಮೇಲೂ ಗಂಗೆಯನ್ನು ಪ್ರೋಕ್ಷಣೆ ಮಾಡಲಾಗುತ್ತದೆ. ಆದ್ದರಿಂದ ಗಂಗೆಗೆ ಮೊದಲ ಪೂಜೆ.
ಮುತ್ತುಗದ ಎಲೆಯಲ್ಲಿ ಲಕ್ಷ್ಮಿವಾಸ: ಲಕ್ಷ್ಮಿ ದೇವಿ ಮುತ್ತುಗದ ಎಲೆಯಲ್ಲಿ ವಾಸವಿರುತ್ತಾಳೆ. ಹಾಗಾಗಿ ಲಕ್ಷ್ಮಿಗೆ ಇಷ್ಟವಾದ ಎಲೆಯಲ್ಲಿ ಹಾಲಿನಿಂದ ಮಾಡಿದ ಪದಾರ್ಥವನ್ನು ಇಟ್ಟು ನೈವೇದ್ಯ ಮಾಡಿದರೆ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ. ವೈಜ್ಞಾನಿಕವಾಗಿ ಹೇಳುವುದಾದರೆ ಮುತ್ತುಗದ ಎಲೆಯಲ್ಲಿ ಊಟ ಮಾಡುವುದರಿಂದ ದೇಹಕ್ಕೆ ಹೆಚ್ಚು ಆಮ್ಲಜನಕ ದೊರೆಯುತ್ತದೆ.
ಶುಭಕಾರ್ಯದಲ್ಲಿ ಕಡಲೆಪುರಿ ಹಂಚಬೇಡಿ: ಆಯುಧಪೂಜೆ ಸೇರಿದಂತೆ ಕೆಲ ಶುಭ ಕಾರ್ಯಗಳಲ್ಲಿ ಸಿಹಿ, ಹಣ್ಣುಗಳ ಜತೆಗೆ ಕಡಲೆಪುರಿ (ಚುರುಮುರಿ) ಹಂಚುವುದು ವಾಡಿಕೆಯಾಗಿದೆ. ಆದರೆ ಅದು ಸರಿಯಲ್ಲ. ಕಡಲೆಪುರಿ ಬದಲಿಗೆ ಭತ್ತದ ಅರಳು ಶ್ರೇಷ್ಠ. ಇಂದಿಗೂ ಧರ್ಮಸ್ಥಳ ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಭತ್ತದ ಅರಳನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ಅದರ ಬೆಲೆ ಹೆಚ್ಚು ಎಂಬ ಕಾರಣಕ್ಕೆ ಜನರು ಕಡಲೆಪುರಿ ನೀಡುವುದನ್ನು ರೂಢಿಸಿಕೊಂಡಿದ್ದಾರೆ.
ಡಿಸೆಂಬರ್ನಲ್ಲಿ ಅಧಿಕಾರ ಸ್ಥಾನದಲ್ಲಿ ಬದಲಾವಣೆ: ಡಿಸೆಂಬರ್ 4ರ ಗ್ರಹಣದ ನಂತರ ಗುರು ಸ್ಥಾನಪಲ್ಲಟ ಮಾಡುತ್ತಾನೆ. ಈ ಐದು ವರ್ಷದ ಅವಧಿಯಲ್ಲಿ ರಾಜ್ಯಕ್ಕೆ ಈಗ ನಾಲ್ಕನೇ ಮುಖ್ಯಮಂತ್ರಿ ಆಗಿದ್ದಾರೆ. ಚುನಾವಣೆಗೆ ಮೂರು ತಿಂಗಳಿರಲಿ ಅಥವಾ ಆರು ತಿಂಗಳೇ ಇರಲಿ, ಇನ್ನೊಬ್ಬರು ಮುಖ್ಯಮಂತ್ರಿ ಆಗುವುದು ಶತಃಸಿದ್ಧ ಎಂದು ಈ ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಎರಡು