More

    ಒಕ್ಕಲಿಗರ ಅಸ್ಮಿತೆಗೆ ಹೋರಾಟ; ಮತಕಣದಲ್ಲಿ ದೇವೇಗೌಡ, ಡಿ.ಕೆ.ಶಿವಕುಮಾರ್​ಗೆ ಅಗ್ನಿಪರೀಕ್ಷೆ

    ಶಿವಾನಂದ ತಗಡೂರು, ಬೆಂಗಳೂರು
    ಮೂರು ದಶಕಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗತವೈಭವ ಮೆರೆದಿದ್ದ ಜೆಡಿಎಸ್​ಗೆ ಲೋಕಸಭೆ ಚುನಾವಣೆಯಲ್ಲಿ ನಿಜವಾದ ಅಗ್ನಿ ಪರೀಕ್ಷೆ ಎದುರಾಗಿದೆ. ಒಕ್ಕಲಿಗರ ಅಸ್ಮಿತೆಯನ್ನು ಜೆಡಿಎಸ್​ನಲ್ಲಿಯೇ ಉಳಿಸಿಕೊಳ್ಳಲು ಈ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅವಿರತ ಹೋರಾಟ ನಡೆಸುತ್ತಿದ್ದರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಡ್ಡು ಹೊಡೆದು ನಿಂತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೈಹಿಡಿದಿದ್ದ ಒಕ್ಕಲಿಗರು ಲೋಕಸಮರದಲ್ಲಿ ಯಾರ ಪರ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿ ಜತೆಗೆ ಕೈ ಜೋಡಿಸಿರುವ ಜೆಡಿಎಸ್ ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಇನ್ನಿಲ್ಲದ ಶ್ರಮ ಹಾಕುತ್ತಿದೆ. ತನ್ನ ಪಾಲಿಗೆ ಬಂದಿರುವ ಮೂರು ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವುದು ಅದಕ್ಕೆ ಸವಾಲಾಗಿದೆ.

    ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 16 ಸ್ಥಾನ ಗೆದ್ದಿದ್ದು ಈ ತನಕ ಇರುವ ದಾಖಲೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸಂಸದರನ್ನು ಗೆಲ್ಲಿಸಿಕೊಟ್ಟಿದ್ದ ದೇವೇಗೌಡರಿಗೆ ಪ್ರಧಾನಮಂತ್ರಿ ಹುದ್ದೆಗೇರುವ ಅವಕಾಶವೂ ಲಭ್ಯವಾಗಿತ್ತು. ಅದಾದ ಬಳಿಕ 1999ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಿಕೊಳ್ಳುವುದು ಇರಲಿ, ಸ್ವತಃ ದೇವೇಗೌಡರೇ ಹಾಸನ ಕ್ಷೇತ್ರದಲ್ಲಿ ಸೋತು ಹೋಗಿದ್ದರು. 2004ರ ವಿಧಾನಸಭೆ ಚುನಾವಣೆಯಲ್ಲಿ ಪುಟಿದೆದ್ದ ಜೆಡಿಎಸ್ 58 ಸ್ಥಾನ ಗೆಲ್ಲುವ ಮೂಲಕ ಶೇ.20 ಮತ ಪಡೆದು ರಾಜಕೀಯ ಅಸ್ತಿತ್ವವನ್ನು ಪುನರ್ ಸ್ಥಾಪಿಸಿಕೊಂಡಿತ್ತು.

