ಬೇಡಿಕೊಂಡರೂ ಸಿಗದ ಬೆಡ್​; ಕಾರಿನಲ್ಲೇ ಕೊನೆಯುಸಿರೆಳೆದ ಸೋಂಕಿತೆ

car
Published on

ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಆಸ್ಪತ್ರೆಗಳೆಲ್ಲ ಭರ್ತಿಯಾಗುತ್ತಿದ್ದು, ಸೋಂಕಿತರಿಗೆ ಬೆಡ್​ ಇಲ್ಲದಂತಾಗುತ್ತಿದೆ. ಹಲವಾರು ಸೋಂಕಿತರು ಸೂಕ್ತ ಸಮಯಕ್ಕೆ ಬೆಡ್​ ಸಿಗದೆಯೇ ಸಾವನ್ನಪ್ಪುತ್ತಿರುವುದು ಬವರದಿಯಾಗುತ್ತಿದೆ. ಅದೇ ರೀತಿ ನೋಯ್ಡಾದ ಮಹಿಳೆಯೊಬ್ಬಳು ಬೆಡ್​ ಸಿಗದೆಯೇ ಕಾರಿನಲ್ಲೇ ಕೊನೆಯುಸಿರೆಳೆದಿರುವ ಘಟನೆ ಗುರುವಾರ ನಡೆದಿದೆ.

ಜಾಗೃತಿ ಗುಪ್ತಾ (35) ಹೆಸರಿನ ಮಹಿಳೆ ನೊಯ್ಡಾದಲ್ಲಿ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದರು. ಆಕೆಯ ಗಂಡ ಮತ್ತು ಮಕ್ಕಳು ಮಧ್ಯ ಪ್ರದೇಶದಲ್ಲಿ ವಾಸವಿದ್ದಾರೆ. ಇತ್ತೀಚೆಗೆ ಜಾಗೃತಿಗೆ ಕರೊನಾ ಸೋಂಕು ತಗುಲಿದ್ದು, ಗುರುವಾರದಂದು ಅನಾರೋಗ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಆಕೆಯ ಮನೆಯ ಮಾಲೀಕ ಅವಳನ್ನು ಸರ್ಕಾರಿ ನಿಯಂತ್ರಿತ ಜಿಐಎಂಎಸ್​ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆಕೆಯನ್ನು ಕಾರಿನಲ್ಲೇ ಕೂರಿಸಿ, ಆಸ್ಪತ್ರೆ ಸಿಬ್ಬಂದಿಯಲ್ಲಿ ಒಂದು ಬೆಡ್​ ಕೊಡಿ ಎಂದು ಗೋಗರೆದಿದ್ದಾನೆ.

ಸತತ ಮೂರು ಗಂಟೆ ಕಾದರೂ ಆಕೆಗೆ ಬೆಡ್​ ಸಿಕ್ಕಿಲ್ಲ. ಅಷ್ಟು ಹೊತ್ತು ಕಾರಿನಲ್ಲೇ ನರಳಾಡಿದ ಜಾಗೃತಿ ಮಧ್ಯಾಹ್ನ 3.30 ಸಮಯಕ್ಕೆ ಕೊನೆಯುಸಿರೆಳೆದಿದ್ದಾಳೆ. ಅದಾದ ನಂತರ ಮನೆ ಮಾಲೀಕ ಆಸ್ಪತ್ರೆಯ ಸಿಬ್ಬಂದಿಯಲ್ಲಿ ಆಕೆ ಉಸಿರಾಡುತ್ತಿಲ್ಲ ಎಂದು ತಿಳಿಸಿದ್ದಾನೆ. ತಕ್ಷಣ ಕಾರಿನ ಬಳಿ ಬಂದ ಸಿಬ್ಬಂದಿ, ಜಾಗೃತಿ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net