ವರ್ಷದಿಂದ ಕರೊನಾದಿಂದ ಒದ್ದಾಡಿದ್ದೇವೆ. ಈಗ ಕಾಯಿಲೆ ಕಡಿಮೆ ಆಗಿದೆ ಎಂದು ಉದಾಸೀನ ಮಾಡಬಾರದು. ಇನ್ನೂ ಒಂದೂವರೆ ವರ್ಷ ಅನೇಕ ಕಾಯಿಲೆಗಳು ಬರಬಹುದು. ಮಹಿಳೆಯರಿಗೆ, ಪಶುಗಳಿಗೆ ಹೆಚ್ಚು ಕಾಯಿಲೆಗಳು ಎದುರಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಯುವಕರಿಗೂ ಅಪಾಯ ಎದುರಾಗುವ ಸಾಧ್ಯತೆ ಇರುವುದರಿಂದ ಆಂಜನೇಯನನ್ನು ಪ್ರಾರ್ಥಿಸಿ. ಎಲ್ಲರೂ ಧರ್ಮವನ್ನು ಆಚರಿಸಿ, ಅಧರ್ವಿುಗಳಿಗೆ ಉಳಿಗಾಲವಿಲ್ಲ. ಗೋಪೂಜೆಯನ್ನು ಎಲ್ಲರೂ ಮಾಡಬೇಕು. ನಾಟಿ ಹಸುಗಳನ್ನೇ ಪೂಜಿಸಿ.
5 ಎಣ್ಣೆಗಳಲ್ಲಿ ದೀಪ ಬೆಳಗಿಸಿ: ದೇವರಿಗೆ ಮನೆಯಲ್ಲಿ ಪ್ರತಿ ದಿನ ತುಪ್ಪದ ದೀಪ ಹಚ್ಚಬಾರದು. ಬದಲಿಗೆ ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಮಾತ್ರ ತುಪ್ಪದ ದೀಪ ಬೆಳಗಬೇಕು. ಉಳಿದಂತೆ ತುಪ್ಪ, ಕಡಲೆಕಾಯಿ ಎಣ್ಣೆ, ಹೊಂಗೆ ಎಣ್ಣೆ, ಹಿಪ್ಪೆ ಎಣ್ಣೆ ಮತ್ತು ಎಳ್ಳೆಣ್ಣೆ ಸೇರಿಸಿ ಪ್ರತಿ ದಿನ ದೀಪ ಹಚ್ಚುವುದು ಶ್ರೇಷ್ಠ.
ಉಪ್ಪು ಕೊಂಡು ತನ್ನಿ: ಕಾರ್ತಿಕ ಮಾಸದ ಅಮಾವಾಸ್ಯೆ ದಿನದಂದು ಮನೆಗೆ ಹೊಸದಾಗಿ ಕಲ್ಲುಉಪ್ಪು ಕೊಂಡು ತಂದು ಇಡುವುದರಿಂದಲೂ ಲಕ್ಷ್ಮಿ ನೆಲೆಸುತ್ತಾಳೆ.
ಮನೆ ಒರೆಸುವ ಮುನ್ನ: ಪ್ರತಿ ಮಂಗಳವಾರ, ಶುಕ್ರವಾರ, ಭಾನುವಾರ, ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಲ್ಲಿ ನೀರಿಗೆ ಸ್ವಲ್ಪ ಗೋಮೂತ್ರ, ಪಚ್ಚಕರ್ಪರ, ನಿಂಬೆ ರಸ ಹಾಗೂ ಕಲ್ಲುಪು್ಪ ಹಾಕಿ ಬೆರೆಸಿದ ನೀರಿನಲ್ಲಿ ಮನೆ ಒರೆಸಬೇಕು. ಇದರಿಂದ ಮನೆಯಲ್ಲಿರುವ ದುಷ್ಟ ಶಕ್ತಿಗಳು ನಿವಾರಣೆ ಆಗುತ್ತವೆ.
