

ಶಿವಮೊಗ್ಗ: ಕೆರೆಗಳು ನಮ್ಮ ದೇಶದಲ್ಲಿರುವ ಕಣ್ಣುಗಳಿದ್ದಂತೆ. ಭಗೀರಥ ಪ್ರಯತ್ನ ಇಲ್ಲದಿದ್ದರೆ ಅಳಿವಿನಂಚಿಲ್ಲಿರುವ ಕೆರೆಗಳನ್ನು ಉಳಿಸಲು ಸಾಧ್ಯವೇ ಇಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ವಿದ್ಯಾನಗರದ ಚೈತನ್ಯಸೌಧದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಜಿಲ್ಲಾ ಜನಜಾಗೃತಿ ವೇದಿಕೆ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ನಮ್ಮೂರ ನಮ್ಮ ಕೆರೆ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಿದ ಕೆರೆ ಸಮಿತಿ ಪದಾಧಿಕಾರಿಕಾರಿಗಳ ಪ್ರೇರಣಾ ಸಭೆ ಉದ್ಘಾಟಿಸಿ ಮಾತನಾಡಿದರು.
ಕೆರೆಗಳನ್ನು ಹೇಗಿಡಬೇಕು ಎಂಬುದನ್ನು ಮರೆತಂತಹ ಪರಿಣಾಮವೇ ಅನೇಕ ಸಮಸ್ಯೆ ಎದುರಿಸುತ್ತಿದ್ದೇವೆ. ಗೊತ್ತೋ, ಗೊತ್ತಿಲ್ಲದೆಯೋ ನಾವೇ ಕೆರೆಗಳ ಸರ್ವನಾಶಕ್ಕೆ ದಾರಿ ಮಾಡಿಕೊಂಡಿದ್ದೇವೆ. ಕೆರೆ ಅಕ್ಕಪಕ್ಕ ಜಮೀನುಗಳ ಮಾಲೀಕರೇ ಒತ್ತುವರಿ ಮಾಡಿಕೊಂಡಿದ್ದಾರೆ. ಮನೆಗಳಲ್ಲಿನ ದೇವರ ಕೋಣೆಯಂತೆ ಕೆರೆಗಳನ್ನೂ ಚಿಕ್ಕದಾಗಿಸಲಾಗುತ್ತಿದೆ. ಆ ಮನಸ್ಥಿತಿ ಬದಲಾವಣೆ ಆಗಬೇಕಿದೆ ಎಂದರು.
ಸರ್ಕಾರ ಮಾಡಬೇಕಿರುವ ಕೆಲಸವನ್ನು ಪೂಜ್ಯ ಡಾ. ಶ್ರೀ ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿದ್ದಾರೆ. ಕೆರೆಗಳ ಅಭಿವೃದ್ಧಿ ಮಾತ್ರವಲ್ಲದೇ, ಅನೇಕ ಜನರ ಜೀವನವನ್ನೇ ಬದಲಿಸಿದ್ದಾರೆ. ಹೆಗ್ಗಡೆ ಅವರು ಕೆರೆ ಅಭಿವೃದ್ಧಿಗೆ ಶಕ್ತಿ ಕೊಡುತ್ತಿದ್ದು ಅವರ ಜತೆಗೆ ನಾವೂ ಹೆಜ್ಜೆ ಹಾಕಬೇಕಿದೆ. ಕರ್ತವ್ಯ ರೂಪದಲ್ಲಿ ಕೆರೆಗಳ ಅಭಿವೃದ್ಧಿ ಮಾಡಬೇಕಿದೆ. ಯೋಜನೆ ನಿಜವಾಗಿಯೂ ದೇವತ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಬಣ್ಣಿಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಯೋಜನೆ ಜಿಲ್ಲಾ ನಿರ್ದೇಶಕ ಜೆ.ಚಂದ್ರಶೇಖರ್ ಮಾತನಾಡಿ, ಜಾಗದ ಕೊರತೆಯಿಂದ ನಮಗೆ ಹೊಸದಾಗಿ ಕೆರೆಗಳ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹಾಗಾಗಿ ಹಿರಿಯರು ಸೃಷ್ಟಿ ಮಾಡಿರುವ ಕೆರೆಗಳನ್ನು ಉಳಿಸುವ ಕೆಲಸವೇ ನಮಗಿರುವ ದೊಡ್ಡ ಜವಾಬ್ದಾರಿ ಆಗಿದೆ. ಆ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರೈತರು, ಸ್ಥಳೀಯರನ್ನು ಒಳಗೊಂಡ ಕೆರೆ ಅಭಿವೃದ್ಧಿ ಸಮಿತಿ ರಚನೆ ಮಾಡಿಕೊಂಡು ಜಿಲ್ಲೆಯಲ್ಲಿ 42 ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಇದೀಗ ಅವುಗಳನ್ನು ಕೆರೆ ಅಭಿವೃದ್ಧಿ ಸಮಿತಿಗೆ ಹಸ್ತಾಂತರ ಮಾಡುವ ಜತೆಗೆ ಈ ಬಾರಿ ಕೆರೆಗಳ ಮಹತ್ವ ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.