

ಹುಣಸೂರು: ಶಿಕ್ಷಣದಿಂದ ಮಾತ್ರ ಶಕ್ತಿ ಎಂಬ ಅಂಬೇಡ್ಕರ್ ಅವರ ಆಶಯದಂತೆ ದುಡಿದು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಇತ್ತೀಚಿಗೆ ಇಹಲೋಕ ತ್ಯಜಿಸಿದ ಅಕ್ಷರ ಸಂತ ಲಕ್ಕಪ್ಪ ಸ್ವಾಮೀಜಿ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ರತ್ನಪುರಿ ಗ್ರಾಮದ ವಿಶ್ವಶಾಂತಿ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಥೆಯ ಸಂಸ್ಥಾಪಕ ದಿವಂಗತ ಲಕ್ಕಪ್ಪ ಸ್ವಾಮೀಜಿ ಸ್ಮರಣಾರ್ಥ ಇತ್ತೀಚೆಗೆ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
60 ವರ್ಷಗಳ ಹಿಂದೆಯೇ ಸುಂದರ ಪರಿಸರದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸರಳ ಜೀವನ ನಡೆಸುತ್ತಲೇ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕಲ್ಪಿಸಿರುವ ಅವರ ಅಕ್ಷರ ಕ್ರಾಂತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ವಿಶ್ವಶಾಂತಿ ಶಿಕ್ಷಣ ಸಂಸ್ಥೆಯನ್ನು ಅಭಿವೃದ್ಧಿಪಡಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ನಾವು ಕಂಡ ವಿಶ್ವಮಾನವ ಲಕ್ಕಪ್ಪ ಸ್ವಾಮೀಜಿ ಎಂಬ ಪುಸ್ತಕ ಬಿಡುಗಡೆ ಮಾಡಿ, ಸ್ವಾಮೀಜಿ ಬಡವರು, ದೀನ-ದಲಿತರಿಗೆ, ಅಕ್ಷರ ವಂಚಿತರಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಮಾದರಿಯಾಗಿದ್ದಾರೆ. ಗ್ರಾಮಸ್ಥರ ಅಭಿಪ್ರಾಯದಂತೆ ಸೇತುವೆಯಾಗಿ ನಾನು ಕೆಲಸ ಮಾಡುವೆ. ಸ್ವಾಮೀಜಿ ಅವರ ಕನಸು ನನಸು ಮಾಡಲು ಸಚಿವ ಡಾ.ಮಹದೇವಪ್ಪ ಸಂಸ್ಥೆಯ ಟ್ರಸ್ಟ್‌ನ ಅಧ್ಯಕ್ಷರಾಗಬೇಕು ಎಂದು ಮನವಿ ಮಾಡಿದರು.
ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಹರಿಹರ ಆನಂದ ಸ್ವಾಮಿ, ಮಾತನಾಡಿ, ಸಂಸ್ಥೆಗೆ ಸೂಕ್ತ ಕಟ್ಟಡ ನಿರ್ಮಾಣಗೊಂಡಿಲ್ಲ, ಸಂಸ್ಥೆಯು ಮೂಲ ಆಶಯ ಈಡೇರಬೇಕಿದ್ದಲ್ಲಿ ಸಚಿವ ಮಹದೇವಪ್ಪ ನೇತೃತ್ವ ವಹಿಸಬೇಕೆಂದು ಕೋರಿದರು.
ಟ್ರಸ್ಟ್‌ನ ಅಧ್ಯಕ್ಷ ಡಾ.ಮೂರ್ತಿ, ಕಾರ್ಯದರ್ಶಿ ಮಾಲಿಂಗಪ್ಪ, ಹಿರಿಯ ವಿದ್ಯಾರ್ಥಿ ಮನುಕುಮಾರ್ ಸಚಿವರಿಗೆ ಮನವಿ ಸಲ್ಲಿಸಿದರು. ಪ್ರಾಂಶುಪಾಲ ಶಿವಕುಮಾರ್, ತಾಪಂ ಇಒ ಹೊಂಗಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ವಕ್ತಾರ ಲಕ್ಷ್ಮಣ್, ಮುಖಂಡರಾದ ಅಸ್ಟರ್ ಪಾಷ, ರಾಜು ಶಿವರಾಜೇಗೌಡ, ಟಿ.ಕೃಷ್ಣ, ಪ್ರಸನ್ನ, ಪುಟ್ಟಸ್ವಾಮಿ, ಗ್ರಾಪಂ ಅಧ್ಯಕ್ಷ ದೇವರಾಜ್, ಮಹದೇವ್, ಉಪನ್ಯಾಸಕರಾದ ಪುಟ್ಟಸ್ವಾಮಿ, ಎಂ.ರವಿ, ಜಯಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ಸುಧಾಕರ್, ಮನೋಜ್‌ಕುಮಾರ್ ಹಳೇ ವಿದ್ಯಾರ್ಥಿ ಸಮೂಹ ಸೇರಿದಂತೆ ಗ್ರಾಮಸ್ಥರು, ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿ ಅ.ರಾಮಚಂದ್ರ ಗೀತಗಾಯನ ನಡೆಸಿಕೊಟ್ಟರು.