ನಿಂಬೆ ಮತ್ತು ಮೆಣಸಿಕಾಯಿ ದಾರ: ವಾಹನ ಹಾಗೂ ಅಂಗಡಿಯಲ್ಲಿ ನಿಂಬೆ ಹಣ್ಣು ಕಟ್ಟುವವರು ಪ್ರತಿ ಶುಕ್ರವಾರ ಅದನ್ನು ಬದಲಿಸಬೇಕು. ದಾರದ ಬದಲಿಗೆ ಕಬ್ಬಿಣದ ಕಂಬಿಗೆ ಕೆಳಗಡೆ 6 ಮೆಣಸಿನಕಾಯಿ ನಂತರ ನಿಂಬೆ ಹಣ್ಣು, ಅದರ ಮೇಲೆ 7 ಮೆಣಸಿಕಾಯಿ ಬರುವಂತೆ ಪೋಣಿಸಿ ಕಟ್ಟುವುದು ಒಳ್ಳೆಯದು.
- ಹೆಂಡತಿ ಇಲ್ಲದಿದ್ದರೆ/ ಮದುವೆ ಆಗಿರದಿದ್ದರೆ, ಪ್ರತಿದಿನ ಮಧ್ಯಾಹ್ನದ ಊಟ ಮಾಡುವ ಮೊದಲು ಕಾಗೆ ಅಥವಾ ನಾಯಿಗೆ ಮೂರು ತುತ್ತು ಹಾಕಬೇಕು. ಮದುವೆ ಮನೆಯಲ್ಲಿ, ಹೋಟೆಲ್ನಲ್ಲಿ ಇದ್ದರೆ ಏನು ಮಾಡಬೇಕು? ಒಂದು ಟಿಶ್ಯೂ ಪೇಪರ್ನಲ್ಲಿ ಅಥವಾ ಲೋಟದಲ್ಲಿ ಹಾಕಿಟ್ಟುಕೊಂಡು ನಂತರ ಕಾಗೆ ಅಥವಾ ನಾಯಿಗೆ ಹಾಕಿದರೆ ಶನಿ ನಿಮ್ಮ ಕರ್ಮಗಳನ್ನು ಕಳೆಯುತ್ತಾನೆ. ಮರಗಿಡ, ಪ್ರಾಣಿ ಪಕ್ಷಿಗಳನ್ನು ನೋಡಿಕೊಂಡರೆ, ಹೆಂಗಸರಿಗೆ ಗೌರವ ನೀಡಿದರೆ, ಪಂಚಭೂತಗಳಿಗೆ ತೊಂದರೆ ಮಾಡದಿದ್ದರೆ ಎಲ್ಲ ದೋಷಗಳೂ ಪರಿಹಾರ ಆಗುತ್ತವೆ.
ಗುಲಗಂಜಿ ಪೂಜೆ ಮಾಡುವ ವಿಧಾನ ಹೇಗೆ?
- ಒಂದು ಗುಲಗಂಜಿಯನ್ನು ನೆನೆಸಿ ಜೇನುತುಪ್ಪ ಹಚ್ಚಿ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿದರೆ, ಲಕ್ಷ್ಮೀ ನರಸಿಂಹ ಒಲಿಯುತ್ತಾರೆ. ನಂತರ ಗುಲಗಂಜಿಯಿಂದ ಜೇನುತುಪ್ಪವನ್ನು ಬೇರ್ಪಡಿಸಿ ಮನೆಯವರೆಲ್ಲ ಸೇವಿಸಿ. ಗುಲಗಂಜಿಯನ್ನು ತೊಳೆದು ಕ್ಯಾಶ್ಬಾಕ್ಸ್ನಲ್ಲಿ ಇರಿಸಿ. ಇಡೀ ಕುಟುಂಬಕ್ಕೆ ಒಂದೇ ಗುಲಗಂಜಿ ಸಾಕು. ಹಾಗಿದ್ದರೂ ಗೊಂದಲ ಇದ್ದರೆ ಕುಟುಂಬದ ಎಲ್ಲ ದಂಪತಿಯೂ ಒಂದೊಂದು ಗುಲಗಂಜಿ ಇರಿಸಿ ಕೊಳ್ಳಬಹುದು.
