

ರಾಮನಗರ : ನಮ್ಮೂರಲ್ಲಿ ಒಂದು ಕಟ್ಟೆ ಇತ್ತು, ಆದರೆ ಕಾಣೆ ಆಗಿ ಬಹಳ ವರ್ಷ ಆಗಿದೆ. ಹುಡುಕಿ ಕೊಡಿ ಎಂದು ಅಧಿಕಾರಿಗಳಿಗೆ ಹೇಳಿದರೆ ಗಮನ ಹರಿಸುತ್ತಿಲ್ಲ... ಇದು ರಾಮನಗರ-ಚನ್ನಪಟ್ಟಣ ತಾಲೂಕುಗಳ ಗಡಿ ಗ್ರಾಮ ನಾಯಿದೊಳ್ಳೆ ಗ್ರಾಮಸ್ಥರ ಆರೋಪ.
ಚನ್ನಪಟ್ಟಣ ತಾಲೂಕಿನ ಗಡಿ ಗ್ರಾಮದ ನೀರಿನ ಸೆಲೆಯಾಗಿದ್ದ ಸಣ್ಣ ಕಟ್ಟೆಯೊಂದು ಕಾಣದಾಗಿದೆ. ಇದನ್ನು ಗುರ್ತಿಸಿಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ ಇದುವರೆಗೂ ಗಮನಹರಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಕೆರೆ ನಾಪತ್ತೆ?: ಗ್ರಾಮಸ್ಥರು ಆರೋಪಿಸುವಂತೆ ಗ್ರಾಮದ ಸರ್ವೇ ನಂ.25ರಲ್ಲಿ 7.18 ಎಕರೆ ವಿಸ್ತೀರ್ಣದ ಕಟ್ಟೆ ಇತ್ತು. ಪಹಣಿಯಲ್ಲಿಯೂ ನಮೂದು ಆಗಿದೆ. ಆದರೆ ಕೆಲ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಕಾರಣ ಕುರುಹು ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಕಳೆದ ಹಲವು ವರ್ಷಗಳಿಂದ ಚನ್ನಪಟ್ಟಣ ತಹಸೀಲ್ದಾರ್ ಕಚೇರಿಗೆ ಮನವಿ ಮಾಡಿ ಕಟ್ಟೆ ಪತ್ತೆ ಹಚ್ಚಿ ಗಡಿ ಗುರುತು ಮಾಡಿಕೊಡಿ ಎಂದು ಬೇಡಿಕೊಂಡರೂ ಯಾರೂ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೂ ಯಾವುದೇ ಉತ್ತರ ಬಂದಿಲ್ಲ.
ಕೆರೆ ಉಳಿಸೋರ‌್ಯಾರು?: ರಾಜ್ಯದಲ್ಲಿರುವ ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ ಒತ್ತುವರಿ ತೆರವುಗೊಳಿಸುವುದೂ ಸೇರಿ ಇತರ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಹ ಕೆರೆ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಇದರ ಹೊರತಾಗಿಯೂ ನಾಯಿದೊಳ್ಳೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ತಾಲೂಕು ಮತ್ತು ಜಿಲ್ಲಾಡಳಿತ ಮೌನ ವಹಿಸಿರುವುದಾದರೂ ಏಕೆ ಎನ್ನುವ ಪ್ರಶ್ನೆ ಮೂಡಿದ್ದು, ಕೆರೆ ಉಳಿಸುವ ಜವಾಬ್ದಾರಿ ಅಧಿಕಾರಿಗಳಿಗೆ ಇಲ್ಲವೇ ಎನ್ನುವ ಅನುಮಾನವೂ ಎದುರಾಗಿದೆ.
ಯೋಜನೆ ಕೈ ಬಿಟ್ಟರು?: ಲಭ್ಯ ಮಾಹಿತಿ ಪ್ರಕಾರ ಗ್ರಾಮದ ಕಟ್ಟೆಗೆೆ ಪೈಪ್ ಲೈನ್ ಮೂಲಕ ನೀರು ತುಂಬಿಸುವ ಯೋಜನೆಯನ್ನು ಈ ಮೊದಲು ಕೈಗೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ. ಆದರೆ ಕೆರೆ ಪತ್ತೆ ಹಚ್ಚಿ ಅದಕ್ಕೆ ನೀರು ತುಂಬಿಸುವ ಕೆಲಸ ಮಾಡಬೇಕಾದ ಅಧಿಕಾರಿಗಳು ಯೋಜನೆಯಿಂದಲೇ ಕೆರೆ ಕೈ ಬಿಡುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿ ಆಗಿದ್ದಾರೆ.
ಅಧಿಕಾರಿಗಳೇ ಗಮನಹರಿಸಿ : ಅಧಿಕಾರಿಗಳೇ ಈಗಲಾದರೂ ಎಚ್ಚೆತ್ತುಕೊಂಡು ನಾಯಿದೊಳ್ಳೆ ಗ್ರಾಮದಲ್ಲಿ ಒತ್ತುವರಿ ಕಾರಣದಿಂದ ನಾಪತ್ತೆ ಆಗಿದೆ ಎನ್ನಲಾದ ಕಟ್ಟೆಯನ್ನು ಹುಡುಕುವ ಕೆಲಸ ಮಾಡಬೇಕಿದೆ. ಈಗಾಗಲೇ ಕನ್ನಮಂಗಲ ಸುತ್ತಮುತ್ತ ಗ್ರಾಮದಲ್ಲಿ ಒತ್ತುವರಿ ಆಗಿದ್ದ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿರುವಂತೆ, ಕಂದಾಯ ಮತ್ತು ಸಣ್ಣ ನೀರಾವರಿ ಇಲಾಖೆ ಕೂಡಲೇ ತನಗೆ ಸೇರಬೇಕಾದ ಕಟ್ಟೆಯನ್ನು ಉಳಿಸಿಕೊಳ್ಳುವ ಜತೆಗೆ ಕೆರೆ ತುಂಬಿಸುವ ಕೆಲಸ ಮಾಡಬೇಕಿದೆ.
ನಮ್ಮೂರಿನ ಸಣ್ಣ ಕಟ್ಟೆ ಒತ್ತುವರಿ ಆಗಿದೆ. ಈ ಬಗ್ಗೆ ಚನ್ನಪಟ್ಟಣ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಗುರುತಿಸುವ ಕೆಲಸ ಮಾಡಲಿಲ್ಲ. ಇದರಿಂದ ಊರಿನ ನೀರಿನ ಮೂಲಕ್ಕೆ ಪೆಟ್ಟು ಬಿದ್ದಂತಾಗಿದೆ. ಜಿಲ್ಲಾಡಳಿತ ಕೂಡಲೇ ಕೆರೆ ಗುರುತಿಸಿಕೊಡಲಿ. ಧನಂಜಯ ಮತ್ತು ನಾಯಿದೊಳ್ಳೆ ಗ್ರಾಮಸ್ಥರು ನಾಯಿದೊಳ್ಳೆ ಗ್ರಾಮಸ್ಥರು ಮನವಿ ಮಾಡಿರುವುದು ಗಮನಕ್ಕೆ ಬಂದಿಲ್ಲ. ಈ ಸಂಬಂಧ ಮಾಹಿತಿ ಪಡೆದು ಪರಿಶೀಲಿಸಲಾಗುವುದು. ನಾಗೇಶ್ ತಹಸೀಲ್ದಾರ್, ಚನ್ನಪಟ್ಟಣ