

ಶನಿವಾರಸಂತೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಶನಿವಾರಸಂತೆ ವಲಯದ ಹುಲಸೆ ಗ್ರಾಮದಲ್ಲಿ ಕೆರೆಯ ಹೂಳೆತ್ತುವ ಕಾಮಗಾರಿಗೆ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಚಾಲನೆ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಕಾರ್ಯಕ್ರಮಗಳಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ಒಂದಾಗಿದ್ದು, ಗ್ರಾಮದ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಗ್ರಾಮಸ್ಥರ ಸಹಭಾಗಿತ್ವದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ಧಿ ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸ್ಥಾಪಿಸಿದ ಗ್ರಾಮಾಭಿವೃದ್ಧಿ ಯೋಜನೆಯು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಕಾರ್ಯಕ್ರಮಗಳಿಗೆ ಕೈಜೋಡಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಭಗವಾನ್, ಸೋಮವಾರಪೇಟೆ ತಾಲೂಕು ಯೋಜನಾಧಿಕಾರಿ ರೋಹಿತ್ ಮಾತನಾಡಿದರು. ಈ ವೇಳೆ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಭರತ್, ಹಂಡ್ಲಿ ಗ್ರಾಪಂ ಉಪಾಧ್ಯಕ್ಷ ಅಶೋಕ್, ಗ್ರಾಪಂ ಸದಸ್ಯೆ ಉಷಾ, ಶನಿವಾರಸಂತೆ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಕ್ಷಿತ್, ಶನಿವಾರಸಂತೆ ವಲಯ ಮೇಲ್ವಿಚಾರಕ ನಾಗರಾಜ್, ಕೃಷಿ ಮೇಲ್ವಿಚಾರಕ ರಾಜಣ್ಣ, ಬೆಳಾರಳ್ಳಿ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಮತ್ತಿತರರಿದ್ದರು.