ದೀಪಾವಳಿ ಹಬ್ಬ ಆಚರಣೆ ಹೇಗೆ ಮಾಡುವುದು?
- ಹಬ್ಬದ ದಿನ ಬೆಳಗ್ಗೆ ಪ್ರತಿದಿನಕ್ಕಿಂತ ಬೇಗ ಏಳಬೇಕು. ತಾಯಿಯ ಕೈಯಿಂದ ಸ್ನಾನ ಮಾಡಿಸಿಕೊಳ್ಳಬೇಕು ಎಂದು ಶಾಸ್ತ್ರ ಹೇಳುತ್ತದೆ. ನರಕಚತುರ್ದಶಿ ದಿನ ಎಣ್ಣೆ ಸ್ನಾನ ಮಾಡಿಸುವಾಗ ‘ಹನುಮಾನ್, ಪರಶುರಾಮ ಮುಂತಾದ ಚಿರಂಜೀವಿಗಳ ರೀತಿ ನೀನೂ ಆಗು’ ಎಂದು ತಾಯಿ ಹಾರೈಸುತ್ತಿದ್ದಳು. ಎರಡನೇ ದಿನ ಪತ್ನಿ ಜತೆ ಪೂಜೆ, ಮೂರನೇ ದಿನ ಪಟಾಕಿ ಸಂಭ್ರಮ, ನಾಲ್ಕನೇ ದಿನ ಬಂಧು ಮಿತ್ರರ ಮನೆಗೆ ತೆರಳುವ ಸಂಪ್ರದಾಯ ಮುಂದುವರಿಸಬೇಕು. ಈ ಸಂದರ್ಭದಲ್ಲಿ ಯಾರಿಗೂ ತೊಂದರೆ ಮಾಡಬಾರದು. ಸೌಹಾರ್ದತೆಯಿಂದ ಆಚರಿಸಿದರೆ ಉತ್ತಮ ಫಲ ಸಿಗುತ್ತದೆ.
ಹೊಸ ಮನೆಯಲ್ಲಿ ಎರಡನೇ ವರ್ಷ ಲಕ್ಷ್ಮೀ ಕೂರಿಸುತ್ತಿದ್ದೇವೆ. ಮುಂಚಿನಿಂದಲೂ ಈ ಪದ್ಧತಿ ಇತ್ತು. ಈ ವರ್ಷ ಅಂದು ಕೆಲಸಕ್ಕೆ ರಜೆ ಇಲ್ಲ. ಯಾವಾಗ ಆಚರಣೆ ಮಾಡುವುದು?
- ಮೂರು ದಿನಗಳಲ್ಲಿ ಯಾವತ್ತು ಬೇಕಾದರೂ ಕೂರಿಸಬಹುದು. ಕೆಲಸದಿಂದ ಬಂದ ನಂತರ ಅಮಾವಾಸ್ಯೆ ದಿನ ಸಂಜೆ ಕೂರಿಸಿ ಪೂಜೆ ಮಾಡಬಹುದು. ನಾಗದೇವತೆಯೇ ಸ್ವಯಂ ಲಕ್ಷ್ಮೀ. ಮುತ್ತುಗದ ಎಲೆ ಮೇಲೆ ಉತ್ತಮ ಗುಣಮಟ್ಟದ ಅಕ್ಕಿ ಹಾಕಿ ಕೂರಿಸಬೇಕು. ಹಬ್ಬದ ನಂತರ ಶನಿವಾರ ವಿಸರ್ಜನೆ ಮಾಡಬಹುದು.
ನಮ್ಮ ಮನೆಯಲ್ಲಿ ಕಾಳಿ ಮಾತೆಗೆ ಅಮಾವಾಸ್ಯೆ ಪೂಜೆ ನಡೆಯುತ್ತದೆ. ದೀಪಾವಳಿ ದಿನ ಲಕ್ಷ್ಮೀ ಪೂಜೆ ಹೇಗೆ ಮಾಡುವುದು?
