ತಾಯಿ ದಯವಿಟ್ಟು ಇಲ್ಲಿಂದ ಹೋಗು! ಮಹಿಳೆಯ ಹೈಡ್ರಾಮ, ಕೈ ಮುಗಿದು ಬೇಡಿಕೊಂಡ ಪೊಲೀಸ್​ ಅಧಿಕಾರಿ

Police
Published on

ಭೋಪಾಲ್​: ರಸ್ತೆ ಅಪಘಾತಗಳನ್ನು ತಡೆಯುವ ಸಲುವಾಗಿ ಸಂಚಾರಿ ಪೊಲೀಸ್ ಅಧಿಕಾರಿಗಳು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸುವವರಿಗೆ ಭಾರಿ ದಂಡ ವಿಧಿಸಲಾಗುತ್ತದೆ. ಆದರೂ ವಾಹನ ಸವಾರರಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೆಲ್ಮೆಟ್ ರಹಿತ ವಾಹನ ಚಾಲನೆ, ಟ್ರಿಪಲ್ ರೈಡಿಂಗ್, ಸಿಗ್ನಲ್ ಜಂಪಿಂಗ್, ರಾಂಟ್ ರೂಟ್, ಅತಿ ವೇಗದ ಚಾಲನೆ ಹೀಗೆ ಹಲವು ನಿಯಮಗಳನ್ನು ಉಲ್ಲಂಘಿಸಿ ಅಪಘಾತಕ್ಕೆ ಕಾರಣವಾಗುತ್ತಿದ್ದಾರೆ. ಅದೇ ರೀತಿ ಮಹಿಳಾ ಶಿಕ್ಷಕಿಯೊಬ್ಬರು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದು, ದಂಡ ವಿಧಿಸಿದ್ದಕ್ಕೆ ಆಕೆ ಮಾಡಿದ ಹೈಡ್ರಾಮ ಕಂಡು ಪೊಲೀಸರೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಹೆಲ್ಮೆಟ್ ಇಲ್ಲದೆ ಮಹಿಳೆಯೊಬ್ಬರು ಸಿಕ್ಕಿಬಿದ್ದಿದ್ದಾರೆ. ಬಳಿಕ ಪೊಲೀಸ್ ಅಧಿಕಾರಿ ಆ ಮಹಿಳೆಗೆ ದಂಡದ ರಶೀದಿ ವಿಧಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಮಹಿಳೆ ಸ್ಥಳದಲ್ಲೇ ಜೋರಾಗಿ ಕೂಗಾಡಿದ್ದಾಳೆ. ರಸ್ತೆಯಲ್ಲೇ ವಿಚಿತ್ರ ವರ್ತಿಸಿ, ಅವಾಂತರ ಸೃಷ್ಟಿಸಿದಳು. ಆಕೆಯ ವರ್ತನೆಯನ್ನು ಕಂಡ ಪೊಲೀಸರು ಒಂದು ಕ್ಷಣ ಬೆಚ್ಚಿಬಿದ್ದರು. ನಂತರ ಪೊಲೀಸ್​​ ಅಧಿಕಾರಿ ಮಹಿಳೆಯನ್ನು ಸಮಾಧಾನಪಡಿಸಿ ಅಲ್ಲಿಂದ ಕಳುಹಿಸಿದರು. ಜಬಲ್​ಪುರದ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲಭ್ಯವಿರುವ ಮಾಹಿತಿ ಪ್ರಕಾರ ಹೆಲ್ಮೆಟ್ ಇಲ್ಲದೇ ಸಿಕ್ಕಿಬಿದ್ದ ಮಹಿಳೆ ಓರ್ವ ಶಿಕ್ಷಕಿ. ಪೊಲೀಸರು ವಿಧಿಸಿದ ದಂಡವನ್ನು ಪಾವತಿಸುವುದನ್ನು ತಪ್ಪಿಸಲು ಹೈಡ್ರಾಮ ಮಾಡಿದ್ದಾಳೆ ಎನ್ನಲಾಗಿದೆ. ಆರಂಭದಲ್ಲಿ ಮಹಿಳೆಯ ಮನವೊಲಿಸಲು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಆಕೆ ಕಿವಿಗೊಡಲಿಲ್ಲ. ಇದರಿಂದ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಮಹಿಳೆಯ ಮುಂದೆ ಕೈ ಜೋಡಿಸಿ ದಯವಿಟ್ಟು ನನ್ನನ್ನು ಕ್ಷಮಿಸಿ, ಇಲ್ಲಿಂದ ಹೊರಡಿ ಎಂದು ಬೇಡಿಕೊಂಡರು.

ಇತ್ತೀಚೆಗೆ ಮಹಿಳೆಯೊಬ್ಬರು 200ಕ್ಕೂ ಹೆಚ್ಚು ನಿಯಮ ಉಲ್ಲಂಘನೆಗಳೊಂದಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವುದು ಗೊತ್ತೇ ಇದೆ. ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಕೆಲ ವಾಹನ ಸವಾರರ ವರ್ತನೆ ಸಂಚಾರ ಪೊಲೀಸರಿಗೆ ತ್ರಾಸದಾಯಕವಾಗಿ ಪರಿಣಮಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net