ಕಾರುಗಳ ಮೇಲೆ ಲಕ್ಷಾಂತರ ರೂ. ರಿಯಾಯಿತಿ! ಇಲ್ಲಿದೆ ನೋಡಿ ಪೂರ್ತಿ ಮಾಹಿತಿ

car
Published on

ಮಾರಾಟ ಹೆಚ್ಚಿಸಲು ಭಾರಿ ಡಿಸ್ಕೌಂಟ್ ಘೋಷಿಸಿದ ಕಾರು ತಯಾರಿಕಾ ಕಂಪನಿಗಳು

ನವದೆಹಲಿ: ಕಾರು ತಯಾರಿಕಾ ಕಂಪನಿಗಳು ಮಾರಾಟ ಹೆಚ್ಚಿಸಲು ದೀಪಾವಳಿ ಪ್ರಯುಕ್ತ ಸಾವಿರಗಳಲ್ಲಿ ಅಲ್ಲ, ಲಕ್ಷ ರೂ.ಗಳಲ್ಲಿ ರಿಯಾಯಿತಿ ನೀಡುತ್ತಿವೆ! ಇದಕ್ಕೆ ಕಾರಣವೂ ಇಲ್ಲದಿಲ್ಲ. ಇತ್ತೀಚಿನ ಕೆಲ ತಿಂಗಳುಗಳಲ್ಲಿ ಕಾರು ಇಂಡಸ್ಟ್ರಿಗೆ ಮಂಕು ಕವಿದಿದ್ದು, ಮಾರಾಟ ಪ್ರಮಾಣ ತೀವ್ರವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಹಬ್ಬದ ಋತುವಿನಲ್ಲಿ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಮಾರುತಿ ಸುಜುಕಿ, ಹೊಂಡಾ, ಜೆಎಸ್​ಡಬ್ಲ್ಯು ಎಂಜಿ, ಮಹೀಂದ್ರಾ ಆಂಡ್ ಮಹೀಂದ್ರಾ, ಟಾಟಾ ಮೋಟರ್ಸ್ ಸೇರಿದಂತೆ ಹಲವು ಕಾರು ತಯಾರಿಕಾ ಕಂಪನಿಗಳು ಭರ್ಜರಿ ಡಿಸ್ಕೌಂಟ್ ಘೋಷಿಸಿವೆ. ಐಷಾರಾಮಿ ಕಾರು ತಯಾರಕ ಕಂಪನಿಗಳಾದ ಆಡಿ, ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಜ್ ಕೂಡ ರಿಯಾಯಿತಿ ಘೋಷಿಸಿವೆ.

ಯಾವ ಬ್ರ್ಯಾಂಡ್​ ಕಾರುಗಳು?

ಆಡಿ ಕ್ಯು-8 ಇ-ಟ್ರಾನ್ ಕಾರ್ ಮೇಲೆ 10 ಲಕ್ಷ ರೂ., ಕಿಯಾ ಇವಿ6 ಮೇಲೆ 12 ಲಕ್ಷ ರೂ., ಸುಜುಕಿ ಜಿಮ್ನಿ ಮೇಲೆ 2.3 ಲಕ್ಷ ರೂ., ಟೊಯೋಟಾ, ಇನೋವಾದ ಕೆಲ ಕಾರುಗಳ ಮೇಲೆ 1.5 ಲಕ್ಷ ರೂ.ಗಳವರೆಗೆ ರಿಯಾಯಿತಿ ಘೋಷಿಸಲಾಗಿದೆ. ಮಹೀಂದ್ರಾದ ಎಕ್ಸ್​ಯುವಿ 400 ಎಲೆಕ್ಟ್ರಿಕ್ ಕಾರ್ ಮೇಲೆ 3 ಲಕ್ಷ ರೂ. ಡಿಸ್ಕೌಂಟ್ ನೀಡಲಾಗಿದೆ. ಮಹೀಂದ್ರಾ ಕಂಪನಿ ತನ್ನ ಎಕ್ಸ್​ಯುವಿ 700 ಮಾದರಿಗಳ ಮೇಲೆ ಈ ಜುಲೈನಿಂದಲೇ 2 ಲಕ್ಷ ರೂ.ಗಳ ರಿಯಾಯಿತಿ ನೀಡುತ್ತಿದೆ. ಇನ್ನುಳಿದಂತೆ ಮಾರುತಿ ಬಲೇನೋ 1.1 ಲಕ್ಷ ರೂ., ಮಾರುತಿ ಗ್ರಾ್ಯಂಡ್ ವಿತಾರಾ 1.1ರಿಂದ 1.4 ಲಕ್ಷ ರೂ., ಟೊಯೋಟಾ ಫಾರ್ಚುನರ್ 2 ಲಕ್ಷ ರೂ., ಜೀಪ್ ಕಂಪಾಸ್ 2.5 ಲಕ್ಷ ರೂ., ಎಂಜಿ ಗ್ಲೊಸ್ಟೆರ್ 4.9 ಲಕ್ಷ ರೂ. ರಿಯಾಯಿತಿಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿವೆ ಇನ್ನು, ಐಷಾರಾಮಿ ಕಾರುಗಳಾದ ಬಿಎಂಡಬ್ಲ್ಯುವಿನ ಎಕ್ಸ್5 ಸರಣಿ ಮೇಲೆ 7ರಿಂದ 10 ಲಕ್ಷ ರೂ., ಆಡಿ (ಎ4) ಮೇಲೆ 8 ಲಕ್ಷ ರೂ., ಕಿಯಾ ಇವಿ 6 ಮೇಲೆ 12 ಲಕ್ಷ ರೂ.ಗಳ ರಿಯಾಯಿತಿ ನೀಡಲಾಗುತ್ತಿದೆ.

ಏಕೆ ಹೀಗೆ?

  • ಗ್ರಾಹಕರ ಉತ್ಸಾಹ ಹಿಂದಿನ ವರ್ಷಗಳಷ್ಟು ಇಲ್ಲ. ಹೀಗಾಗಿ, ಹೊಸ ಕಾರುಗಳಿಗೆ ಬೇಡಿಕೆ ಗಣನೀಯವಾಗಿ ಕುಸಿದಿದೆ. ಗ್ರಾಹಕರು ಹೊಸ ಕಾರುಗಳ ಖರೀದಿಗೆ ಮುಂದಾಗುತ್ತಿಲ್ಲ.
  • ದೀಪಾವಳಿಗೆ ಮಾತ್ರವಲ್ಲ, ದೀಪಾವಳಿ ನಂತರವೂ ವರ್ಷಾಂತ್ಯದವರೆಗೆ (ಡಿಸೆಂಬರ್ 31) ರಿಯಾಯಿತಿ ಮುಂದುವರಿಯುವ ಸಾಧ್ಯತೆ ಇದೆ.
  • ಪ್ರತಿ ವರ್ಷ ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಸಾಮಾನ್ಯ ಮತ್ತು ಐಷಾರಾಮಿ ಕಾರುಗಳ ಬೆಲೆಯಲ್ಲಿ ಏರಿಕೆಯಾಗುತ್ತಿತ್ತು. ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ದರಗಳನ್ನು ಇಳಿಸಲಾಗಿದೆ ಅಥವಾ ರಿಯಾಯಿತಿ ಘೋಷಿಸಲಾಗಿದೆ. ಮಾರುಕಟ್ಟೆಯಲ್ಲಿ ಈ ಟ್ರೆಂಡ್ ಕೆಲ ತಿಂಗಳು ಮುಂದುವರಿಯಲಿದೆ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net