- ಇಡೀ ಜಗತ್ತಿನಲ್ಲಿ ಮೊದಲು ಲಕ್ಷ್ಮೀ ಪೂಜೆ ಮಾಡುವುದೇ ಕಾಳಿ. ಕಾಳಿ ಜತೆಗೆ ಲಕ್ಷ್ಮೀ ಪೂಜಿಸುವ ಬದಲಿಗೆ ಲಕ್ಷ್ಮೀ ಅಲಂಕಾರದಲ್ಲೇ ಕಾಳಿಯನ್ನು ಪೂಜಿಸಬಹುದು. ಸುಗಂಧ ಪರಿಮಳ ಪುಷ್ಪಗಳನ್ನಿಟ್ಟು ಪೂಜಿಸಬೇಕು.
ಲಕ್ಷ್ಮೀ ಪೂಜೆ ಮಾಡಲು ನೋಂಬು ಇದೆ, ಯಾವ ಸಮಯದಲ್ಲಿ ಪೂಜೆ ಮಾಡಬೇಕು? ಹಣಕಾಸು ಮುಗ್ಗಟ್ಟು ನಿವಾರಿಸುವುದು ಹೇಗೆ?
-ಅಮಾವಾಸ್ಯೆ ದಿನ ಸಂಜೆ ಗೋಧೂಳಿ ಲಗ್ನ ಅಥವಾ ರಾತ್ರಿ 8 ಗಂಟೆಗೆ ನೋಂಬು ಪೂಜೆ ಆರಂಭಿಸಬಹುದು. ಮನೆಯಲ್ಲಿ ಉಪು್ಪ ಇದ್ದರೂ ಅಂದು ಅಂಗಡಿಯಿಂದ ಕಲ್ಲುಪು್ಪ ಖರೀದಿಸಿ ತರಬೇಕು. ಆಗ ಭೂಮಿಯ ಮೇಲಿರುವ ಮನೆ ಋಣಗಳು ತೀರುತ್ತವೆ. ಇನ್ನೊಂದು ವಿಧಾನವೆಂದರೆ, ಬೆಳಗ್ಗೆ ಎದ್ದು ಸ್ನಾನ ಮಾಡಿದ ತಕ್ಷಣ ಮನೆ ಬಾಗಿಲಲ್ಲಿ ನೀರು ಹಾಕಿ ರಂಗೋಲಿ ಹಾಕಬೇಕು. ಆಲಸ್ಯ ಇರಬಾರದು. ಉತ್ತಮ ಸಂಪ್ರದಾಯವನ್ನು ಮುಂದುವರಿಸಿದರೆ ಲಕ್ಷ್ಮಿಯನ್ನು ಆವಾಹನೆ ಮಾಡುವುದು ಸುಲಭ. ಮಡಿ, ಪ್ರೀತಿ, ಹೆಣ್ಣು ಮಕ್ಕಳ ಸಂಭ್ರಮ ಎಷ್ಟು ಹೆಚ್ಚಿರುತ್ತದೆಯೋ ಅಷ್ಟು ಬೇಗ ಲಕ್ಷ್ಮೀ ಒಲಿಯುತ್ತಾಳೆ.
ಧನಲಕ್ಷ್ಮೀ ಪೂಜೆಗೆ ನೋಟುಗಳ ಕಟ್ಟು ಇಡುತ್ತಾರೆ. ಪೇಪರ್ ಎನ್ನುವುದು ಸರಸ್ವತಿ ಅಲ್ಲವೇ? ಲಕ್ಷ್ಮೀ ಪೂಜೆ ಹೇಗೆ ಆಗುತ್ತದೆ?
