

Lady Smoking: ರೈಲಿನಲ್ಲಿ, ಸಾರ್ವಜನಿಕ ಬಸ್ನಲ್ಲಿ ಧೂಮಪಾನ ಮಾಡುವುದು ಶಿಕ್ಷಾರ್ಹ ಎಂದು ಎಚ್ಚರಿಕೆಯ ಸೂಚನ ಫಲಕಗಳು ಹಾಕಿದ್ದರೂ ನಿಯಮ ಉಲ್ಲಂಘಿಸುವ ಮಂದಿಗೇನು ಕಮ್ಮಿ ಇಲ್ಲ. ಕಾನೂನುಗಳು ಜಾರಿಯಲ್ಲಿದ್ದರೂ, ಅದನ್ನು ನಿರ್ಲಕ್ಷಿಸಿ, ಇತರರಿಗೆ ತೊಂದರೆ ಕೊಡುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲೊಬ್ಬಳು ಮಹಿಳೆ ಕೂಡ ಅದೇ ರೀತಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದು, ಎಸಿ ಕೋಚ್ ರೈಲಿನಲ್ಲಿ ಸಿಗರೇಟ್ ಸೇದಿದ್ದಾಳೆ.
ರೈಲಿನ ಎಸಿ ಕೋಚ್‌ನಲ್ಲಿ ಮಹಿಳೆ ಧೂಮಪಾನ ಮಾಡುತ್ತಿರುವ ದೃಶ್ಯ ಸಹ ಪ್ರಯಾಣಿಕರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಸಿ ಬೋಗಿಯಲ್ಲಿ ಸಿಗರೇಟ್ ಹಚ್ಚಿದ್ದಲ್ಲದೇ, ಯಾರಿಗೂ ಹೆದರದೆ ಹೊಗೆ ಬಿಟ್ಟಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಆಕೆ, ನೀವು ಮಾಡುತ್ತಿರುವುದು ತಪ್ಪು ಎಂದು ಬುದ್ಧಿ ಹೇಳಿದ ಪ್ರಯಾಣಿಕರ ವಿರುದ್ಧ ಮನಬಂದಂತೆ ಚೀರಾಡಿದ್ದಾಳೆ. ತನ್ನ ವಿಡಿಯೋ ಮಾಡಿಕೊಂಡ ಕಾರಣಕ್ಕೆ, ಪ್ರಯಾಣಿಕರ ಮೇಲೆ ಆಕ್ರೋಶ ಹೊರಹಾಕಿದ್ದಾಳೆ.
'ನೀವು ನನ್ನ ವಿಡಿಯೊ ರೆಕಾರ್ಡ್ ಮಾಡಿದ್ದೀರಿ. ಇದು ಸರಿಯಲ್ಲ. ರೆಕಾರ್ಡ್ ಮಾಡಬೇಡಿ. ಅದನ್ನು ಡಿಲೀಟ್ ಮಾಡಿ' ಎಂದು ಮೊದಲಿಗೆ ಹೇಳಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಸಹ ಪ್ರಯಾಣಿಕರು, 'ನೀವು ಸಿಗರೇಟ್ ಹೊಡೆಯುವುದಾದರೆ, ಒಳಗೆ ಅಲ್ಲ. ಹೊರಗೆ ಹೋದಮೇಲೆ ಮಾಡಿ' ಎಂದು ಬುದ್ಧಿ ಹೇಳಿದ್ದಾರೆ. ವಾಗ್ವಾದ ತಾರಕಕ್ಕೇರಿದ್ದೆ ತಡ, 'ನಾನು ನಿಮ್ಮ ಹಣದಲ್ಲಿ ಧೂಮಪಾನ ಮಾಡ್ತಿಲ್ಲ. ಈ ರೈಲು ನಿಮ್ಮದಲ್ಲ. ಬೇಕಾದ್ರೆ ಪೊಲೀಸರಿಗೆ ಕಾಲ್ ಮಾಡಿ' ಎಂದು ಸೊಕ್ಕಿನ ಮಾತುಗಳನ್ನಾಡಿದ್ದಾಳೆ. ಘಟನೆಯ ವಿಡಿಯೋ ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).