

ಚನ್ನರಾಯಪಟ್ಟಣ: ಆಧುನಿಕತೆಗೆ ಸಿಲುಕಿ ಕೆರೆಗಳು ಮಾಯವಾಗುತ್ತಿವೆ. ನೀರಿನ ಉಳಿವಿಗಾಗಿ ಕೆರೆಗಳ ಉಳಿವು ಅತ್ಯಗತ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತಾಯ ತಿಳಿಸಿದರು.
ತಾಲೂಕಿನ ಶ್ರವಣಬೆಳಗೊಳ ಹೋಬಳಿ ಜುಟ್ಟನಳ್ಳಿಯಲ್ಲಿ ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಯೋಜನೆ ವತಿಯಿಂದ ಪುನಶ್ಚೇತನಗೊಂಡ ಜುಟ್ಟನಹಳ್ಳಿ ಕೆರೆಯ ನಾಮಫಲಕ ಅನಾವರಣಗೊಳಿಸಿ ಗ್ರಾಮ ಪಂಚಾಯಿತಿಗೆ ಕೆರೆಯನ್ನು ಹಸ್ತಾಂತರಿಸಿ ಮಾತನಾಡಿದರು.
ಅಂತರ್ಜಲ ಮಟ್ಟ ಕುಸಿತದ ಗಂಭೀರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ವೀ.ಹೆಗ್ಗಡೆ ಅವರು ಶಾಶ್ವತ ಪರಿಹಾರವೆಂಬಂತೆ 2016ರಲ್ಲಿ ನಮ್ಮೂರು ನಮ್ಮ ಕೆರೆ’ ಯೋಜನೆ ಪ್ರಾರಂಭಿಸಿದ್ದು, ಪ್ರಸ್ತುತ ರಾಜ್ಯಾದ್ಯಂತ ಯಶಸ್ವಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಕೆರೆಗಳೇ ನೀರನ್ನು ರಕ್ಷಿಸುವ ಸಾಧನಗಳಾಗಿವೆ. ತಾಲೂಕಿನಲ್ಲಿಯೂ ಕೆರೆಗಳ ಪುನಶೇತನ ಕಾರ್ಯಕ್ರಮ ನಡೆದಿದ್ದು, ಕಳೆದ ಮಳೆಗಾಲದಲ್ಲಿ ಎಲ್ಲ ಕೆರೆಗಳು ತುಂಬಿವೆ. ಇದರಿಂದಾಗಿ ಬತ್ತಿ ಹೋಗಿದ್ದ ಅನೇಕ ಕೊಳವೆ ಬಾವಿಗಳೂ ಮರುಜೀವ ಪಡೆದುಕೊಂಡಿವೆ. ರೈತರು ಕೃಷಿ ಕಾರ್ಯ ಪ್ರಾರಂಭಿಸಿದ್ದಾರೆ. ಜಾನುವಾರು, ಪ್ರಾಣಿ, ಪಕ್ಷಿಗಳ ನೀರಿನ ಸಮಸ್ಯೆಯೂ ನಿವಾರಣೆಯಾಗಿದೆ. ಮನುಷ್ಯ ಮಾತ್ರವಲ್ಲ ಬೇಸಿಗೆಯಲ್ಲಿ ಪ್ರಾಣಿ-ಪಕ್ಷಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಹೆಚ್ಚಿನ ತಾಪಮಾನದಿಂದ ರಕ್ಷಣೆ ಪಡೆಯಲು ನೈಸರ್ಗಿಕ ನೀರಿನ ಮೂಲಗಳಾದ ಕೆರೆಗಳೇ ಆಸರೆ ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಬೆಕ್ಕ ರಾಘವೇಂದ್ರ ಮಾತನಾಡಿ ಅಂತರ್ಜಮಟ್ಟ ವರ್ಷದಿಂದ ವರ್ಷಕ್ಕ ಪಾತಾಳಕ್ಕೆ ಕುಸಿಯುತ್ತಿದೆ. ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳುವಲ್ಲೂ ಕೆರೆಗಳ ಕೊಡುಗೆ ಪ್ರಮುಖವಾದುದು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಗ್ರಾಮೀಣ ಕೆರೆಗಳ ಪುನಶ್ಚತನಕ್ಕಾಗಿ ಹಮ್ಮಿಕೊಂಡಿರುವ ’ನಮ್ಮೂರು ನಮ್ಮ ಕೆರೆ’ ಯೋಜನೆಯ ಮೂಲಕ ಕೆರೆಗಳನ್ನು ಪುನಶ್ಚತನಗೊಳಿಸಿದ ನಂತರ, ಅಂತರ್ಜಲ ಮಟ್ಟ ಹೆಚ್ಚಾಗಿದೆಯಲ್ಲದೆ, ಕೆರೆ ಒತ್ತುವರಿ ಪ್ರಕರಣಗಳು ಬಹಳಷ್ಟು ತಗ್ಗಿವೆ. ಗ್ರಾಮೀಣ ಭಾಗಗಳಲ್ಲಿ ಕೆರೆಗಳ ಪುನಃಶ್ಚೇತನ ಮಾಡುವುದ ರಿಂದ ರೈತಾಪಿ ವರ್ಗಕ್ಕೆ ಅನುಕೂಲವಾಗುತ್ತದೆ. ಕೆರೆಯ ಆಳ ವರ್ಷದಿಂದ ಕಡಿಮೆಯಾಗುತ್ತಾ ಹೋದರೆ ಅದು ಕ್ರಮೇಣ ಹೂಳಿನಿಂದ ಮುಚ್ಚಿ ಹೋಗುತ್ತದೆ. ಪ್ರತಿ ವರ್ಷವೂ ಹೂಳೆತ್ತುವ ವ್ಯವಸ್ಥೆ ಮಾಡಬೇಕು. ಕೆರೆಯ ಜೈವಿಕ ವ್ಯವಸ್ಥೆಯನ್ನು ಕಾಪಾಡಬೇಕು ಎಂದು ಅವರು ಸಲಹೆ ನೀಡಿದರು.
ಕೆರೆ ಸಮಿತಿಯ ಅಧ್ಯಕ್ಷ ಕೃಷ್ಣೆಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ, ತಾಲೂಕಿನ ಯೋಜನಾಧಿಕಾರಿಗಳ ಸದಾಶಿವ ಕುಲಾಲ್, ಕೃಷಿ ಮೇಲ್ವಿಚಾರಕ ಮಹದೇವ ಪ್ರಸಾದ್, ವಲಯ ಮೇಲ್ವಿಚಾರಕ ಪರಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಗೀತಾಮಣಿ, ಅಶೋಕ್, ಗ್ರಾಮಸ್ಥರು ಹಾಗೂ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.