- ಹಾಗೆ ನೋಡಿದರೆ ನೋಟು ಲಕ್ಷ್ಮಿಯೂ ಅಲ್ಲ, ಸರಸ್ವತಿಯೂ ಅಲ್ಲ. ಅದೆಲ್ಲವೂ ಮರ. ಮರ ಎಂದರೆ ಕೇತು. ಈ ಹಿಂದೆ ಚಿನ್ನದ ನಾಣ್ಯಗಳನ್ನು ಪೂಜೆಗೆ ಇಡುತ್ತಿದ್ದರು. ಕೆಲವರು ಬೆಳ್ಳಿ ನಾಣ್ಯ ಇಡುತ್ತಿದ್ದರು. ಕಬ್ಬಿಣ ಬಿಟ್ಟು ಬೇರೆ ಯಾವುದೇ ಲೋಹದ ನಾಣ್ಯ ಇಡಬಹುದು. ಈಗಿನ ಐದು ರೂ. ನಾಣ್ಯ ಪಂಚಲೋಹದಿಂದ ಮಾಡಲ್ಪಟ್ಟಿದೆ. ಆ ನಾಣ್ಯಗಳನ್ನು 32 ಇಟ್ಟು ಪೂಜಿಸಬೇಕು. ನೋಟು ಇಟ್ಟು ಪೂಜೆ ಮಾಡುವುದು ಬೂಟಾಟಿಕೆಯಲ್ಲದೆ ಮತ್ತೇನೂ ಅಲ್ಲ.
ತ್ರಯೋದಶಿ ದಿನದಂದು ಯಮ ಪೂಜೆ ಮಾಡುವ ಉದ್ದೇಶ ಏನು?
- ಯಮ ದ್ವಿತೀಯ ಎಂದು ಪಾಡ್ಯದ ನಂತರ ಮೂರನೇ ದಿನ ಆಚರಣೆ ಮಾಡಲಾಗುತ್ತದೆ. ಯಮ ತನ್ನ ತಂಗಿ ಮನೆಗೆ ಹೋಗುತ್ತಾನೆ, ಯಮಧರ್ಮರಾಯನ ಪೂಜೆ ಮಾಡಿದಾಗ, ಅಣ್ಣನ ಅಪಮೃತ್ಯು ಆಗದಿರಲಿ ಎಂದು ಆಶಿಸುತ್ತಾರೆ. ಅದೇ ರೀತಿ ಬದುಕಿರುವ ಅಕ್ಕ ತಂಗಿ ಮನೆಗೆ ಹೋಗುತ್ತಾರೆ. ಕಾಬೂಲ್ ಕಡಲೆ, ನಾಟಿ ಕಡಲೆ, ಹೆಸರುಕಾಳು, ಮೊಳಕೆ ಕಾಳುಗಳ ಉಸಳಿ, ನುಚ್ಚಿನುಂಡೆಯಂತಹ ಪದಾರ್ಥವನ್ನು ಹಬೆ ಮತ್ತು ಆವಿಯಲ್ಲಿ ಬೇಯಿಸಿ ಅಣ್ಣಂದಿರಿಗೆ ತಿನ್ನಿಸಬೇಕು. ಇದು ಆರೋಗ್ಯಕ್ಕೂ ಉತ್ತಮವಾದದ್ದು. ಅಣ್ಣಂದಿರ ಆಯುಷ್ಯ ವೃದ್ಧಿಗೆ ತಂಗಿ ಪ್ರಾರ್ಥನೆ ಮಾಡುತ್ತಾಳೆ.
ಲಕ್ಷ್ಮೀ ಪೂಜೆಯನ್ನು ಅಮಾವಾಸ್ಯೆ ದಿನ ಮಾಡಬೇಕೆ?
- ಲಕ್ಷ್ಮಿಗೆ ಅಮಾವಾಸ್ಯೆ ಹಾಗೂ ಶುಕ್ರವಾರ ಇಷ್ಟ. ಅಮಾವಾಸ್ಯೆ ಹಾಗೂ ಬಲಿಪಾಡ್ಯಮಿ ದಿನವೂ ಮಾಡಬಹುದು. ವ್ಯಾಪಾರಿಗಳು ಅಂಗಡಿಯಲ್ಲಾದರೆ ಅಮಾವಾಸ್ಯೆ ದಿನ ಗೋಧೂಳಿ ಲಗ್ನದಲ್ಲಿ ಪೂಜೆ ಮಾಡಬಹುದು.