ಕೃಷ್ಣ ಮಠದಲ್ಲಿ ಸರಳ ಲಕ್ಷದೀಪೋತ್ಸವ

krishna mutt NEW
Published on

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ನ.27ರಿಂದ ನಡೆಯುವ ವಾರ್ಷಿಕ ಲಕ್ಷದೀಪೋತ್ಸವ ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ಸರಳವಾಗಿ ನಡೆಯಲಿದೆ. ನ.27ಉತ್ಥಾನದ್ವಾದಶಿಯಿಂದ ನಾಲ್ಕು ದಿನ ಲಕ್ಷದೀಪೋತ್ಸವ ನಡೆಯಲಿದೆ.

ಈ ಸಂದರ್ಭ ವಾರ್ಷಿಕ ಉತ್ಸವಗಳೂ ಆರಂಭಗೊಳ್ಳಲಿವೆ. ಚಾತುರ್ಮಾಸ್ಯ ಅವಧಿಯಲ್ಲಿ ಗರ್ಭಗುಡಿಯಲ್ಲಿರುವ ಉತ್ಸವ ಮೂರ್ತಿಯನ್ನು ಉತ್ಸವದಲ್ಲಿ ತಂದು ಪೂಜಿಸಲಾಗುತ್ತದೆ. ಸಾಯಂಕಾಲ ಬಳಿಕ ಉತ್ಸವ ನಡೆಯುವಾಗ ರಥಬೀದಿಯಲ್ಲಿ ಹಾಕಿದ ಅಟ್ಟಳಿಗೆಗಳಲ್ಲಿ ಲಕ್ಷ ಹಣತೆಗಳಲ್ಲಿ ದೀಪ ಬೆಳಗಿಸಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ. ವಿಟ್ಲಪಿಂಡಿ ಹಬ್ಬ ನಡೆಸಿದಂತೆ ಸೀಮಿತ ಜನರು ಪಾಲ್ಗೊಳ್ಳುವ ಧಾರ್ಮಿಕ ಚಟುವಟಿಕೆಗಳು ನಡೆಯಲು ಅಭ್ಯಂತರವಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಲಕ್ಷದೀಪೋತ್ಸವದಲ್ಲಿ ಭಕ್ತರು ಪಾಲ್ಗೊಳ್ಳಬೇಕೆಂಬ ಇಚ್ಛೆ ನಮಗಿದ್ದರೂ, ಸರ್ಕಾರದ ಕೋವಿಡ್ ಮಾರ್ಗಸೂಚಿ ನಿಯಮ ಪಾಲಿಸಬೇಕಿದೆ. ಭಕ್ತರಿಗೆ ಅನುಕೂಲವಾಗುವಂತೆ ದರ್ಶನದ ವ್ಯವಸ್ಥೆ ಸಮಯ ವಿಸ್ತರಿಸಲಾಗುವುದು. ಉತ್ಸವದಲ್ಲಿ ಪಾಲ್ಗೊಳ್ಳಲು ಆಗದಿದ್ದರೂ ದೇವರ ದರ್ಶನಕ್ಕೆ ಅನುಕೂಲ ಕಲ್ಪಿಸಲಾಗುವುದು. ಉತ್ಸವವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net