    2004ರಲ್ಲಿ ಕಾಂಗ್ರೆಸ್ ಜತೆಗೆ, 2006ರಲ್ಲಿ ಬಿಜೆಪಿ ಜತೆ ಅಧಿಕಾರ ಹಂಚಿಕೊಂಡು ತನ್ನದೇ ರಾಜಕೀಯ ದಾಳ ಉರುಳಿಸಿದ್ದ ಜೆಡಿಎಸ್, 2008ರಲ್ಲಿ 28 ಶಾಸಕರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 2013ರಲ್ಲಿ ಶಕ್ತಿಯನ್ನು ಮತ್ತೆ ಹೆಚ್ಚಿಸಿಕೊಂಡ ಜೆಡಿಎಸ್ ಶೇ.19.9 ಮತ ಪಡೆಯುವ ಮೂಲಕ 40 ಶಾಸಕರನ್ನು ಗೆಲ್ಲಿಸಿಕೊಂಡಿತ್ತು. 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶೇ.18.3 ಮ ತ ಪಡೆದ ಜೆಡಿಎಸ್ 37 ಸ್ಥಾನಗಳನ್ನು ಪಡೆಯಲು ಶಕ್ತವಾಗಿತ್ತು. ಆದರೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆದಷ್ಟು ಹಿನ್ನಡೆ ಹಿಂದೆ ಯಾವಾಗಲೂ ಆಗಿರಲಿಲ್ಲ. ಜೆಡಿಎಸ್ ಮತಗಳಿಕೆ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿದ್ದು ದೊಡ್ಡ ಆಘಾತವನ್ನೆ ನೀಡಿತು. ಶೇ.13.29 ಮತ ಪಡೆದ ಜೆಡಿಎಸ್ ಪಡೆದಿದ್ದು ಕೇವಲ 19 ಸ್ಥಾನ ಮಾತ್ರ.

    ಮತ್ತೆ ಪುಟಿದೇಳುವ ತವಕ: ಜೆಡಿಎಸ್ ಇನ್ನಷ್ಟು ಪ್ರಪಾತಕ್ಕೆ ಬೀಳುವುದನ್ನು ತಡೆಯಲು ಮುಂದಾದ ಗೌಡರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಕೈಜೋಡಿಸಿದ್ದಾರೆ. ತನ್ನ ರಾಜಕೀಯ ವೈರಿಯೇ ಆಗಿರುವ ಡಿ.ಕೆ.ಶಿವಕುಮಾರ್ ಎದುರು ಸವಾಲು ಹಾಕಿ ಪುಟಿದೇಳುವ ತವಕದಲ್ಲಿರುವ ಜೆಡಿಎಸ್​ಗೆ ಪರವಾಗಿ ಒಕ್ಕಲಿಗ ಅಸ್ಮಿತೆಯನ್ನು ಹಿಡಿದಿಟ್ಟುಕೊಳ್ಳಲು ದೇವೇಗೌಡರು ಅವಿರತ ಶ್ರಮ ಹಾಕುತ್ತಿದ್ದಾರೆ.

    ಶಕ್ತಿ ಕೇಂದ್ರದಲ್ಲಿ ಕುಂದಿದ ವರ್ಚಸ್ಸು: ಜೆಡಿಎಸ್ ಗಟ್ಟಿಯಾಗಿ ನೆಲೆಯೂರಿದ್ದ ಹಾಸನ, ಮಂಡ್ಯ, ರಾಮನಗರ ಸೇರಿ ಹಳೆ ಮೈಸೂರು ಭಾಗದಲ್ಲಿ ಗಣನೀಯವಾಗಿ ಸ್ಥಾನ ಕಡಿಮೆಯಾಗಿದ್ದು ದೊಡ್ಡ ಗೌಡರನ್ನು ಚಿಂತೆಗೀಡುಮಾಡಿತ್ತು. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಹೊರತುಪಡಿಸಿ ಇನ್ನುಳಿದ ಎಲ್ಲ ಸ್ಥಾನಗಳನ್ನು ಜೆಡಿಎಸ್ ಕಳೆದುಕೊಂಡಿತು. ರಾಮನಗರ ಜಿಲ್ಲೆಯಲ್ಲಿ ಚನ್ನಪಟ್ಟಣ ಹೊರತುಪಡಿಸಿ ಯಾವ ಸ್ಥಾನವನ್ನೂ ಗೆಲ್ಲಲು ಆಗಿರಲಿಲ್ಲ. ಹಾಸನ ಜಿಲ್ಲೆಯಲ್ಲಿ ಮೂರು ಶಾಸಕರಷ್ಟೆ ಗೆದ್ದರು. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಜೆಡಿಎಸ್​ಗೆ ದೊಡ್ಡ ಹಿನ್ನಡೆಯಾಗಿದ್ದನ್ನು ಅರಗಿಸಿಕೊಳ್ಳುವುದು ಕಷ್ಟವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts